ನಮ್ಮ ಮೆಟ್ರೋ ಹಳಿಯೇರಲು ಚೀನಾ ರೈಲು ಸಿದ್ಧ ! – ಭಾರತಕ್ಕೆ ರೈಲುಗಳ ರವಾನೆ ಯಾವಾಗ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟಾಫಿಕ್ ಸಮಸ್ಯೆ ಸರಿದೂಗಿದಲು ರಾಜ್ಯ ಸರ್ಕಾರ ಸದಾ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇದೆ. ಈಗಾಗಲೇ ನಗರದ ಹಲವು ಕಡೆಗಳಲ್ಲಿ ನಮ್ಮ ಮೆಟ್ರೋ ಆರಂಭಿಸಿದ್ದು, ಲಕ್ಷಾಂತರ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಮೆಟ್ರೋ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಮೆಟ್ರೊ ಕೋಚ್‌ಗಳ ಪೂರೈಕೆ ಜವಾಬ್ದಾರಿ ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ) ಗೆ ನೀಡಲಾಗಿದೆ. ಇದರ ಭಾಗವಾಗಿ ಎರಡು ರೈಲುಗಳನ್ನು (12 ಬೋಗಿ) ಸಿದ್ಧಗೊಳಿಸಿದ್ದು, ಶೀಘ್ರ ಭಾರತಕ್ಕೆ ರವಾನಿಸುವ ನಿರೀಕ್ಷೆ ಇದೆ.
ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈ ವರ್ಷಾಂತ್ಯಕ್ಕೆ ಸಂಚಾರ ಆರಂಭಿಸಬೇಕಿತ್ತು. ಆದರೆ, ರೈಲು ಬೋಗಿಗಳ ಲಭ್ಯತೆಯ ಕೊರತೆ ಸಂಚಾರವನ್ನು ವಿಳಂಬವಾಗಿಸುತ್ತಿದೆ. ಇದೀಗ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಸಿದ್ದಪಡಿಸಿರುವ ರೈಲುಗಳನ್ನು ಹಳದಿ ಮಾರ್ಗಕ್ಕೆ ಬಳಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಚೀನಾದ ಸಿಆರ್‌ಆರ್‌ಸಿಯ ಫ್ಯಾಕ್ಟರಿ ಘಟಕಕ್ಕೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಇತ್ತೀಚೆಗೆ ಭೇಟಿ ಕೊಟ್ಟು, ರೈಲುಗಳನ್ನು ವೀಕ್ಷಿಸಿದ್ದಾರೆ. ರೈಲುಗಳೊಂದಿಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಇರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಡ್ರೈವರ್ ಇಲ್ಲದೇ ಓಡುತ್ತೆ ನಮ್ಮ ಮೆಟ್ರೋ! – ಹೊಸ ಸೇವೆ ಶೀಘ್ರದಲ್ಲೇ ಆರಂಭ!
ಸಿಆರ್‌ಆರ್‌ಸಿ, ಕೋಲ್ಕತ್ತಾದ ಬಳಿ ತನ್ನ ಉತ್ಪಾದನಾ ಘಟಕವನ್ನು ಹೊಂದಿರುವ ಟಿಟಾಗರ್ ವ್ಯಾಗನ್ಸ್ ಮೂಲಕ ಈ ಮಾರ್ಗಕ್ಕಾಗಿ 216 ಕೋಚ್‌ಗಳನ್ನು (36 ರೈಲು ಸೆಟ್‌ಗಳು) ಪೂರೈಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಸಿಆರ್‌ಆರ್‌ಸಿ ಸಂಸ್ಥೆಯು ಆಗಸ್ಟ್‌ನಲ್ಲೇ ಆರು ಬೋಗಿ ರೈಲುಗಳ ಎರಡು ಸೆಟ್‌ಗಳನ್ನು ಪೂರೈಸುವ ಭರವಸೆ ನೀಡಿತ್ತು. ಚೀನಾದಿಂದ ಎರಡು ರೈಲು ಬಂದರೆ, ಇನ್ನು 34 ರೈಲುಗಳನ್ನು ಟಿಟಾಗರ್ ಕಂಪನಿ ಪೂರೈಕೆ ಮಾಡಲಿದೆ. 216 ಕೋಚ್‌ಗಳ ಪೈಕಿ, 126 ಕೋಚ್‌ಗಳನ್ನು ನೇರಳೆ ಮತ್ತು ಹಸಿರು ಮಾರ್ಗಕ್ಕೆ ಮೀಸಲಿಡಲಾಗಿದ್ದು, 90 ಬೋಗಿಗಳನ್ನು ಹಳದಿ ಮಾರ್ಗಕ್ಕೆ ಮೀಸಲಿಡಲಾಗಿದೆ.
