ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ವಾಹನ ಸವಾರರಿಗೆ ಹೊಸ ರೂಲ್ಸ್!‌ – ಇನ್ಮುಂದೆ ಭೂಮ್ ಬ್ಯಾರಿಯರ್ ವ್ಯವಸ್ಥೆ!

ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ವಾಹನ ಸವಾರರಿಗೆ ಹೊಸ ರೂಲ್ಸ್!‌ – ಇನ್ಮುಂದೆ ಭೂಮ್ ಬ್ಯಾರಿಯರ್ ವ್ಯವಸ್ಥೆ!

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ದಾರಿಯಾಗಿರುವ ಚಾರ್ಮಾಡಿ ಘಾಟ್‌ನಲ್ಲಿ ಇದೀಗ ಹೊಸ ನಿಯಮವನ್ನು ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿದೆ. ಇನ್ಮುಂದೆ ಭೂಮ್ ಬ್ಯಾರಿಯರ್ ವ್ಯವಸ್ಥೆ ಜಾರಿಯಾಗಲಿದೆ.

ಇದನ್ನೂ ಓದಿ: ಬೆಳಗಿನ ಉಪಾಹಾರಕ್ಕೆ  ಅನ್ನ ತಿನ್ನಬಹುದೇ? – ತಜ್ಞರು ಹೇಳುವುದೇನು?

ಹೌದು, ರಾತ್ರಿ ವೇಳೆ ಸುಗಮವಾಗಿ ಯಾವುದೇ ರೀತಿಯ ಅಡೆತಡೆ ಇಲ್ಲದೆ ಸಂಚರಿಸುವ ವಾಹನಗಳಿಗೆ ಹೊಸ ಕಾನೂನು ನಿಯಮ ಜಾರಿಗೆ ಮಾಡಲಾಗಿದೆ. ಇನ್ನು ಮುಂದೆ ಕನಿಷ್ಠ ಐದು ವಾಹನಗಳು ಸೇರಿದಾಗ ಮಾತ್ರ ಒಟ್ಟಿಗೆ ಎಂಟ್ರಿ ಸಿಗಲಿದೆ. ರಾತ್ರಿ ವೇಳೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ದಾಟುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ, ಐದು ವಾಹನಗಳು ಒಟ್ಟಾಗಿ ಹೊರಡುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ಹೊಸ ನಿಯಮ ಚಾರ್ಮಾಡಿ ಘಾಟ್​ನಲ್ಲಿ ರಾತ್ರಿ ಸಂಚಾರ ಮಾಡುವ ವಾಹನಗಳಿಗೆ ಅನ್ವಯವಾಗಲಿದೆ.

ಚಾರ್ಮಾಡಿ ಫಾಟ್​ಗೆ ತೆರಳಲು ರಾತ್ರಿ12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗು ಬರುವ ವಾಹನಗಳನ್ನು ಕೊಟ್ಟಿಗೆಹಾರ ಚೆಕ್​​ಪೋಸ್ಟ್​ ಬಳಿ ನಿಲ್ಲಿಸಿ 5 ವಾಹನ ಜೊತೆ ಮಾಡಿ ಬಿಡಲಾಗುತ್ತಿದೆ. ಚಾರ್ಮಡಿ ಘಾಟ್​ನಲ್ಲಿ ರಾತ್ರಿ ವೇಳೆ ಒಂದೊಂದೇ ವಾಹನ ಸಂಚಾರವನ್ನು ಚಿಕ್ಕಮಗಳೂರು ಪೊಲೀಸ್ ಇಲಾಖೆ ನಿಷೇಧಿಸಿದೆ. ಈ ನಿಯಮ ಅಪರಾಧ ತಡೆಯುವ ನಿಟ್ಟಿನಲ್ಲಿ ಜಾರಿ ಮಾಡಲಾಗಿದೆ. 24 ಗಂಟೆಯೂ ಕೊಟ್ಟಿಗೆಹಾರ ಚೆಕ್​​​ಪೋಸ್ಟ್​ನಲ್ಲಿ ಓರ್ವ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 24 ಗಂಟೆಯೂ ಚಾರ್ಮಾಡಿ ಘಾಟ್​​ನಲ್ಲಿ ಪೊಲೀಸ್ ವಾಹನ ಗಸ್ತು ತಿರುಗುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ, ಅಪರಾಧ ಕೃತ್ಯ ಎಸಗಿ ಪರಾರಿಯಾಗುತ್ತಿದ್ದವರ ಬಂಧನಕ್ಕೆ ಚಿಕ್ಕಮಗಳೂರು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ದಟ್ಟ ಅರಣ್ಯದಿಂದ ಸುತ್ತುವರಿದ ಈ ಘಾಟ್‌ನಲ್ಲಿ ರಾತ್ರಿ ವೇಳೆ ಗೋ ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಲವಾರು ಬಾರಿ ಈ ಕುರಿತು ಆರೋಪಗಳ ಹಾಗೂ ದೂರುಗಳು ಕೇಳಿ ಬಂದಿದ್ದವು. ಇಂತಹ ದೂರುಗಳು ಹೆಚ್ಚಾಗಿದ್ದರ ಪರಿಣಾಮ ಇದಕ್ಕೆಲ್ಲಾ ಬ್ರೇಕ್ ಹಾಕಲು ಪೊಲೀಸರು ಈಗ ಮುಂದಾಗಿದ್ದಾರೆ.
ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ಈಗಿರುವ ಬ್ಯಾರಿಕೇಡ್ ಬದಲಿಗೆ ಹೊಸ ಭೂಮ್ ಬ್ಯಾರಿಯರ್ ನಿರ್ಮಿಸಲಾಗುತ್ತಿದೆ. ರಾತ್ರಿ ವೇಳೆ ಒಬ್ಬ ಪಿಎಸ್​ಐ ನೇತೃತ್ವದಲ್ಲಿ ಕಾವಲು ನಿಲ್ಲಲಿದ್ದಾರೆ. ಜೊತೆಗೆ ಚೆಕ್ ಪೋಸ್ಟ್ ನಿಂದ ಒಂದೂವರೆ ಕಿಲೋ ಮೀಟರ್​ ದೂರದಲ್ಲಿರುವ ಕಚ್ಚಾ ರಸ್ತೆಯನ್ನು ಗೋ ಕಳ್ಳರು ದುರುಪಯೋಗ ಮಾಡುವರೆಂಬ ದೂರಿನ ಹಿನ್ನೆಲೆ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ಆ ರಸ್ತೆಯಲ್ಲಿ ಗೇಟ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕ್ರಮ್​ ಅಮಟೆ ಮಾಹಿತಿ ನೀಡಿದರು.

Shwetha M