ಕಾಫಿನಾಡಿನಲ್ಲಿ ಪ್ರವಾಸಿತಾಣಗಳಿಗೆ 6 ದಿನ ನಿರ್ಬಂಧ – 3 ದಿನ ಮದ್ಯ ಮಾರಾಟ ನಿಷೇಧ!

ಕಾಫಿನಾಡಿನಲ್ಲಿ ಪ್ರವಾಸಿತಾಣಗಳಿಗೆ 6 ದಿನ ನಿರ್ಬಂಧ – 3 ದಿನ ಮದ್ಯ ಮಾರಾಟ ನಿಷೇಧ!

ಸಾಲು ಸಾಲು ರಜೆ ಇದೆ ಅಂತಾ ಕಾಫಿನಾಡಿಗೆ ಟೂರ್‌ ಹೋಗಲು ಪ್ಲಾನ್‌ ಮಾಡಿಕೊಂಡವರಿಗೆ ಮಹತ್ವದ ಸುದ್ದಿಯೊಂದಿದೆ. ಶುಕ್ರವಾರದಿಂದ (ಡಿ.22) 6 ದಿನಗಳ ಕಾಲ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಹೌದು, ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಗೆ ನಿರ್ಬಂಧ ಹೇರಲಾಗಿದೆ. ದತ್ತಜಯಂತಿ ಹಿನ್ನೆಲೆಯಲ್ಲಿ ಚಂದ್ರದ್ರೋಣ ಪರ್ವತಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಮೂರು ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಮದ್ಯ ಮಾರಾಟ ಕೂಡ ಬಂದ್‌ ಮಾಡಲಾಗಿದೆ.

ಇದನ್ನೂ ಓದಿ: ಜಮ್ಮುಕಾಶ್ಮೀರದ ಪೂಂಚ್‌ನಲ್ಲಿ ಉಗ್ರರ ದಾಳಿ – ಹುತಾತ್ಮರ ಸಂಖ್ಯೆ 5 ಕ್ಕೆ ಏರಿಕೆ

ಇಂದಿನಿಂದ ಡಿಸೆಂಬರ್ 27ರ ಬುಧವಾರ ಸಂಜೆವರೆಗೆ ಎಲ್ಲಾ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹೇರಲಾಗುತ್ತಿದೆ. ಹೋಂಸ್ಟೇ, ರೆಸಾರ್ಟ್ ಗೆ ಬುಕ್ ಮಾಡಿದ್ದರೆ ಬರಬಹುದು, ತೊಂದರೆ ಇಲ್ಲ. ಆದರೆ ಪ್ರವಾಸಿ ತಾಣಗಳಿಗೆ ಹೋಗುವಂತಿಲ್ಲ, ಹೋಂ ಸ್ಟೇ, ರೆಸಾರ್ಟ್‍ನಲ್ಲೇ ಇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಡಿಸೆಂಬರ್ 23, 24 ವಾರಾಂತ್ಯ ಇದೆ. 25ರಂದು ಸೋಮವಾರ ಕ್ರಿಸ್ಮಸ್ ಪ್ರಯುಕ್ತ ರಜೆ ಇದೆ. ಹೀಗಾಗಿ ಅನೇಕರು ಪ್ರವಾಸಕ್ಕೆ ಪ್ಲ್ಯಾನ್ ಮಾಡಿರುವ ಸಾಧ್ಯತೆ ಇದ್ದು, ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಯೋಚಿಸಿರುವ ಸಾಧ್ಯತೆಯೂ ಇದೆ. ಹೀಗಾಗಿ ಜಿಲ್ಲಾಡಳಿತ ಮುಂಚಿತವಾಗಿಯೇ ಮಾಹಿತಿ ನೀಡಿತ್ತು. ಇದೀಗ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.

ಸದ್ಯ ಪ್ರವಾಸಿಗರ ನಿರ್ಬಂಧದಿಂದ ಸ್ಥಳೀಯರಿಗೆ ಕೊರೊನಾ ಆತಂಕ ದೂರವಾಗಿದೆ. ಮುಳ್ಳಯ್ಯನಗಿರಿ ಭಾಗಕ್ಕೆ ರಾಜ್ಯ-ಕೇರಳದಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಇದೀಗ ಚಂದ್ರದ್ರೋಣ ಪರ್ವತಗಳ ಸಾಲು ಒಂದು ವಾರ ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ದತ್ತಜಯಂತಿಯ ಕಡೇ ದಿನ 5 ತಾಲೂಕುಗಳಾದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರಗಳಲ್ಲಿ ಎಣ್ಣೆ ಬಂದ್ ಮಾಡಲಾಗುತ್ತಿದೆ.

Shwetha M