ವರುಣ ದೇವನ ಕೃಪೆಗಾಗಿ ನಡೆಯಿತು ಮಕ್ಕಳ ಮದುವೆ! – ವಿಶಿಷ್ಟ ಕಲ್ಯಾಣಕ್ಕೆ ಸಾಕ್ಷಿಯಾಯ್ತು ಸಕ್ಕರೆ ನಾಡು
ಮಂಡ್ಯ: ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಪರಾಧ. ಆದರೆ ಇಲ್ಲಿ ಬರೀ ಮನೆಯವರಷ್ಟೇ ಅಲ್ಲ, ಇಡೀ ಗ್ರಾಮಸ್ಥರೆಲ್ಲ ಸೇರಿ ಮಕ್ಕಳ ಮದುವೆ ಮಾಡಿಸಿದ್ದಾರೆ. ಆದರೆ ಇದು ಒರಿಜಿನಲ್ ಮದುವೆ ಅಲ್ಲ, ಮದುವೆಯನ್ನೇ ಹೋಲುವ ಅಣುಕು ಮದುವೆ. ಅಂದಹಾಗೆ ಇದು ನಡೆದಿದ್ದು ಮಳೆಗಾಗಿ. ಹೌದು, ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಬಾರದಿದ್ದರೆ ಬೇರೆ ಬೇರೆ ರೀತಿಯ ಆಚರಣೆಗಳು ನಡೆಯುತ್ತವೆ. ಕಪ್ಪೆ ಮದುವೆ, ಕತ್ತೆ ಮದುವೆ ಮಾಡಿಸಿ, ಮಳೆಗಾಗಿ ಪ್ರಾರ್ಥಿಸುತ್ತಾರೆ. ಆದರೆ ಸಕ್ಕೆರೆನಾಡಿನ ಜನರು ಮಳೆಗಾಗಿ ಇಬ್ಬರು ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: ಎಡಪಂಥೀಯ ಮಹಿಳೆಯರಿಂತ ಬಲಪಂಥೀಯರೇ ಹೆಚ್ಚು ಸಂತೋಷದಿಂದ ಇರುತ್ತಾರೆ! – ಇದು ಭಾವನೆಗಳ ವಿಮರ್ಶೆ!
ರಾಜ್ಯದಲ್ಲಿ ಮಳೆ ವಿಳಂಬವಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಹಲವು ಭಾಗಗಳು ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಮುಂಗಾರು ದೇಶಕ್ಕೆ ಆಗಮಿಸಿ ಹಲವು ದಿನಗಳೇ ಕಳೆದರೂ ಮಳೆಯ ಸುಳಿವೇ ಇಲ್ಲ ಹೀಗಾಗಿ ಜನರು ಮಳೆಗಾಗಿ ವಿಚಿತ್ರ ಆಚರಣೆಗಳ ಮೊರೆ ಹೋಗುತ್ತಿದ್ದಾರೆ. ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಗಂಗನಹಳ್ಳಿ ಗ್ರಾಮದ ಜನರು ಮಳೆಗಾಗಿ ಪ್ರಾರ್ಥಿಸಿ ರಾತ್ರಿ ವೇಳೆ ಮಕ್ಕಳ ಮದುವೆ ಮಾಡಿದ್ದಾರೆ. ಈ ವಿಚಿತ್ರ ಸಂಪ್ರದಾಯದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಈ ಮದುವೆಯಲ್ಲಿ ಗಂಡು ಮಕ್ಕಳನ್ನೇ ವಧು – ವರನ ವೇಷದಲ್ಲಿ ಶೃಂಗರಿಸಿ ಮದುವೆ ಮಾಡಿಸಲಾಗುತ್ತದೆ. ಒಂದು ಗಂಡು ಮಗುವಿಗೆ ವಧುವಿನ ಉಡಿಗೆ ತೊಡಿಸಿ ಮತ್ತೊಂದು ಗಂಡು ಮಗುವಿಗೆ ವರನಅಲಂಕಾರ ಮಾಡಿ ಗುರು ಹಿರಿಯರ ಸಮಕ್ಷಮದಲ್ಲಿಯೇ ಸಾಂಕೇತಿಕವಾಗಿ ಮಾಂಗಲ್ಯ ಕಟ್ಟಿಸಿ ವಿವಾಹ ಮಾಡಲಾಗುತ್ತದೆ. ಮದುವೆಯ ಬಳಿಕ ಗ್ರಾಮಸ್ಥರೆಲ್ಲರು ಸೇರಿ ಜನರಿಗೆ ಊಟ ಹಾಕಿಸಿದ್ದಾರೆ.
ಈ ವಿಚಿತ್ರ ಮದುವೆ ಸಂಪ್ರದಾಯದ ಆಚರಣೆಯಿಂದ ಮಳೆ ಬರುತ್ತದೆ ಎಂಬ ನಂಬಿಕೆ ಇಲ್ಲಿನ ಜನರಿಗೆ ಇದೆ. ಈ ವಿಚಿತ್ರ ಆಚರಣೆಯ ಮದುವೆ ಸಂಪ್ರದಾಯಕ್ಕೆ ಸಕ್ಕರೆನಾಡಿನ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ.