ಮತ್ತೊಮ್ಮೆ ಜಗತ್ತನ್ನು ಕಾಡಲಿದ್ಯಾ ಕೊರೋನಾ ರೂಪಾಂತರಿ? – ಚೀನಾದ ಖ್ಯಾತ ವೈರಾಣು ತಜ್ಞೆ ಎಚ್ಚರಿಕೆ!
ಇಡೀ ಜಗತ್ತನ್ನು ಕಾಡಿದ್ದ ಕೊರೋನಾ ವೈರಸ್ ಮತ್ತೊಂದು ರೂಪದಲ್ಲಿ ಜನ್ಮತಾಳಲಿದ್ಯಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಕಾರಣ ಚೀನಾದ ಖ್ಯಾತ ವೈರಾಣು ತಜ್ಞೆ ಶಿ ಝೆಂಗ್ಲಿ ನೀಡಿದ ಎಚ್ಚರಿಕೆ. ಭವಿಷ್ಯದಲ್ಲಿ ಕೊರೊನಾ ವೈರಸ್‌ನ ಹೊಸ ತಳಿಗಳು ಸಾಂಕ್ರಾಮಿಕ ಸೃಷ್ಟಿಸಬಹುದು ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಇದು ವಿಶ್ವದಾದ್ಯಂತ ಜನರನ್ನು ಚಿಂತೆಗೀಡು ಮಾಡುವಂತೆ ಮಾಡಿದೆ.
ಪ್ರಾಣಿಗಳಿಂದ ಮಾನವರಿಗೆ ಹರಡುವ ವೈರಾಣುಗಳ ಕುರಿತಾದ ಸಂಶೋಧನೆಗಳಿಂದಲೇ ಜಗತ್ತಿನ ಗಮನ ಸೆಳೆದಿರುವ ಶಿ ಝೆಂಗ್ಲಿ, ಬಾವಲಿ ಮಹಿಳೆ ಎಂದೇ ಪ್ರಖ್ಯಾತರಾಗಿದ್ಧಾರೆ. ಇದೀಗ ಭವಿಷ್ಯದಲ್ಲಿ ಕೋವಿಡ್‌ನ ಮಾರಣಾಂತಿಕ ತಳಿಗಳು ವಿಶ್ವಾದ್ಯಂತ ಹರಡುವ ಭೀತಿ ಇದ್ದು, ಜಾಗತಿಕ ಸಮುದಾಯ ಈ ವೈರಸ್ ವಿರುದ್ಧ ಹೋರಾಡಲು ಈಗಿನಿಂದಲೇ ಸಿದ್ದತೆ ಆರಂಭಿಸಬೇಕು ಎಂದು ಶಿ ಝೆಂಗ್ಲಿ ಮುನ್ನೆಚ್ಚರಿಕೆ ನೀಡಿದ್ಧಾರೆ.
ಇದನ್ನೂ ಓದಿ: ಕೋವಿಡ್‌ನಿಂದ ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಹೆಚ್ಚಿದ ಮಧುಮೇಹ..! – ಅಧ್ಯಯನದಿಂದ ಆತಂಕಕಾರಿ ವಿಚಾರ ಬಹಿರಂಗ
ಚೀನಾದಲ್ಲಿ ಇರುವ ವುಹಾನ್ ವೈರಾಣು ಸಂಶೋಧನಾ ಸಂಸ್ಥೆಯಲ್ಲಿ ಭವಿಷ್ಯದ ಸೋಂಕುಕಾರಕ ರೋಗಗಳ ಕುರಿತಾದ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿರುವ ಶಿ ಝೆಂಗ್ಲಿ, ಕಳೆದ 20 ವರ್ಷಗಳಿಂದ ಕೊರೊನಾ ವೈರಸ್ ಹಾಗೂ ಅದರ ತಳಿಗಳ ಕುರಿತಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಈ ಸಂಶೋಧನೆಗಳ ಪ್ರಕಾರ ಕೊರೊನಾ ವೈರಸ್‌ನ 40 ತಳಿಗಳು ಮಾನವನಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ಈ ಪೈಕಿ ಅರ್ಧದಷ್ಟು ವೈರಾಣುಗಳು ಮಾರಣಾಂತಿಕ ಆಗಬಲ್ಲಷ್ಟು ಶಕ್ತಿಯುತವಾಗಿವೆ. ಈ ಪೈಕಿ ಈವರೆಗೆ ಕೇವಲ 6 ತಳಿಗಳು ಮಾತ್ರ ವಿಶ್ವಕ್ಕೆ ಪರಿಚಿತವಾಗಿವೆ. ಇನ್ನು ಮೂರು ವೈರಾಣು ತಳಿಗಳು ಪ್ರಾಣಿಗಳಲ್ಲಿ ರೋಗ ಸೃಷ್ಟಿಸಿ ಪತ್ತೆಯಾಗಿವೆ. ಹೀಗಾಗಿ, ಭವಿಷ್ಯದಲ್ಲಿ ಮಾನವರಿಗೆ ಮಾರಣಾಂತಿಕ ಆಗಬಲ್ಲ ಹಲವು ಕೊರೊನಾ ವೈರಸ್ ತಳಿಗಳು ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.
ಈ ಸಂಶೋಧನಾ ವರದಿಯಲ್ಲಿ ವಿವಿಧ ವೈರಾಣುಗಳ ತಳಿ ಅವಲೋಕನ, ಜನ ಸಮುದಾಯದ ಮೇಲೆ ಬೀರುವ ಪರಿಣಾಮ, ಅನುವಂಶಿಕ ವಿಭಿನ್ನತೆ, ರೋಗಕ್ಕೆ ಒಡ್ಡಿಕೊಳ್ಳುವ ಜೀವಿಗಳಲ್ಲಿ ಈ ಹಿಂದೆ ಕೋವಿಡ್ ವಿರುದ್ಧ ಹೋರಾಡಲು ಇದ್ದ ಶಕ್ತಿಯ ಕುರಿತಾಗಿ ಅವಲೋಕನ ನಡೆಸಲಾಗಿದೆ. ಎಲ್ಲಕ್ಕಿಂತಾ ಪ್ರಮುಖವಾಗಿ ಪ್ರಾಣಿಗಳಿಂದ ಮಾನವರಿಗೆ ಹರಡುವಿಕೆಯ ಸಾಮರ್ಥ್ಯವನ್ನೂ ಪರೀಕ್ಷಿಸಲಾಗಿದೆ.
ಕೊರೊನಾ ವೈರಾಣು ಬಾವಲಿಗಳ ಮೂಲಕ ಮನುಷ್ಯನಿಗೆ ಹರಡಬಹುದಾಗಿದೆ. ದಂಶಕಗಳು, ಒಂಟೆ, ಪುನುಗನ ಬೆಕ್ಕು, ಹಂದಿ ಹಾಗೂ ಚಿಪ್ಪುಹಂದಿ ಮೂಲಕವೂ ವೈರಾಣುಗಳು ಮನುಷ್ಯನನ್ನು ತಲುಪುವ ಸಾಧ್ಯತೆಗಳಿವೆ. ಹೀಗಾಗಿ, ಅತ್ಯಂತ ಅಪಾಯಕಾರಿ ವೈರಾಣು ತಳಿ ಹಾಗೂ ಉಪ ತಳಿಗಳ ಬಗ್ಗೆ ನಿಗಾ ವಹಿಸುವ ಅಗತ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.