2019ರಲ್ಲಿ ಸಿಆರ್‌ಸಿಸಿ 216 ಕೋಚ್‌ಗಳಿಗೆ 1,578 ಕೋಟಿ ರೂಪಾಯಿಗಳಿಗೆ ಬಿಡ್ ಮಾಡಿತ್ತು. ಇದು ಬಿಎಂಆರ್‌ಸಿಎಲ್ ಅಂದಾಜಿಗಿಂತ 100 ಕೋಟಿ ರೂಪಾಯಿ ಕಡಿಮೆಯಾಗಿದೆ. ಬಿಇಎಂಎಲ್ 1,996 ಕೋಟಿ ರೂ. ಬಿಡ್ ಮಾಡಿತ್ತು. ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಕಂಪನಿಯು ವಿಫಲವಾದ ಹಿನ್ನೆಲೆಯಲ್ಲಿ ರೈಲು ಬೋಗಿಗಳ ವಿತರಣೆ ಸ್ಥಗಿತಗೊಳಿಸಿತು. ಬಳಿಕ ಕಂಪನಿಯು ಕೋಲ್ಕತ್ತಾದ ಟಿಟಾಗರ್ ವ್ಯಾಗನ್ಸ್ ಲಿಮಿಟೆಡ್ (ಟಿಡಬ್ಲ್ಯುಎಲ್) ಜತೆ ಒಪ್ಪಂದ ಮಾಡಿಕೊಂಡು ಬೋಗಿಗಳನ್ನು ನಿರ್ಮಿಸುತ್ತಿದೆ.
ಚಾಲಕ ರಹಿತ ರೈಲು ಸೇವೆಗೆ ಸಿದ್ಧತೆ
ಆರ್.ವಿ.ರಸ್ತೆ- ಬೊಮ್ಮಸಂದ್ರ ನಡುವಿನ ರೀಚ್ -5 ಮಾರ್ಗದಲ್ಲಿ ತಲಾ ಆರು ಬೋಗಿಗಳ 12 ರೈಲುಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೊ ಓಡಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಕಮ್ಯುನಿಕೇಷನ್ ಬೇಸ್ಡ್ ಟ್ರೇನ್ ಕಂಟ್ರೊಲ್ ಸಿಗ್ನಲಿಂಗ್ ಸಿಸ್ಟಂ ತಂತ್ರಜ್ಞಾನವನ್ನು ಎರಡನೇ ಹಂತದ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತದೆ. ರೈಲು ಸಂಚಾರವನ್ನು ನಿಯಂತ್ರಣ ಕೊಠಡಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ.
ಮಾರ್ಚ್‌ನಿಂದ ಹಳದಿ ಮಾರ್ಗದಲ್ಲಿ ಸಂಚಾರ
ಕಳೆದ ವಾರ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪಶ್ಚಿಮ ಬಂಗಾಳದಲ್ಲಿರುವ ಮೆಟ್ರೊ ರೈಲು ಬೋಗಿ ಪೂರೈಕೆ ಮಾಡುವ ಟಿಟಾಗಾರ್ ಘಟಕಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಿಆರ್‌ಆರ್‌ಸಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು. ಕಸ್ಟಮ್ಸ್, ವೀಸಾ ಮತ್ತು ಇತರ ಸವಾಲುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಗಮನಕ್ಕೆ ತಂದು, ಸಮಯಕ್ಕೆ ಸರಿಯಾಗಿ ರೋಲಿಂಗ್ ಸ್ಟಾಕ್ ತಲುಪಿಸಲು ಟಿಟಾಗರ್ ತಂಡಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಈ ಬಗ್ಗೆ ಎಕ್ಸ್ (ಟ್ವಿಟರ್)ನಲ್ಲಿ ಅವರು ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷ ಫೆಬ್ರವರಿ ವೇಳೆಗೆ ಎಲ್ಲಾ ರೈಲುಗಳು ಲಭ್ಯವಾಗಲಿದ್ದು, ಏಪ್ರಿಲ್ ಬಳಿಕ ಹಳದಿ ಮಾರ್ಗದಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಹೇಳಿವೆ.