ಜೀವಿತಾವಧಿಯಲ್ಲಿ 1 ಲಕ್ಷ ಲೀ. ಹಾಲು ಕೊಡುತ್ತವೆ ಈ ಹಸುಗಳು – ‘Super Cow’ಗಳ ಸ್ಪೆಷಾಲಿಟಿ ಏನು..!?
ಸೂಪರ್ ಸೋಲ್ಜರ್ಸ್, ಸೂಪರ್ ಕಂಪ್ಯೂಟರ್ಸ್ ಅಂತಾ ನೀವು ಕೇಳೇ ಇರ್ತೀರಾ.. ಆದರೆ ಸೂಪರ್ ಹಸುಗಳ ಬಗ್ಗೆ ಕೇಳಿದ್ದೀರಾ.? ಈಗ ಓದೋ ಈ ಸ್ಟೋರಿ ನಿಮ್ಮನ್ನು ಹುಬ್ಬೇರಿಸುವಂತೆ ಮಾಡೋದು ಸತ್ಯ. ಯಾಕಂದ್ರೆ ಚೀನಾ ದೇಶ ಮೂರು ಸೂಪರ್ ಹಸುಗಳನ್ನ ಅಭಿವೃದ್ಧಿ ಪಡಿಸಿದೆ. ಈ ಹಸುಗಳು ತಮ್ಮ ಜೀವಿತಾವಧಿಯಲ್ಲಿ 1 ಲಕ್ಷ ಲೀಟರ್ ಹಾಲು ಕೊಡಬಲ್ಲವು ಎಂದು ಹೇಳಲಾಗುತ್ತಿದೆ.
ಏನಿದು ಸೂಪರ್ ಹಸು ಪ್ರಯೋಗ?
ಚೀನಾದ ನಿಂಗ್‌ಕ್ಸಿಯಾ ಪ್ರದೇಶದ ವಿಜ್ಞಾನಿಗಳು ಅಸಾಧಾರಣ ಪ್ರಮಾಣದಲ್ಲಿ ಹಾಲು ನೀಡುವ ಮೂರು ‘ಸೂಪರ್ ಹಸು’ಗಳನ್ನ ಅಭಿವೃದ್ಧಿ ಪಡಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಪ್ರಯೋಗ ಶಾಂಕ್ಸಿ ಪ್ರಾವಿನ್ಸ್ ನ ನಾರ್ತ್ ವೆಸ್ಟ್ ಯೂನಿವರ್ಸಿಟಿಯಲ್ಲಿ ನಡೆದಿದೆ. ನೆದರ್‌ಲ್ಯಾಂಡ್ ಮೂಲದ ಹಾಲ್‌ಸ್ಟೀನ್ ಫ್ರೀಸಿಯನ್ ತಳಿಯ ಅಧಿಕ ಹಾಲು ಉತ್ಪಾದನಾ ಸಾಮರ್ಥ್ಯವಿರುವ ಹಸುಗಳಿಂದ ಈ ಅಬೀಜ ಸಂತಾನಗಳನ್ನು ಸೃಷ್ಟಿಸಲಾಗಿದೆ. ಈ ಹಸುಗಳು ತಮ್ಮ ಜೀವಿತಾವಧಿಯಲ್ಲಿ 1 ಲಕ್ಷ ಲೀಟರ್ ಹಾಲು ಕೊಡಬಲ್ಲವು ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
ಕ್ಲೋನಿಂಗ್ ತಂತ್ರಜ್ಞಾನದ ಮೂಲಕ ಸೂಪರ್ ಹಸುಗಳ ಸೃಷ್ಟಿ!
