ಚೀನಾ ಕೈಯಲ್ಲಿ ಭಾರತ & ಅಮೆರಿಕದ 2024ರ ಚುನಾವಣೆ ಭವಿಷ್ಯ? – ಫೇಸ್ ಬುಕ್ ನಿಂದ ಬೆಚ್ಚಿಬೀಳಿಸುವ ವರದಿ!

ಚೀನಾ ಕೈಯಲ್ಲಿ ಭಾರತ & ಅಮೆರಿಕದ 2024ರ ಚುನಾವಣೆ ಭವಿಷ್ಯ? – ಫೇಸ್ ಬುಕ್ ನಿಂದ ಬೆಚ್ಚಿಬೀಳಿಸುವ ವರದಿ!

ಭಾರತ ಮತ್ತು ಅಮೆರಿಕದ ಪಾಲಿಗೆ 2024 ಅತ್ಯಂತ ಮಹತ್ವದ ವರ್ಷ. ಜಗತ್ತಿನ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿರುವ ಈ ಎರಡೂ ರಾಷ್ಟ್ರಗಳು ಅತಿದೊಡ್ಡ ಚುನಾವಣೆಗಳಿಗೆ ಸಾಕ್ಷಿಯಾಗಲಿವೆ. ಮುಂದಿನ ವರ್ಷ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, 5 ವರ್ಷ ದೇಶವನ್ನು ಆಳುವ ಪಕ್ಷ ಮತ್ತು ವ್ಯಕ್ತಿ ಆಯ್ಕೆಯಾಗಲಿದ್ದಾರೆ. ಹಾಗೇ ವಿಶ್ವದ ದೊಡ್ಡಣ್ಣನಿಗೆ ಪಟ್ಟ ಕಟ್ಟುವ ವರ್ಷವಾಗಿದ್ದು, ಅಮೆರಿಕವನ್ನು ಯಾರು ಆಳುತ್ತಾರೆ ಅನ್ನೋದು ಗೊತ್ತಾಗಲಿದೆ. ಈಗಾಗಲೇ 2 ಸಲ ಪ್ರಧಾನಿ ಆಗಿರುವ ನರೇಂದ್ರ ಮೋದಿ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಹಾಗೇ 2ನೇ ಬಾರಿಗೆ ಜೋ ಬೈಡನ್ ಅಧ್ಯಕ್ಷೀಯ ರೇಸ್​​ಗೆ ಧುಮುಕಲಿದ್ದಾರೆ. ಹೀಗಾಗಿ ಎರಡೂ ರಾಷ್ಟ್ರಗಳ ಎಲೆಕ್ಷನ್ ವಿಶ್ವ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆದ್ರೆ ನರಿ ಬುದ್ಧಿಯ ಚೀನಾ ಮಾತ್ರ ಎರಡೂ ದೇಶಗಳ ಚುನಾವಣೆ ಮೇಲೆ ಪ್ರಭಾವ ಬೀರುವಂತಹ ಕೆಲಸ ಮಾಡ್ತಿದೆ. ನಕಲಿ ಫೇಸ್​ಬುಕ್ ಖಾತೆಗಳನ್ನ ಕ್ರಿಯೇಟ್ ಮಾಡಿ ಜನಾಭಿಪ್ರಾಯವನ್ನೇ ಬದಲಿಸುವಂಥ ಕೃತ್ಯ ಎಸಗುತ್ತಿದೆ.

ಇದನ್ನೂ ಓದಿ : ತೆಲಂಗಾಣದ 2 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇವಂತ್‌ ರೆಡ್ಡಿ

