ಚೀನಾದಿಂದ ಪಾಕ್‌ಗೆ ಬಿಗ್ ಶಾಕ್ – ಸಿಪಿಇಸಿಯ ಪ್ರಮುಖ ಯೋಜನೆಯಿಂದ ಹಿಂದಕ್ಕೆ ಸರಿದ ಡ್ರ್ಯಾಗನ್

ಚೀನಾದಿಂದ ಪಾಕ್‌ಗೆ ಬಿಗ್ ಶಾಕ್ – ಸಿಪಿಇಸಿಯ ಪ್ರಮುಖ ಯೋಜನೆಯಿಂದ ಹಿಂದಕ್ಕೆ ಸರಿದ ಡ್ರ್ಯಾಗನ್

ಇತ್ತೀಚಿನ ದಿನಗಳಲ್ಲಿ ಅಮೆರಿಕಕ್ಕೆ ಹತ್ತಿರವಾಗುತ್ತಿರುವ ಪಾಕಿಸ್ತಾನಕ್ಕೆ ಚೀನಾ ಬಿಗ್‌ ಶಾಕ್‌ ಅನ್ನು ನೀಡಿದೆ. ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಕೇಂದ್ರ ಬಿಂದುವಾಗಬೇಕಿದ್ದ ಪಾಕಿಸ್ತಾನದ ಯೋಜನೆಯೊಂದಕ್ಕೆ ಹಣಕಾಸಿನ ನೆರವು ನೀಡುವುದರಿಂದ ಚೀನಾ ಹಿಂದಕ್ಕೆ ಸರಿದಿದೆ. ಈ ಹಿನ್ನೆಲೆ ತನ್ನ ಹಳೇ ರೈಲ್ವೇ ಜಾಲದ ನಿರ್ಣಾಯಕ ಭಾಗವನ್ನು ಅಭಿವೃದ್ಧಿಪಡಿಸಲು ಪಾಕಿಸ್ತಾನ ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ ಮೊರೆ ಹೋಗಿದೆ. ಪಾಕಿಸ್ತಾನದ ಮೇನ್‌ ಲೈನ್‌-1 ಯೋಜನೆಗೆ ಹಣಕಾಸು ಒದಗಿಸುವುದಿಲ್ಲ ಎಂದು ಚೀನಾ ಹೇಳಿದೆ. ಆದ್ದರಿಂದ ಪಾಕಿಸ್ತಾನವು ಈಗ ಕರಾಚಿ-ರೋಹ್ರಿ ವಿಭಾಗದ ಮಾರ್ಗವನ್ನು ನವೀಕರಿಸಲು ಎಡಿಬಿಯಿಂದ 2 ಬಿಲಿಯನ್ ಡಾಲರ್‌ ಸಾಲವನ್ನು ಪಡೆಯಲು ಮುಂದಾಗಿದೆ.

ಈ ಬೆಳವಣಿಗೆಯು ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ದೊಡ್ಡ ತಿರುವನ್ನು ನೀಡಿದೆ. ಸಿಪಿಇಸಿ ಅಡಿಯಲ್ಲಿ ಪಾಕಿಸ್ತಾನದಾದ್ಯಂತ ಇಂಧನ ಮತ್ತು ಸಾರಿಗೆ ಮೂಲಸೌಕರ್ಯಕ್ಕಾಗಿ ಸುಮಾರು 60 ಬಿಲಿಯನ್ ಡಾಲರ್‌ ಹೂಡಿಕೆ ಮಾಡುವುದಾಗಿ ಚೀನಾ ಭರವಸೆ ನೀಡಿತ್ತು. ಕರಾಚಿಯಿಂದ ಪೇಶಾವರದವರೆಗೆ ಸುಮಾರು 1,800 ಕಿಲೋ ಮೀಟರ್ ವ್ಯಾಪಿಸಿರುವ ಎಂಎಲ್-1 ರೈಲ್ವೇ ನವೀಕರಣ ಯೋಜನೆಯು ಈ ಎಲ್ಲ ಯೋಜನೆಗಳಲ್ಲಿ ಅತಿದೊಡ್ಡ ಮತ್ತು ಗೇಮ್‌ ಚೇಂಜರ್‌ ಎಂದೇ ಹೇಳಲಾಗಿತ್ತು. ಆದರೆ, ಸುಮಾರು ಒಂದು ದಶಕದ ರಾಜತಾಂತ್ರಿಕ ಮಾತುಕತೆಗಳ ನಂತರವೂ, ಈ ಯೋಜನೆಗೆ ಹಣಕಾಸಿನ ನೆರವನ್ನು ಚೀನಾ ನೀಡಿಲ್ಲ. ಇದೀಗ ಎಡಿಬಿಯಿಂದ ಸಾಲ ತೆಗೆದುಕೊಳ್ಳುವ ಮೂಲಕ ಚೀನಾದ ಬೆಲ್ಟ್‌ ಅಂಡ್‌ ರೋಡ್‌ ಇನಿಶಿಯೇಟವ್‌ನ ಪ್ರಮುಖ ಯೋಜನೆಯಲ್ಲಿ ಎಡಿಬಿ ಮಧ್ಯಪ್ರವೇಶಕ್ಕೆ ಪಾಕಿಸ್ತಾನ ಅವಕಾಶ ನೀಡಲು ಮುಂದಾಗಿದೆ.

