ಚೀನಾ ವಾಟರ್ ಬಾಂಬ್! – ಡ್ಯಾಂ ಹಿಂದೆ ಡ್ರ್ಯಾಗನ್ ಸ್ಕೆಚ್ ಏನು!
ಭಾರತ, ಬಾಂಗ್ಲಾಕ್ಕೆ ಡೇಂಜರ್!!
ಬ್ರಹ್ಮಪುತ್ರ ನದಿಗೆ ವಿಶ್ವದ ಅತ್ಯಂತ ದೊಡ್ಡ ಅಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ಉತ್ಪಾದನೆ ಮಾಡುವುದು ಚೀನಾ ಸರ್ಕಾರದ ಯೋಜನೆ. ಭಾರತದ ಅರುಣಾಚಲ ಪ್ರದೇಶದ ಗಡಿ ಸಮೀಪ ಇದನ್ನು ನಿರ್ಮಿಸಲಾಗುತ್ತಿದೆ ಎಂದ ಹೇಳಲಾಗುತ್ತಿದೆ. ಆದರೆ, ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣದ ಬಗ್ಗೆ ಚೀನಾದಲ್ಲೇ ಆತಂಕ ವ್ಯಕ್ತವಾಗಿದೆ. ಬ್ರಹ್ಮಪುತ್ರ ನದಿ ಹಿಮಾಲಯದ ಗಿರಿ ಕಂದರಗಳಲ್ಲಿ ಹರಿಯುತ್ತದೆ. ಲಕ್ಷಾಂತರ ಜೀವಪ್ರಭೇದ, ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿರುವ ನದಿ. ಹಾಗೇ ಕಡಿದಾದ, ಆಳದ ಕಣಿವೆ ಇರುವ, ಭೂಕಂಪ ಸಂಭವನೀಯ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕಾಗಿ ಅಗೆಯುವುದು ಭೂಕುಸಿತದಂಥ ಅವಘಡಗಳಿಗೆ ಕಾರಣವಾಗುತ್ತದೆ ಎಂದು ಚೀನಾದ ವಿಜ್ಞಾನಿಗಳೇ ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ, ಭೂಕಂಪವನ್ನು ತಡೆಯುವ ರೀತಿಯಲ್ಲಿ ಅಣೆಕಟ್ಟು ನಿರ್ಮಿಸಿದರೂ ಅದರಿಂದ ಉಂಟಾಗುವ ಗುಡ್ಡಕುಸಿತ, ಮಣ್ಣು- ಕಲ್ಲಿನ ಅನಿಯಂತ್ರಿತ ಹರಿಯುವಿಕೆ ತಡೆಯುವುದು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : ರಿಷಭ್ ಒಂತ್ ಔಟ್.. ಧ್ರುವ್ ಜುರೇಲ್ ಗೆ ಚಾನ್ಸ್? – ತಂಡಕ್ಕೆ ಸರ್ಜರಿ ಹೇಗಿದೆ?
ಬ್ರಹ್ಮಪುತ್ರ ಮೇಲೆ ಚೀನಾದ ಹಿಡಿತ?
ತನ್ನ ಅಣೆಕಷ್ಟು ಯೋಜನೆಯಿಂದ ಭಾರತ, ಬಾಂಗ್ಲಾದೇಶ ಸೇರಿದಂತೆ ಯಾರಿಗೂ ತೊಂದರೆಯಾಗಲ್ಲ ಎಂದು ಚೀನಾ ಹೇಳುತ್ತಿದೆ. ಆದ್ರೆ ಈ ಯೋಜನೆ ಭಾರತ ಮತ್ತು ಬಾಂಗ್ಲಾದೇಶದ ಪಾಲಿಗೆ ವಿನಾಶಕಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಯಾರ್ಲಂಗ್ ಸಂಗೊ ನದಿಯ ಮೇಲ್ಬಾಗದಲ್ಲಿ ಚೀನಾ ಹಲವು ಅಣೆಕಟ್ಟುಗಳನ್ನು ಈಗಾಗಲೇ ನಿರ್ಮಿಸಿದೆ. ಈಗ ನದಿಯ ಕೆಳಭಾಗದಲ್ಲಿ ಭಾರಿ ಅಣೆಕಟ್ಟು ನಿರ್ಮಿಸಿದರೆ, ಇಡೀ ನದಿ ನೀರಿನ ಮೇಲೆ ಚೀನಾ ಹಿಡಿತ ಸಾಧಿಸಲಿದೆ. ಇದರಿಂದ ಭಾರತ ಮತ್ತು ಬಾಂಗ್ಲಾದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಭಾರತದ ಮೇಲೆ ಹಿಡಿತ ಸಾಧಿಸಲು ಈ ಅಣೆಕಟ್ಟನ್ನು ಒಂದು ಸಾಧನವನ್ನಾಗಿ ಚೀನಾ ಬಳಸಬಹುದು ಎಂಬ ಅಭಿಪ್ರಾಯವನ್ನು ರಾಜತಾಂತ್ರಿಕ ತಜ್ಞರು ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾ ಮತ್ತು ಭಾರತಕ್ಕೆ ನೀರಿನ ಕೊರತೆ
ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದ ಪಾಲಿಗೆ ಬ್ರಹ್ಮಪುತ್ರ ಜೀವ ನದಿ. ಭಾರತದ ಸಿಹಿ ನೀರಿನ ಸಂಪನ್ಮೂಲದ ಪೈಕಿ ಶೇ 30ರಷ್ಟು ಬ್ರಹ್ಮಪುತ್ರ ನದಿಯ ಪಾಲಿದೆ. ಭಾರತದ ಗಡಿ ಭಾಗದಲ್ಲಿ ಚೀನಾ ಅಣೆಕಟ್ಟು ನಿರ್ಮಿಸಿದರೆ, ಭಾರತ ಮತ್ತು ಬಾಂಗ್ಲಾದೇಶದತ್ತ ನದಿ ನೀರಿನ ಹರಿವಿಗೆ ಧಕ್ಕೆಯಾಗಲಿದೆ. ಬೇಸಿಗೆ ಅವಧಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಎರಡೂ ರಾಷ್ಟ್ರಗಳಿಗೂ ನೀರಿನ ಕೊರತೆ ಕಾಡಬಹುದು. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಲಿದೆ. ಇದು ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು. ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಬಹುದು.