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ಮೂಲ ಕಂಪನಿಯಾಗಿರುವ ಮೆಟಾ ಸ್ಫೋಟಕ ವರದಿಯೊಂದನ್ನ ಬಿಡುಗಡೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಭಾರತ, ಅಮೆರಿಕ ದೇಶಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಫೇಸ್​ಬುಕ್ ಖಾತೆಗಳ ಮೂಲವನ್ನು ಪತ್ತೆ ಹಚ್ಚಿದೆ. ಈ ಸುದ್ದಿಗಳ ಮೂಲ ಚೀನಾ ಎಂಬುದು ಗೊತ್ತಾಗಿದೆ. ಭಾರತೀಯರ ಹೆಸರಿನಲ್ಲಿ ಚೀನೀಯರು ನಕಲಿ ಫೇಸ್​ಬುಕ್ ಪ್ರೊಫೈಲ್ ರಚಿಸಿ ಅದರ ಮೂಲಕ ಭಾರತ ವಿರೋಧಿ ಸುದ್ದಿಗಳನ್ನು ಹರಡುತ್ತಿದ್ದರು. ಹೀಗಾಗಿ ಇಂತಹ ನಕಲಿ ಫೇಸ್​ಬುಕ್ ಖಾತೆಗಳ ದೊಡ್ಡ ಜಾಲವನ್ನು ನಾಶ ಮಾಡಿರೋದಾಗಿ ಮೆಟಾ ಸಂಸ್ಥೆ ತಿಳಿಸಿದೆ. ಅಷ್ಟಕ್ಕೂ ನಕಲಿ ಖಾತೆಗಳ ಮೂಲಕ ಚೀನಿಯರು ಮಾಡುತ್ತಿದ್ದ ಕೃತ್ಯವೇ ಆಘಾತ ಮೂಡಿಸುವಂತಿದೆ.

ಭಾರತೀಯ ಪತ್ರಕರ್ತರು, ವಕೀಲರು, ಮಾನವ ಹಕ್ಕುಗಳ ಕಾರ್ಯಕರ್ತರು ಎಂಬ ಸೋಗಿನಲ್ಲಿ ಚೀನೀಯರು ಫೇಸ್​ಬುಕ್​ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದರು. ಬಳಿಕ ಪ್ರಾದೇಶಿಕ ಸುದ್ದಿ, ಸಂಸ್ಕೃತಿ, ಕ್ರೀಡೆ ಬಗ್ಗೆ ಇಂಗ್ಲೀಷ್​ನಲ್ಲಿ ಬರೆಯುತ್ತಿದ್ದರು. ಕೆಲ ನಕಲಿ ಚೀನೀ ಅಕೌಂಟ್​ಗಳು ಟಿಬೆಟ್​ನ ದಲೈ ಲಾಮಾ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದವು. ದಲೈ ಲಾಮಾ ಭ್ರಷ್ಟಾಚಾರಿ, ಬಾಲಕಾಮಿ ಇತ್ಯಾದಿ ಗಂಭೀರವಾಗಿ ನಿಂದನೆ ಮಾಡುತ್ತಿದ್ದವು. ಹಾಗೇ ಟಿಬೆಟ್, ಅರುಣಾಚಲಪ್ರದೇಶಗಳ ಬಗ್ಗೆ ಗಮನ ಹರಿಸಿ ಪೋಸ್ಟ್ ಮಾಡುತ್ತಿದ್ದವು. ಭಾರತೀಯ ಸೇನೆ, ಕ್ರೀಡಾಪಟು, ವೈಜ್ಞಾನಿಕ ಸಾಧನೆಗಳನ್ನು ಪ್ರಶಂಸಿಸುತ್ತಿದ್ದ ಇವರು, ಭಾರತ ಸರ್ಕಾರವನ್ನು ಭ್ರಷ್ಟಾಚಾರಿ ಎಂದು ಬಣ್ಣಿಸುತ್ತಿದ್ದರು. ಮಣಿಪುರದಲ್ಲಿ ಭಾರತ ಸರ್ಕಾರ ಹಿಂಸಾಚಾರ ಪ್ರಚೋದಿಸುತ್ತಿದೆ ಎಂದು ಆರೋಪಿಸುತ್ತಿದ್ದರು. ಇಂತಹ ಬಹುದೊಡ್ಡ ಫೇಸ್ಬುಕ್ ಖಾತೆಗಳ ಜಾಲವೇ ನಿರ್ಮಾಣವಾಗಿದ್ದು, ಪರಸ್ಪರ ಪೋಸ್ಟ್​ಗಳನ್ನು ತಮ್ಮ ಖಾತೆಗಳಲ್ಲಿ ಶೇರ್ ಮಾಡುತ್ತಿದ್ದರು.

Shantha Kumari