ಪಾಕಿಸ್ತಾನದ ಎಂಎಲ್-1 ಯೋಜನೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಚೀನಾದ ದಿಢೀರ್‌ ಎಂದು ತೆಗೆದುಕೊಂಡಿಲ್ಲ. ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆ, ವಿಶೇಷವಾಗಿ ಪಾಕಿಸ್ತಾನದ ಹದಗೆಡುತ್ತಿರುವ ಆರ್ಥಿಕ ಸ್ಥಿತಿ ಮತ್ತು ಸಾಲ ಮರುಪಾವತಿಯಲ್ಲಿನ ತೊಂದರೆಗಳ ಬಗ್ಗೆ ಬೀಜಿಂಗ್‌ ಆತಂಕವನ್ನು ಹೆಚ್ಚಿಸಿತ್ತು. ಚೀನೀ ಸಂಸ್ಥೆಗಳು ಈಗಾಗಲೇ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿರುವ ವಿದ್ಯುತ್ ವಲಯದಲ್ಲಿ ಈ ಸಮಸ್ಯೆಗಳು ಹೆಚ್ಚಾಗಿದ್ದು, ಹಣದ ಮರುಪಾವತಿಯಾಗುತ್ತಿಲ್ಲ. ಈ ಹಿನ್ನೆಲೆ ಎಂಎಲ್‌-1 ಯೋಜನೆಯಿಂದ ಚೀನಾ ಹಿಂದಕ್ಕೆ ಸರಿದಿದೆ.

ಅದಲ್ಲದೇ ಚೀನಾದ ವಿದೇಶಿ ಹೂಡಿಕೆಗಳ ಮರುಮೌಲ್ಯಮಾಪನವೂ ಈ ನಿರ್ಧಾರದ ಹಿಂದೆ ಇದೆ ಎನ್ನಲಾಗಿದೆ. ತನ್ನದೇ ಆದ ಆರ್ಥಿಕತೆಯ ಸವಾಲುಗಳನ್ನು ಚೀನಾ ಎದುರಿಸುತ್ತಿದೆ. ವಿದೇಶಗಳಲ್ಲಿನ ಅಧಿಕ ಅಪಾಯದ ಯೋಜನೆಗಳಲ್ಲಿ ಹೂಡಿಕೆ ಮಾಡುವ ಆಸಕ್ತಿ ಚೀನಾಗೆ ಕಡಿಮೆಯಾಗುತ್ತಿದ್ದು, ಈ ಹಿನ್ನೆಲೆ ಮರುಪಾವತಿ ಅಪಾಯವಿರುವ ದೇಶಗಳಲ್ಲಿ ದೊಡ್ಡ ಪ್ರಮಾಣದ ಹಣಕಾಸಿನ ನೆರವಿನಿಂದ ಚೀನಾ ಹಿಂದೆ ಸರಿಯುತ್ತಿರುವಂತೆ ಕಾಣುತ್ತಿದೆ. ಹೆಚ್ಚುತ್ತಿರುವ ಸಾಲದ ಹೊರೆ ಮತ್ತು ಪದೇ ಪದೇ ಐಎಂಎಫ್‌ನಿಂದ ಬೇಲ್‌ಔಟ್‌ಗಳನ್ನು ಪಡೆಯುತ್ತಿರುವ ಪಾಕಿಸ್ತಾನ ಚೀನಾದ ಆತಂಕಕ್ಕೆ ಕಾರಣವಾಗಿದೆ. ಸಿಪಿಇಸಿಯ ಅತಿದೊಡ್ಡ ಯೋಜನೆಯಿಂದ ಚೀನಾ ಹಿಂದೆ ಸರಿದಿರುವುದು, ಎರಡೂ ದೇಶಗಳು ಹೇಳಿಕೊಳ್ಳುವ ಉಕ್ಕಿನ ಸ್ನೇಹಕ್ಕೂ ಆರ್ಥಿಕ ಇತಿ-ಮಿತಿಗಳಿವೆ ಎಂಬುದನ್ನು ತೋರಿಸುತ್ತಿದೆ. ಚೀನಾದ ನಡೆ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ.

Kishor KV