ಮಕ್ಕಳು, ಗರ್ಭಿಣಿಯರು ಮಣ್ಣು, ಸೀಮೆ ಸುಣ್ಣ ತಿನ್ನಲು ಇದೇ ಕಾರಣ!
ಸಾಮಾನ್ಯವಾಗಿ ಮಕ್ಕಳು ಹೊರಗೆ ಆಡುತ್ತಿರುವಾಗ ಕೈಗೆ ಏನು ಸಿಕ್ಕರೂ ಬಾಯಿಗೆ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಕೆಲ ಮಕ್ಕಳಂತೂ ವಿಚಿತ್ರ ಆಹಾರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಗರ್ಭಿಣಿಯರು ಕೂಡ ಮಣ್ಣು, ಸೀಮೆ ಸುಣ್ಣ ತಿನ್ನಬೇಕು ಅಂತಾ ಬಯಕೆ ವ್ಯಕ್ತ ಪಡಿಸುತ್ತಾರೆ. ಗರ್ಭಿಣಿಯರು ಹಾಗೂ ಮಕ್ಕಳು ಆಹಾರ ವಸ್ತುಗಳನ್ನು ತಿನ್ನಲು ಬಯಸುತ್ತಿದ್ದರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರ್ಥ!
ಹೌದು, ಮಕ್ಕಳು, ಗರ್ಭಿಣಿಯರು ಹೀಗೆ ನಾನ್ ಫುಡ್ ತಿನ್ನೋ ಅಭ್ಯಾಸಕ್ಕೆ ಕಾರಣ ‘ಪಿಕಾ’ ಎಂಬ ಅಸ್ವಸ್ಥತೆ. ಇದೊಂದು ಮಾನಸಿಕ ಅಸ್ವಸ್ಥತೆ. ಪೌಷ್ಟಿಕಾಂಶದ ಕೊರತೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಪ್ರಪಂಚದಲ್ಲಿ ಒಂದರಿಂದ ಆರು ವರ್ಷ ವಯಸ್ಸಿನ ಶೇ 30 ರಷ್ಟು ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ.
ಇದನ್ನೂ ಓದಿ: ಮಕ್ಕಳ ಬೆಳವಣಿಗೆಗೆ ಕಂಟಕವಾಗುತ್ತಿದೆ ಬೇಬಿ ವಾಕರ್!
ʼಪಿಕಾ ಅಸ್ವಸ್ಥತೆಯಿಂದ ಬಳಲುತ್ತಿರುವವರು ಆಹಾರ ಎಂದು ಪರಿಗಣಿಸದ ವಸ್ತುಗಳನ್ನು ತಿನ್ನಲು ಇಷ್ಟಪಡ್ತಾರೆ. ಚಾಕ್ ಪೀಸ್, ಪೇಪರ್, ಮಣ್ಣು, ಘನ ಪದಾರ್ಥ ತಿನ್ನಲು ಇಷ್ಟ ಪಡ್ತಾರೆ. ಇದು ಹೆಚ್ಚಾಗಿ ಮಕ್ಕಳಲ್ಲಿ, ಗರ್ಭಾವಸ್ಥೆಯಲ್ಲಿ ಅಪೌಷ್ಟಿಕತೆಗೆ ಒಳಗಾದ್ರೆ ಕಾಣಿಸಿಕೊಳ್ಳುತ್ತೆ. ಇದು ಎಲ್ಲಾ ಮಕ್ಕಳು ತಿಂತಾರಲ್ಲ. ಇದು ಸಾಮಾನ್ಯ ಅಂತಾ ಲಘುವಾಗಿ ತೆಗೆದುಕೊಳ್ಳಬೇಡಿ. ಇದು ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಕಬ್ಬಿಣಾಂಶದ ಕೊರತೆ, ಅನುವಂಶಿಕ ಅಸ್ವಸ್ಥತೆ, ಒಸಿಡಿಯಂತಹ ಸಮಸ್ಯೆಗಳನ್ನು ಹೊಂದಿದ್ದರೆ, ಇದು ಹೆಚ್ಚಾಗುವ ಸಾಧ್ಯತೆ ಇರುತ್ತೆ. ಹೀಗಾಗಿ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಅಂತಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.