ಇನ್ನುಮುಂದೆ ಮಕ್ಕಳಿಗೆ ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್ ನೋಡಲು ಅವಕಾಶ!

ಇನ್ನುಮುಂದೆ ಮಕ್ಕಳಿಗೆ ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್ ನೋಡಲು ಅವಕಾಶ!

ಬೀಜಿಂಗ್: ಮಾತಿಲ್ಲ, ಕತೆಯಿಲ್ಲ. ಮೊಬೈಲ್ ಫೋನೊಂದು ಕೈಗೆ ಸಿಕ್ಕಿದೆ. ಇನ್ನು ನನ್ನದೇ ಪ್ರಪಂಚ ಅಂತಾ ಮಕ್ಕಳು ಮೊಬೈಲ್‌ ಹಿಡಿದು ಕೂರುತ್ತಾರೆ. ಯಾರೇನು ಬೇಕಾದರೂ ಆಡಿಕೊಳ್ಳಲಿ.. ಮಕ್ಕಳು ಹಠ ಮಾಡದೇ ಸುಮ್ಮನೆ ಕೂತರೆ ಸಾಕು ಅಂತಾ ಪೋಷಕರು ಮಕ್ಕಳ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಲು ಮಕ್ಕಳ ಕೈಗೆ ಮೊಬೈಲ್‌ ಕೊಟ್ಟು ಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾಗೂ ಹದಿಹರೆಯದವರು ಹೆಚ್ಚಾಗಿ ಮೊಬೈಲ್‍ನಲ್ಲಿ ಇಂಟರ್ನೆಟ್ ಬಳಕೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಚೀನಾದ ಸರ್ಕಾರ ಹೊಸ ಪ್ಲಾನ್‌ ವೊಂದನ್ನು ಮಾಡಿದೆ.

ಇದನ್ನೂ ಓದಿ: ಹರಿಯಾಣದಲ್ಲಿ ಕೋಮು ಗಲಭೆ – ನುಹ್‌, ಗುರುಗ್ರಾಮ್‌ನಲ್ಲಿ ಇಂಟರ್‌ನೆಟ್‌ ನಿಷೇಧ

ಹೌದು.. ಚೀನಾದಲ್ಲಿ ಮಕ್ಕಳು ಹಾಗೂ ಹದಿಹರೆಯದವರು ಮೊಬೈಲ್‍ನಲ್ಲಿ ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಲು ಮುಂದಾಗಿದೆ. ಈ ಹೊಸ ನಿಯಮ ಸೆಪ್ಟೆಂಬರ್ ತಿಂಗಳಿನಿಂದ ಜಾರಿಗೆ ಬರಲಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಚೀನಾದ ಸೈಬರ್‍ಸ್ಪೇಸ್ ಅಡ್ಮಿನಿಸ್ಟ್ರೇಷನ್ (CAC) ಈ ಹೊಸ ನಿಯಮ ಜಾರಿಗೆ ತಂದಿದ್ದು, ಮಕ್ಕಳು ಹಾಗೂ ಯುವಕರನ್ನು ಮೊಬೈಲ್ ಬಳಕೆಯಿಂದ ಹೊರತರುವುದೇ ಇದರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಎಂದು ಚೀನಾ ಸರ್ಕಾರ ಹೇಳಿದೆ.

ಚೀನಾ ಸರ್ಕಾರ ಮೊಬೈಲ್ ಬಳಕೆ ಮಾಡಲು ಕೂಡ ಸಮಯ ನಿಗದಿಪಡಿಸಿದೆ. 8 ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ ಗರಿಷ್ಠ 40 ನಿಮಿಷಗಳು ಹಾಗೂ 16 ರಿಂದ 18 ವರ್ಷದವರಿಗೆ ಗರಿಷ್ಠ 2 ಗಂಟೆ ಮಾತ್ರ ಮೊಬೈಲ್ ಬಳಕೆಗೆ ಅನುಮತಿ ನೀಡಲಾಗುವುದು. ಹಾಗೆಯೇ ಪ್ರತಿ 30 ನಿಮಿಷಕ್ಕೊಮ್ಮೆ ವಿರಾಮ ತೆಗೆದುಕೊಳ್ಳಲು ನೆನಪಿಸಲಾಗುತ್ತದೆ ಎಂದು ಚೀನಾ ಹೇಳಿದೆ. ಒಂದು ವೇಳೆ ಪೋಷಕರು ಈ ನಿಯಮ ವಿರೋಧಿಸಿದರೆ ಕೈಬಿಡುವುದಾಗಿಯೂ ತಿಳಿಸಿದೆ.

suddiyaana