ಮುನಿದ ಚಿನ್ನ ಒಲಿಯಲಿ.. ಬಂಗಾರದ ದರ ಇಳಿಯಲಿ! – ದೇವಿ ಮುಂದೆ ವಿಶೇಷ ಬೇಡಿಕೆ ಇಟ್ಟ ಭಕ್ತ!

ಚಿನ್ನ, ಬೆಳ್ಳಿ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಮಧ್ಯಮ ವರ್ಗದ ಜನರು ಚಿನ್ನದ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ. ದರ ಏರಿಕೆಯಿಂದಾಗಿ ಸಾಮಾನ್ಯ ಜನರ ಬದುಕಿನ ಮೇಲೆ ಭಾರೀ ಹೊಡೆತ ಬಿದ್ದಿದೆ. ಇದೀಗ ಇಲ್ಲೊಬ್ಬ ವ್ಯಕ್ತಿ ಚಿನ್ನದ ದರ ಇಳಿಕೆಯಾಲಿ ಎಂದು ದೇವರ ಮೊರೆ ಹೋಗಿದ್ದಾನೆ.
ಇದನ್ನೂ ಓದಿ: ಎಣ್ಣೆ ಏಟಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಸ್ಯಾಂಡಲ್‌ವುಡ್ ನಟ! – ನಟ ಮಯೂರ್ ಪಟೇಲ್ ವಿರುದ್ಧ FIR!
ಭಕ್ತರು ತಮ್ಮ ಇಷ್ಠಾರ್ಥ ಸಿದ್ಧಿಗೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲು ದೇವರ ಮೊರೆ ಹೋಗುತ್ತಾರೆ. ಕೆಲವರು ಹರೆಕೆ ಹೊರುತ್ತಾರೆ. ಇದೀಗ ವಿಜಯನಗರ ಜಿಲ್ಲೆಯಲ್ಲಿ ಭಕ್ತನೊಬ್ಬ ವಿಭಿನ್ನ ಹಾಗೂ ಅಪರೂಪದ ಹರಕೆಯನ್ನು ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಚಿನ್ನದ ದರ ಇಳಿಕೆಯಾಗಲಿ ಎಂದು ದೇವರಿಗೆ ಬಾಳೆಹಣ್ಣು ಅರ್ಪಿಸಿದ್ದಾನೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಮ್ನಳ್ಳಿ ಗ್ರಾಮದಲ್ಲಿರುವ ಪ್ರಸಿದ್ಧ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ, ಭಕ್ತ ಕೆ. ನಾಗರಾಜ ಉಲವತ್ತಿ ಅವರು ಚಿನ್ನದ ದರ ಇಳಿಕೆಯಾಗಲಿ ಎಂಬ ವಿಶಿಷ್ಟ ಬೇಡಿಕೆಯನ್ನು ದೇವಿಯ ಮುಂದೆ ಇಟ್ಟಿದ್ದಾರೆ. ಚಿನ್ನದ ದರ ಕಡಿಮೆಯಾಗಲಿ, ಬಡವರು ಹಾಗೂ ಸರ್ವಸಾಮಾನ್ಯರೂ ಚಿನ್ನ ಖರೀದಿಸಲು ಸಾಧ್ಯವಾಗಲಿ ಎಂಬ ಆಶಯದೊಂದಿಗೆ ಈ ಹರಕೆಯನ್ನು ಸಲ್ಲಿಸಿದ್ದಾರೆ.
ಬಾಳೆ ಹಣ್ಣಿನ ಮೇಲೆ ಚಿನ್ನದ ದರ ಇಳಿಯಲಿ, ಮುನಿದ ಚಿನ್ನ ಒಲಿಯಲಿ ಎಂಬ ವಾಕ್ಯವನ್ನು ಬಾಳೆ ಹಣ್ಣಿನ ಮೇಲೆ ಬರೆದು, ಅದನ್ನು ತಾಯಿಯ ರಥೋತ್ಸವದ ವೇಳೆ ಭಕ್ತಿಪೂರ್ವಕವಾಗಿ ಅರ್ಪಿಸುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಡುವೆ, ಈ ವಿಭಿನ್ನ ಹರಕೆ ಎಲ್ಲರ ಗಮನ ಸೆಳೆದಿದ್ದು, ದೇವಿಯ ಕೃಪೆಯಿಂದ ಚಿನ್ನದ ದರ ಇಳಿಯಲಿ ಎಂಬ ಆಶಯವನ್ನು ಭಕ್ತರು ವ್ಯಕ್ತಪಡಿಸಿದ್ದಾರೆ.

ನೋಡಿರಿ

