ಮಧ್ಯ ಚಿಲಿಯಲ್ಲಿ ಭೀಕರ ಕಾಡ್ಗಿಚ್ಚು – ಸಾವಿನ ಸಂಖ್ಯೆ 131 ಕ್ಕೆ ಏರಿಕೆ, 300ಕ್ಕೂ ಅಧಿಕ ಮಂದಿ ನಾಪತ್ತೆ

ಮಧ್ಯ ಚಿಲಿಯಲ್ಲಿ ಭೀಕರ ಕಾಡ್ಗಿಚ್ಚು – ಸಾವಿನ ಸಂಖ್ಯೆ 131 ಕ್ಕೆ ಏರಿಕೆ, 300ಕ್ಕೂ ಅಧಿಕ ಮಂದಿ ನಾಪತ್ತೆ

ಅಮೆರಿಕದ ಮಧ್ಯ ಚಿಲಿಯಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದಾಗಿ ಜನರ ಬದುಕು ಅಕ್ಷರಶಃ ನರಕವಾಗಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 64 ಸಾವಿರ ಎಕರೆ ಕಾಡು ಬೆಂಕಿಗಾಹುತಿಯಾಗಿದೆ. ಭೀಕರ ಕಾಡ್ಗಿಚ್ಚು ಸಿಕ್ಕ ಸಿಕ್ಕ ನಗರಗಳು ಮನೆಗಳು, ಕಾಡುಗಳು, ವನ್ಯಪ್ರಾಣಿಗಳನ್ನ ಬೆಂಕಿ ಸರ್ವನಾಶ ಮಾಡ್ತಿದೆ. ಬೆಂಕಿಯ ರೌದ್ರನರ್ತನದಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭಗವದ್ಗೀತೆ ಮೇಲೆ ಕೈಯಿಟ್ಟು ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಸೆನೆಟರ್ ಆಗಿ ಪ್ರಮಾಣವಚನ ಸ್ವೀಕರಿಸಿದ ಭಾರತ ಮೂಲದ ವಕೀಲ

ಫೆಬ್ರವರಿ 2 ರಿಂದ ಅಮೆರಿಕದ ಮಧ್ಯ ಚಿಲಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕ್ಷಣ ಕ್ಷಣಕ್ಕೂ ಕಾಡ್ಗಿಚ್ಚು ವೇಗವಾಗಿ ಹಬ್ಬುತ್ತಿದೆ. ರಣ ಭೀಕರ ಕಾಡ್ಗಿಚ್ಚಿನಿಂದ ವಾಹಗಳು, ಮನೆ, ಕಟ್ಟಡ ಎಲ್ಲವೂ ಸುಟ್ಟು ಭಸ್ಮವಾಗಿದೆ. ಜನರ ಬದುಕು ಮೂರಾ ಬಟ್ಟೆಯಾಗಿದೆ. ಕಾಡ್ಗಿಚ್ಚಿನ ಜ್ವಾಲೆಗೆ 131 ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. 300ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಹೆಲಿಕಾಪ್ಟರ್‌ ಮತ್ತು ಟ್ರಕ್‌ಗಳನ್ನು ಬಳಸಿ ಬೆಂಕಿ ನಂದಿಸುವ ಕೆಲಸ ಮಾಡಲಾಗ್ತಿದೆ. ಸಾವಿರಾರು ಜನರಿಗೆ ಗಾಯಗಳಾಗಿವೆ. ಕೆಲವರ ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. 4 ಆಸ್ಪತ್ರೆಗಳು ಮತ್ತು 3 ನರ್ಸಿಂಗ್​ ಹೋಮ್​ಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 92 ಪ್ರದೇಶಗಳಲ್ಲಿ ಬೆಂಕಿ ಹಬ್ಬಿದ್ದು, ಮನೆಗಳಲ್ಲಿದ್ದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಾಡ್ಗಿಚ್ಚಿನಿಂದ ಮನೆ ಕಳೆದುಕೊಂಡವರಿಗಾಗಿ ವಾಲ್ಪಾರಾಸೊ ಪ್ರದೇಶದಲ್ಲಿ ಮೂರು ಶೆಲ್ಟರ್‌ಗಳನ್ನು ಸ್ಥಾಪಿಸಲಾಗಿದೆ.

Shwetha M