ಅಬೀಜ ತಂತ್ರಜ್ಞಾನ (ಕ್ಲೋನಿಂಗ್ ತಂತ್ರಜ್ಞಾನ )ವನ್ನು ಬಳಸಿಕೊಂಡು ಈ ತದ್ರೂಪಿ ಹಸುಗಳ ಸಂತಾನೋತ್ಪತ್ತಿ ಮಾಡಲಾಗಿದೆ. ಹಸುಗಳ ಕಿವಿಯ ಭಾಗದಿಂದ ಅಂಗಾಂಶವನ್ನು ಸಂಗ್ರಹಿಸಿ, ಆರಂಭದ ಬ್ಯಾಚ್‌ನಲ್ಲಿ 120 ಅಬೀಜ ಭ್ರೂಣಗಳನ್ನು ಸೃಷ್ಟಿಸಲು ಬಳಸಲಾಗಿತ್ತು. ಇವುಗಳಲ್ಲಿ ಶೇ 42ರಷ್ಟನ್ನು ಹಸುಗಳಿಗೆ ಯಶಸ್ವಿಯಾಗಿ ಗರ್ಭಧಾರಣೆ ಮಾಡಲಾಗಿತ್ತು. ಶೇ 17.5ರಷ್ಟು ಹಸುಗಳು 200 ದಿನಗಳ ಬಳಿಕ ಗರ್ಭ ಉಳಿಸಿಕೊಂಡಿದ್ದವು.
ಸೂಪರ್ ಹಸುಗಳ ವಿಶೇಷತೆ ಏನು?
ಸಮಾಟಿಕ್ ಸೆಲ್ ನ್ಯೂಕ್ಲಿಯರ್ (Somatic Cell Nuclear )ವರ್ಗಾವಣೆ ಎಂಬ ಆಯ್ದ ತಳಿ ಪ್ರಕ್ರಿಯೆ ಮೂಲಕ ಇದನ್ನು ಸಾಧಿಸಲಾಗಿದೆ. ಈ ಸೂಪರ್ ಹಸುಗಳು ಚೀನಾದಲ್ಲಿನ ಹಾಲು ಉತ್ಪಾದನೆಯನ್ನು ವೃದ್ಧಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇವು ವರ್ಷಕ್ಕೆ 18,000 ಲೀಟರ್ ಹಾಲು ನೀಡುವ ಸಾಮರ್ಥ್ಯ ಹೊಂದಿವೆಯಂತೆ.
ಬ್ರಿಟನ್‌ನ ಸಾಮಾನ್ಯ ಹಸುವೊಂದು ವರ್ಷಕ್ಕೆ ಸುಮಾರು 8,206 ಲೀಟರ್ ಹಾಲು ಕೊಡುವ ಸಾಮರ್ಥ್ಯ ಹೊಂದಿರುತ್ತವೆ. ಅವುಗಳಿಗೆ ಹೋಲಿಸಿದರೆ ಚೀನಾದ ಹಸುಗಳು ಎರಡು ಪಟ್ಟು ಹಾಲು ನೀಡುತ್ತವೆ.
ಸೂಪರ್ ಹಸುಗಳ ಅವಶ್ಯಕತೆ ಚೀನಾಕ್ಕೆ ಯಾಕೆ ಅಗತ್ಯವಿದೆ?
ಚೀನಾದ ಶೇಕಡಾ 70 ರಷ್ಟು ಡೇರಿ ದನಗಳು ವಿದೇಶಿ ತಳಿಗಳಾಗಿವೆ ಮತ್ತು ಚೀನಾದಲ್ಲಿ ಸುಮಾರು 10,000 ಸಾಮಾನ್ಯ ಜಾನುವಾರು ತಳಿಗಳಲ್ಲಿ ಐದು ತಳಿಗಳು ಮಾತ್ರ ತಮ್ಮ ಜೀವಿತಾವಧಿಯಲ್ಲಿ 100 ಟನ್ ಪ್ರಮಾಣದಷ್ಟು ಹಾಲು ನೀಡಬಲ್ಲವು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೂಪರ್ ಹಸುಗಳು ಚೀನಾ ಡೇರಿ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಲಿದ್ದು, ವಿದೇಶಿ ತಳಿಗಳ ಮೇಲೆ ತಮ್ಮ ಅವಲಂಬನೆಯನ್ನು ಕಡಿಮೆ ಮಾಡಲಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ಇನ್ನು ಎರಡು ಮೂರು ವರ್ಷಗಳಲ್ಲಿ 1,000ಕ್ಕೂ ಅಧಿಕ ಸೂಪರ್ ಹಸುಗಳ ಹಿಂಡನ್ನು ಸೃಷ್ಟಿಸಲು ನಾವು ಯೋಜನೆ ತಯಾರಿಸಿದ್ದೇವೆ ಎಂದು ಯೋಜನೆಯ ಮುಖ್ಯಸ್ಥ ಜಿನ್ ಯಾಪಿಂಗ್ ಹೇಳಿದ್ದಾರೆ.