ಚೀನಾ ನೌಕರರ ವಿದೇಶ ಪ್ರಯಾಣಕ್ಕೆ ಬ್ರೇಕ್ – ರೂಲ್ಸ್ ಬ್ರೇಕ್‌ ಮಾಡಿದ್ರೆ ಕಠಿಣ ಶಿಕ್ಷೆ

ಚೀನಾ ನೌಕರರ ವಿದೇಶ ಪ್ರಯಾಣಕ್ಕೆ ಬ್ರೇಕ್ – ರೂಲ್ಸ್ ಬ್ರೇಕ್‌ ಮಾಡಿದ್ರೆ ಕಠಿಣ ಶಿಕ್ಷೆ

ಶಿಕ್ಷಕರು, ವೈದ್ಯರು, ನಾಗರಿಕ ಸೇವಕರು, ನಿವೃತ್ತ ಸಾರ್ವಜನಿಕ ನೌಕರರಿಗೆ ವಿದೇಶ ಪ್ರಯಾಣವನ್ನು ನಿಷೇಧಿಸಿ ಚೀನಾ ಹೊಸ ನೀತಿಯನ್ನು ಜಾರಿಗೆಗೊಳಿಸಿದೆ. ಇದರ ಪ್ರಕಾರ ಎಲ್ಲ ಸಾರ್ವಜನಿಕ ನೌಕರರು ತಮ್ಮ ಪಾಸ್‌ಪೋರ್ಟ್‌ಗಳನ್ನು ಆಡಳಿತಕ್ಕೆ ಒಪ್ಪಿಸಬೇಕು. ಯಾವುದೇ ರೀತಿಯಲ್ಲಿ ವಿದೇಶಿ ಪ್ರವಾಸ ಮಾಡಬೇಕಾದರೆ ಔಪಚಾರಿಕ ಅನುಮೋದನೆ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.

ಹೊಸ ನೀತಿಯನ್ವಯ ಅನೇಕ ಸಾರ್ವಜನಿಕ ಉದ್ಯೋಗಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಉದ್ಯೋಗದಾತರಿಗೆ ಒಪ್ಪಿಸಬೇಕು. ವೈಯಕ್ತಿಕ ಪ್ರಯಾಣ ಸೇರಿದಂತೆ ಯಾವುದೇ ವಿದೇಶಿ ಪ್ರವಾಸ ಹೋಗಬೇಕಾದರೂ ಔಪಚಾರಿಕ ಅನುಮೋದನೆ ಕಡ್ಡಾಯ. ಹಲವು ನಗರಗಳಲ್ಲಿ ವಿದೇಶಿ ರಜಾದಿನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಪಾಲನೆ ಮಾಡಲು ವಿಫಲವಾದರೆ ಶಿಸ್ತು ಕ್ರಮ ಅಥವಾ ಕೆಲಸದಿಂದ ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಉತ್ತರಕಾಶಿ ದುರಂತದಲ್ಲಿ 9 ಸೈನಿಕರು ಸೇರಿ 59 ಕ್ಕೂ ಹೆಚ್ಚು ಜನ ನಾಪತ್ತೆ – ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ದಕ್ಷಿಣ ಚೀನಾದ ಸಾರ್ವಜನಿಕ ಶಾಲೆಯೊಂದರ ಸಾಹಿತ್ಯ ಶಿಕ್ಷಕಿಯೊಬ್ಬರು ತಮ್ಮ ಉದ್ಯೋಗ ಒಪ್ಪಂದದಲ್ಲಿ ಅನಧಿಕೃತ ವಿದೇಶಿ ಪ್ರಯಾಣ ಮಾಡಿ ಬಂದಿದ್ದು, ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ನರ್ಸ್ ಒಬ್ಬರು ವಿದೇಶಕ್ಕೆ ಪ್ರಯಾಣಿಸಲು ಅನುಮತಿ ಪಡೆಯಲು ನಾಲ್ಕು ಹಂತದ ಆಡಳಿತಾತ್ಮಕ ಅನುಮೋದನೆ ಪಡೆಯಲು ಸೂಚಿಸಲಾಗಿದೆ. ಕೆಲವು ನಗರಗಳಲ್ಲಿ ನಿವೃತ್ತ ಸರ್ಕಾರಿ ನೌಕರರು ತಮ್ಮ ಪಾಸ್‌ಪೋರ್ಟ್‌ಗಳನ್ನು ಮರಳಿ ಪಡೆಯಲು ಎರಡು ವರ್ಷಗಳವರೆಗೆ ಕಾಯಬೇಕೆಂದು ಸೂಚಿಸಲಾಗಿದೆ.

ಸರ್ಕಾರಿ ನೌಕರರಿಗೆ ವಿದೇಶ ಪ್ರಯಾಣ ನಿಷೇಧವು ಹಲವು ಮಂದಿಯ ವಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರಿದೆ. ಅನೇಕರು ವಿದೇಶ ಪ್ರಯಾಣ ನಿಷೇಧದಿಂದ ಪರದಾಡುವಂತಾಗಿದೆ. ಈ ನೀತಿಯಿಂದಾಗಿ ಆರು ತಿಂಗಳಿಗಿಂತ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸುತ್ತಿರುವವರನ್ನು ನಾಗರಿಕ ಸೇವಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ.

ಚೀನಾ ವಿದೇಶಿ ಪ್ರಯಾಣವನ್ನು ನಿರ್ಬಂಧಿಸುತ್ತಿರುವುದು ಇದು ಮೊದಲೇನಲ್ಲ. 2023ರಲ್ಲಿ ನಾಗರಿಕ ಸೇವಕರು ಮತ್ತು ರಾಜ್ಯ-ಸಂಬಂಧಿತ ಉದ್ಯಮ ಉದ್ಯೋಗಿಗಳಿಗೆ ವೈಯಕ್ತಿಕ ವಿದೇಶ ಪ್ರಯಾಣದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಾಗಿತ್ತು. ಕೆಲವು ಕಾರ್ಮಿಕರಿಗೆ ವರ್ಷಕ್ಕೆ ಒಮ್ಮೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದ್ದು, ಇದಕ್ಕಾಗಿ ನಿರ್ಗಮನ ಪೂರ್ವ ಗೌಪ್ಯತಾ ತರಬೇತಿಗೆ ಹಾಜರಾಗಬೇಕಾಗಿತ್ತು.

Kishor KV