ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಬೇಕಿದ್ದ ಭಾರತದ ಮೂವರು ಅಥ್ಲೀಟ್‌ಗಳಿಗೆ ಚೀನಾ ಪ್ರವೇಶ ನಿರಾಕರಣೆ – ಅಸಮಾಧಾನ ಹೊರಹಾಕಿದ ಕೇಂದ್ರ

ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಬೇಕಿದ್ದ ಭಾರತದ ಮೂವರು ಅಥ್ಲೀಟ್‌ಗಳಿಗೆ ಚೀನಾ ಪ್ರವೇಶ ನಿರಾಕರಣೆ – ಅಸಮಾಧಾನ ಹೊರಹಾಕಿದ ಕೇಂದ್ರ

ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಬೇಕಿದ್ದ ಮೂವರು ಅಥ್ಲೀಟ್‌ಗಳಿಗೆ ಚೀನಾ ಪ್ರವೇಶ ನಿರಾಕರಿಸಿದೆ ಎಂದು ವರದಿಯಾಗಿದೆ.

ಚೀನಾದ ಹ್ಯಾಂಗ್‌ಜೂನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಬೇಕಿದ್ದ ಮೂವರು ವೂಶೂ ಕ್ರೀಡಾಪಟುಗಳಿಗೆ ಚೀನಾ ಪ್ರವೇಶ ನಿರಾಕರಿಸಿದೆ. 10 ಆಟಗಾರರನ್ನೊಳಗೊಂಡ ತಂಡದಲ್ಲಿ ಮೂವರು ಮಹಿಳಾ ಆಟಗಾರರಾದ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಅವರ ಪ್ರವೇಶ ನಿರಾಕರಿಸಿದ್ದು, ಉಳಿವರು ಹ್ಯಾಂಗ್‌ಜೂಗೆ ತೆರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಬೌಲರ್ ಸಿರಾಜ್ ನಂಬರ್ 1 – ಐಸಿಸಿ ನೂತನ ಏಕದಿನ ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ

ಚೀನಾ ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ಮಾಹಿತಿ ಮತ್ತು ಪ್ರಸಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ನಿಗದಿತ ಚೀನಾ ಪ್ರವಾಸವನ್ನ ರದ್ದುಗೊಳಿಸಿದ್ದಾರೆ. ಇದು ಪ್ರತಿಭಟನೆಯ ಸಂಕೇತವೆಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಪ್ರವೇಶ ವೀಸಾವಾಗಿ ಕಾರ್ಯನಿರ್ವಹಿಸುವ ಹ್ಯಾಂಗ್‌ಜೂ ಏಷ್ಯನ್ ಗೇಮ್ಸ್ ಆರ್ಗನೈಸಿಂಗ್ ಕಮಿಟಿಯಿಂದ ತಮ್ಮ ಮಾನ್ಯತೆ ಕಾರ್ಡ್ಗಳನ್ನು ಪಡೆದಿದ್ದರು. ಈ ಮಾನ್ಯತಾ ಪತ್ರವನ್ನ ಪ್ರವೇಶ ವೀಸಾ ಎಂದು ಪರಿಗಣಿಸಲಾಗುತ್ತದೆ. ಅಥ್ಲೀಟ್‌ಗಳು ತಮ್ಮ ಪ್ರಯಾಣ ದಾಖಲೆಯನ್ನ ಡೌನ್‌ಲೋಡ್ ಮಾಡಿಕೊಳ್ಳಬೇಕಿತ್ತು. ಏಕೆಂದರೆ ಇದು ಆಟಗಾರರು ಆಗಮಿಸುವ ವೇಳೆ ದೃಢೀಕರಿಸಲಾಗುತ್ತದೆ. ಆದ್ರೆ ಬುಧವಾರ ಏಷ್ಯನ್ ಗೇಮ್ಸ್‌ಗೆ ತೆರಳಬೇಕಿದ್ದಾಗ ಅರುಣಾಚಲ ಪ್ರದೇಶದ ಮೂವರು ಆಟಗಾರರು ತಮ್ಮ ಪ್ರಯಾಣದ ದಾಖಲೆಗಳನ್ನ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮೂವರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಚೀನಾದ ಹಾಂಗ್‌ಜೂನಲ್ಲಿ ನಡೆಯುತ್ತಿರಯುವ 19ನೇ ಏಷ್ಯನ್ ಗೇಮ್ಸ್‌ಗೆ ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಮಾನ್ಯತೆ ಮತ್ತು ಪ್ರವೇಶ ನಿರಾಕರಿಸುವ ಮೂಲಕ ಚೀನಾದ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ಭಾರತ ಸರ್ಕಾರ ತಿಳಿದುಕೊಂಡಿದೆ. ವಾಸಸ್ಥಳ, ಜನಾಂಗೀಯತೆಯ ಆಧಾರದ ಮೇಲೆ ನಾಗರಿಕರನ್ನು ಭೇದ-ಭಾವದಿಂದ ನೋಡುವುದನ್ನ ದೃಢವಾಗಿ ತಿರಸ್ಕರಿಸುತ್ತದೆ. ಚೀನಾ ನಮ್ಮ ಕ್ರೀಡಾಪಟುಗಳಿಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದೆ. ಚೀನಾದ ಈ ನಡೆಯು ಏಷ್ಯನ್ ಗೇಮ್ಸ್‌ ನ ಉತ್ಸಾಹ ಹಾಗೂ ನಿಯಮವನ್ನೂ ಉಲ್ಲಂಘಿಸುತ್ತದೆ ಎಂದು ಭಾರತ ಅಸಮಾಧಾನ ಹೊರಹಾಕಿದೆ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ, ಎಲ್ಲಾ ದೇಶಗಳ ಕ್ರೀಡಾಪಟುಗಳು ಅಗತ್ಯ ದಾಖಲೆಗಳೊಂದಿಗೆ ಕಾನೂನುಬದ್ಧವಾಗಿ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವಂತೆ ಕೋರುವುದಾಗಿ ತಿಳಿಸಿದೆ.

Shwetha M