ಡೇಂಜರ್‌ನಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ
ಪ್ರತಿ ಮಳೆಗಾಲದಲ್ಲಿ ಬ್ರಹ್ಮಪುತ್ರ ನದಿಯು ಉಕ್ಕಿ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯದಂತಹ ನದಿಯ ಅಚ್ಚುಕಟ್ಟು ಪ್ರದೇಶದ ರಾಜ್ಯಗಳು ಪ್ರವಾಹಕ್ಕೆ ಒಳಗಾಗುತ್ತಿವೆ. ಮುಂಗಾರು ಅವಧಿಯಲ್ಲಿ ಚೀನಾವು ಅಣೆಕಟ್ಟೆಯಿಂದ ಏಕಾಏಕಿ ನೀರು ಬಿಟ್ಟರೆ, ಭಾರತದಲ್ಲಿ ಪ್ರವಾಹ ಸ್ಥಿತಿ ಇನ್ನಷ್ಟು ಬಿಗಡಾಯಿಸಿ, ಈಶಾನ್ಯ ರಾಜ್ಯಗಳು ನೆರೆಯಿಂದ ತತ್ತರಿಸಿ ಹೋಗಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಿಮಾಲಯದಲ್ಲಿ ಮೇಘಸ್ಫೋಟ, ಭೂಕುಸಿತ ಸಾಮಾನ್ಯವಾಗಿದೆ. ಇದರಿಂದ ದಿಢೀರ್ ಪ್ರವಾಹ ಉಂಟಾದ ನಿದರ್ಶನಗಳೂ ಇವೆ. ಹೀಗಿರುವಾಗ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಅಥವಾ ನಂತರ ಯಾವುದೇ ಅವಘಡ ಜರುಗಿದರೂ ಅರುಣಾಚಲ ಪ್ರದೇಶ, ಅಸ್ಸಾಂ ಮೇಲೆ ಎಫೆಕ್ಟ್ ಆಗುತ್ತೆ.
ಪರಿಸರದ ಮೇಲೆ ಎಫೆಕ್ಟ್
ಅಣೆಕಟ್ಟೆಯ ನಿರ್ಮಾಣವು ಪ್ರಕೃತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ನದಿಯ ಜೀವವೈವಿಧ್ಯಕ್ಕೆ ಧಕ್ಕೆ ತರುವುದಲ್ಲದೆ, ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಹಾಳು ಮಾಡಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ದೊಡ್ಡ ಅಣೆಕಟ್ಟು ಟಿಬೆಟ್‌ನ ಭೂ ಪ್ರದೇಶದ ಸ್ವರೂಪವನ್ನೇ ಬದಲಾಯಿಸಲಿದೆ. ಭಾರಿ ಸಂಖ್ಯೆಯ ಜನರಿಗೆ ಪುನರ್ಸವತಿ ಕಲ್ಪಿಸಬೇಕಾಗುತ್ತದೆ. ಮಣ್ಣಿನ ಸವಕಳಿಯಾಗುತ್ತದೆ, ಹೂಳಿನ ಸಮಸ್ಯೆ ಕಾಡುತ್ತದೆ .
ಭಾರತದ ವಿರುದ್ಧ ‘ವಾಟರ್ ಬಾಂಬ್’
ಡ್ಯಾಮ್‌ನಲ್ಲಿ ಸಂಗ್ರಹವಾದ ನೀರನ್ನು ಚೀನಾ ಒಮ್ಮೆಗೆ ಹರಿಬಿಟ್ಟರೆ ಕೆಳಭಾಗದ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಲಿವೆ. ಇದನ್ನು ಚೀನಾ, ಭಾರತದ ವಿರುದ್ಧ ‘ವಾಟರ್ ಬಾಂಬ್’ ರೀತಿಯಲ್ಲಿ ಬಳಸಬಹುದು ಎಂಬ ಆತಂಕ ಕೂಡ ಹೆಚ್ಚಾಗಿದೆ. 11.5 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದ ಅತೀ ದೊಡ್ಡ ಡ್ಯಾಂ ನಿರ್ಮಾಣ ಮಾಡಲು ಚೀನಾ ತಯಾರಿ ನಡೆಸಿದೆ. ಇಲ್ಲಿ ವಾರ್ಷಿಕವಾಗಿ 300 ಶತಕೋಟಿ ಕಿ.ವ್ಯಾ. ವಿದ್ಯುತ್ ಉತ್ಪಾದಿಸುವ ಗುರಿಯನ್ನು ಚೀನಾ ಹಾಕಿಕೊಂಡಿದೆ.