ಕುಂದಾಪುರದಲ್ಲಿ ಹೆರಿಗೆ ವೇಳೆ ಮಗು ಸಾವು – ಸರ್ಕಾರಿ ಆಸ್ಪತ್ರೆ ವಿರುದ್ಧ ಆಹೋರಾತ್ರಿ ಪ್ರತಿಭಟನೆ

ಕುಂದಾಪುರದಲ್ಲಿ ಹೆರಿಗೆ ವೇಳೆ ಮಗು ಸಾವು – ಸರ್ಕಾರಿ ಆಸ್ಪತ್ರೆ ವಿರುದ್ಧ ಆಹೋರಾತ್ರಿ ಪ್ರತಿಭಟನೆ

9 ತಿಂಗಳು ಹೊಟ್ಟೆಯಲ್ಲಿ ಹೊತ್ತುಕೊಂಡು, ಪ್ರತಿ ಹಗಲು ಪ್ರತಿ ರಾತ್ರಿ ಕಂದನ ಕನವರಿಕೆಯಲ್ಲಿ ಕಳೆದ ತಾಯಿ ಹೃದಯವದು. 9 ತಿಂಗಳು ತುಂಬಿದ ಮೇಲೆ ಇನ್ನೇನು ತನ್ನ ಕರುಳಬಳ್ಳಿ ಕೈ ಸೇರುತ್ತದೆ ಎಂಬ ಸಂಭ್ರಮ. ಗರ್ಭಿಣಿ ಕಳೆಯುವ ಒಂದೊಂದು ದಿನದ ಸಂಕಟ, ಕಾತರ, ನೋವು ಎಲ್ಲವೂ ಆಕೆಗೆ ಮಾತ್ರ ಗೊತ್ತು. ಆದರೆ, ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದೇ ಬೇರೆ. ಇನ್ನೇನು ಮಗು ತನ್ನ ಕೈಸೇರುತ್ತೆ ಅಂತಾ ಕಾಯುತ್ತಿದ್ದ ಆ ತಾಯಿಯ ಹೃದಯವನ್ನು ಆಸ್ಪತ್ರೆ ವೈದ್ಯರು ಚೂರು ಚೂರು ಮಾಡಿದ್ದಾರೆ.

ಇದನ್ನೂ ಓದಿ: ಆಹಾ… ಬಿರಿಯಾನಿ ಎಂದು ಹೊಟ್ಟೆತುಂಬಾ ತಿಂದ ಮೇಲೆ ಕೆಟ್ಟಿತು ಹೊಟ್ಟೆ – 17 ಜನ ಅಸ್ವಸ್ಥ, ಶಾಸಕರಿಂದ ಆರೋಗ್ಯ ವಿಚಾರಣೆ

ನವೆಂಬರ್ 17 ರಂದು ಗಂಗೊಳ್ಳಿ ಮೂಲದ ಶ್ರೀನಿವಾಸ ಖಾರ್ವಿ ಅವರ ಹೆಂಡತಿ ಜ್ಯೋತಿ ಅವರು ಹೆರಿಗೆಗೆಂದು ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಿಗ್ಗೆ ಹೆರಿಗೆ ಮಾಡಿಸಲು ವೈದ್ಯರು ಕರೆದುಕೊಂಡು ಹೋಗಿದ್ದರು. ಜ್ಯೋತಿ ಮನೆಯವರು ಮಗುವಿನ ಆಗಮನದ ನಿರೀಕ್ಷೆಯಲ್ಲಿ ಹೊರಗೆ ಕಾಯುತ್ತಿದ್ದರು. ಆಗ ಬಂದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಇದರಿಂದ ನೊಂದ ಕುಟುಂಬದವರು ಸೋಮವಾರದಿಂದಲೇ ಕುಂದಾಪುರ ಸರಕಾರಿ ಆಸ್ಪತ್ರೆ ಮುಂದೆ ಅಹೋ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಹೆರಿಗೆ ವೇಳೆ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಆಸ್ಪತ್ರೆಯ ಎದುರು ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸಬೇಕು, ಡಿಸಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಹೊಕ್ಕುಳ ಬಳ್ಳಿ ಸುತ್ತಿಕೊಂಡು ಮಗುವಿನ ಸಾವಾಗಿದೆ ಎಂದು ವೈದ್ಯರು ಉಡಾಫೆಯಾಗಿ ಮಾತಾಡಿದ್ದಾರೆ. ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವವಿದೆ ಎಂದರೂ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎಂದು ಕುಟುಂಬಸ್ಥರು ವೈದ್ಯರ ಮೇಲೆ ಆರೋಪ ಮಾಡಿದ್ದಾರೆ. ಇಡೀ ರಾತ್ರಿ ಕುಂದಾಪುರ ಸರಕಾರಿ ಆಸ್ಪತ್ರೆ ಮುಂದೆ ಕುಳಿತು ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಕೂಡ ವೈದ್ಯರ ನಿರ್ಲಕ್ಷ್ಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಡಿಎಚ್ ಓ, ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋ ಅವರು ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರೂ ಕೂಡಾ ನ್ಯಾಯ ಸಿಗುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ನೊಂದ ಕುಟುಂಬ ತಿಳಿಸಿದೆ. ಪ್ರಕರಣದ ಸಂಪೂರ್ಣ ತನಿಖೆ ಆಗಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

Sulekha