ಯುವಕರಿಲ್ಲದೆ ಕಂಗೆಟ್ಟ ಚೀನಾದಿಂದ ಹೊಸ ಪ್ರಯೋಗ – ವಯಸ್ಸಾದವರನ್ನೇ ಮತ್ತಷ್ಟು ದುಡಿಸಲು ಪ್ಲ್ಯಾನ್!
ಹೆಚ್ಚುತ್ತಿರುವ ಜನಸಂಖ್ಯೆಯನ್ನ ತಡೆಯಲು ಚೀನಾ ದೇಶದಲ್ಲಿ ಜಾರಿಗೆ ತಂದಿದ್ದ ‘ಒಂದೇ ಮಗು’ ನೀತಿಯಿಂದಾಗಿ ಈಗ ವಯಸ್ಸಾದವರೇ ತುಂಬಿಹೋಗಿದ್ದಾರೆ. ಹಿರಿಯರ ಸಂಖ್ಯೆ ವಿಪರೀತ ಹೆಚ್ಚಳವಾಗಿದೆ. ಇದಕ್ಕೆ ಪರಿಹಾರವಾಗಿ ಅಲ್ಲಿನ ಸರ್ಕಾರ ಹತ್ತಾರು ನಿಯಮಗಳನ್ನ ಜಾರಿಗೆ ತರುತ್ತಿದೆ. ಮದುವೆ ಆಗದಿದ್ದರೂ ಮಕ್ಕಳಿಗೆ ಜನ್ಮ ನೀಡಬಹುದು, ಹನಿಮೂನ್ ರಜೆ, ಹಣ ಸೇರಿದಂತೆ ಹತ್ತಾರು ಆಮಿಷಗಳನ್ನ ಒಡ್ಡುತ್ತಿದ್ದಾರೆ. 1960ರ ದಶಕದ ನಂತರ ಮೊದಲ ಬಾರಿಗೆ ಚೀನಾದಲ್ಲಿ ಜನಸಂಖ್ಯೆಯು ಕುಸಿತವಾಗಿದ್ದು, ಈಗ ಜನಸಂಖ್ಯೆ ಹೆಚ್ಚಿಸಲು ಆದ್ಯತೆ ನೀಡಲಾಗುತ್ತಿದೆ. ಇದೀಗ ಜನರನ್ನ ಜೀವಮಾನವಿಡೀ ದುಡಿಸಲು ಮುಂದಾಗಿದೆ.
ಇದನ್ನೂ ಓದಿ : ನಿಲ್ಲುತ್ತಿಲ್ಲ ಚೀನಾ ಕುತಂತ್ರ – ಅತಿಕ್ರಮಣದ ಸಾಕ್ಷ್ಯ ನುಡಿಯುತ್ತಿವೆ ಉಪಗ್ರಹದ ಚಿತ್ರಗಳು
ಚೀನಾ ದೇಶದ ಸ್ಥಿತಿ ಹೇಗಾಗಿದೆ ಅಂದ್ರೆ ಅಲ್ಲಿನ ಜನ ಜೀವಮಾನವಿಡೀ ದುಡಿದರೂ ಅದನ್ನ ಒಪ್ಪಿಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ಯಾಕಂದ್ರೆ ಚೀನಾದಲ್ಲಿ ಜನನ ಪ್ರಮಾಣದ ಸಂಖ್ಯೆಯ ಕುಸಿತ ಮತ್ತು ವಯಸ್ಸಾದವರ ಹೆಚ್ಚಳದಿಂದ ಚೀನಾ ಸಂಕಷ್ಟಕ್ಕೆ ಸಿಲುಕಿದೆ. ಈ ಬಿಕ್ಕಟ್ಟನ್ನು ನಿಭಾಯಿಸುವ ಮಾರ್ಗಗಳನ್ನು ಕಂಡುಹಿಡಿಯಲು ನಾನಾ ಪ್ರಯೋಗಗಳನ್ನ ಮಾಡುತ್ತಿದೆ. ಬೀಜಿಂಗ್ ಈಗ ತನ್ನ ನಿವೃತ್ತಿ ವಯಸ್ಸನ್ನು ಕ್ರಮೇಣ ಮತ್ತು ಹಂತ ಹಂತವಾಗಿ ಹೆಚ್ಚಿಸಲು ಯೋಜಿಸುತ್ತಿದೆಯಂತೆ. ಚೀನಾದ ಮಾನವ ಸಂಪನ್ಮೂಲ ಸಚಿವಾಲಯದ ಹಿರಿಯ ತಜ್ಞರನ್ನು ಉಲ್ಲೇಖಿಸಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಚೀನೀ ಅಕಾಡೆಮಿ ಆಫ್ ಲೇಬರ್ & ಸೋಶಿಯಲ್ ಸೆಕ್ಯುರಿಟಿ ಸೈನ್ಸಸ್‌ನ ಅಧ್ಯಕ್ಷ ಜಿನ್ ವೀಗಾಂಗ್, ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಚೀನಾವು ಪ್ರಗತಿಶೀಲ ಮತ್ತು ವಿಭಿನ್ನ ಮಾರ್ಗಗಳನ್ನ ಹುಡುಕುತ್ತಿದೆ ಎಂದಿದ್ದಾರೆ. ನಿವೃತ್ತಿ ವಯಸ್ಸನ್ನು ಆರಂಭದಲ್ಲಿ ಕೇವಲ ಒಂದೆರಡು ತಿಂಗಳುಗಳವರೆಗೆ ವಿಳಂಬಗೊಳಿಸಲಾಗುವುದು. ನಂತರ ಅದನ್ನು ಹಂತಗಳಲ್ಲಿ ಹೆಚ್ಚಿಸಬಹುದು. ನಿವೃತ್ತಿ ವಯಸ್ಸಿಗೆ ಹತ್ತಿರವಿರುವ ಜನರು ನಿವೃತ್ತಿಯನ್ನು ಕೆಲವು ತಿಂಗಳುಗಳವರೆಗೆ ವಿಳಂಬಗೊಳಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಹಾಗೇ ಜನರು ತಮ್ಮ ಸಂದರ್ಭಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಯಾವಾಗ ನಿವೃತ್ತರಾಗಬೇಕೆಂದು ಅವರೇ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಅದರ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯಾಗಿಲ್ಲ. ಹೊಸ ನಿಯಮಗಳು ಮತ್ತು ಬದಲಾವಣೆಗಳನ್ನು ಜಾರಿಗೆ ತರುವ ಬಗ್ಗೆ ಚಿಂತನೆಗಳು ನಡೆದಿವೆ. ಪ್ರಸ್ತುತ, ಚೀನಾದ ನಿವೃತ್ತಿ ವಯಸ್ಸು ಪುರುಷರಿಗೆ 60 ಮತ್ತು ಬಿಳಿ ಕಾಲರ್ ಮಹಿಳೆಯರಿಗೆ 55 ಮತ್ತೂ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ನಿವೃತ್ತಿ ವಯಸ್ಸು 50 ವರ್ಷಗಳು ಆಗಿದೆ. 1980 ರಿಂದ 2015 ರವರೆಗೆ ಜಾರಿಯಲ್ಲಿದ್ದ ಚೀನಾದ ‘ಒಂದು ಮಗು’ ನೀತಿಯನ್ನು ಈಗ ರದ್ದುಗೊಳಿಸಲಾಗಿದೆ.