ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಬೀಟಮ್ಮ ಗ್ಯಾಂಗ್‌ ಉಪಟಳ – ಲಕ್ಷಾಂತರ ಮೌಲ್ಯದ ಬೆಳೆ ನಾಶ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಬೀಟಮ್ಮ ಗ್ಯಾಂಗ್‌ ಉಪಟಳ – ಲಕ್ಷಾಂತರ ಮೌಲ್ಯದ ಬೆಳೆ ನಾಶ

ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಉಪಟಳ ಜೋರಾಗಿಯೇ ಇದೆ. ಇತ್ತೀಚೆಗೆ ದಾಂಧಲೆ‌ ಎಬ್ಬಿಸಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ ಬೀಟಮ್ಮ ಗ್ಯಾಂಗ್  ದಿನಕ್ಕೊಂದು ಗ್ರಾಮದಲ್ಲಿ ಕಣಿಸಿಕೊಳ್ಳುತ್ತಿದೆ. ಇದರಿಂದಾಗಿ ಅಲ್ಲಿನ ಗ್ರಾಮಸ್ಥರು ಭಯದಿಂದ ಓಡಾಡುವ ವಾತಾವರಣ ನಿರ್ಮಾಣವಾಗಿದೆ.

ಕಳೆದ ಕೆಲವು ದಿನಗಳಿಂದ ಈ ಬೀಟಮ್ಮ ಗ್ಯಾಂಗ್‌ ಹಾಸನ, ಚಿಕ್ಕಮಗಳೂರು ಗಡಿ ಭಾಗದಲ್ಲಿ ಬೀಡುಬಿಟ್ಟಿದೆ. ನಿತ್ಯ ಒಂದೊಂದು ಗ್ರಾಮದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಿಗೆ ಶಾಕ್‌ ನೀಡುತ್ತಿದೆ. ಇದೀಗ ಮೂಡಿಗೆರೆ ತಾಲೂಕಿನಲ್ಲಿ ಬೀಡುಬಿಟ್ಟಿರುವ ಈ ಗ್ಯಾಂಗ್​ನ ದಾಂಧಲೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶಗೊಂಡಿದೆ. ಕಾಫಿ, ಮೆಣಸು, ಬಾಳೆ ಬೆಳೆ ನಾಶಗೊಂಡಿದೆ. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕನ್ನಡ ಬೋರ್ಡ್ ಅಳವಡಿಕೆಗೆ ಇದ್ದ ಗಡುವು ಮತ್ತೆ ವಿಸ್ತರಣೆ – ಯಾವಾಗ ಕೊನೆ ದಿನ?

ಕಾರ್ ಬೈಲು, ನಂದಿಪುರ, ಮಾಕೋನಹಳ್ಳಿ, ಚಂದ್ರಾಪುರದಲ್ಲಿ ಸಂಚಾರ ಮಾಡುತ್ತಿರುವ ಬೀಟಮ್ಮ ಗ್ಯಾಂಗ್, ಮಾಕೋನಹಳ್ಳಿ ಹಾಗೂ ಕಾರ್ ಬೈಲು ಗ್ರಾಮಗಳಲ್ಲಿ 10 ಎಕರೆಗೂ ಅಧಿಕ ಪ್ರದೇಶದಲ್ಲಿ ಕಾಫಿ ತೋಟ ನಾಶಗೊಳಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕಾಡಾನೆ ಹಿಂಡನ್ನು ಕಾಡಿಗಟ್ಟುವಂತೆ ಆಗ್ರಹಿಸಿದ್ದಾರೆ.

ಇನ್ನು ಅರಣ್ಯ ಇಲಾಖೆ ವಿರುದ್ಧವೇ ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ. ನಾನು ನಡೆದಿದ್ದೇ ದಾರಿ ಎಂದು ಬೀಟಮ್ಮ ಗ್ಯಾಂಗ್ ಚಿಕ್ಕಮಗಳೂರು ಜಿಲ್ಲೆಯ ಹಲವು ಗ್ರಾಮಗಳಿಗೆ ಲಗ್ಗೆ ಇಡುತ್ತಿದೆ. ಈ ಗ್ಯಾಂಗ್ ನಗರ ಪ್ರದೇಶಕ್ಕೆ ಎಂಟ್ರಿ ಕೊಡದಂತೆ ನೋಡಿಕೊಳ್ಳಲು ಇಟಿಎಫ್ ಸಿಬ್ಬಂದಿ ಕಾವಲು ನಿಂತಿದ್ದರು. ಆದರೆ, ಈ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ಸಂಬಳವಿಲ್ಲ, ಕಾರ್ಯಚರಣೆ ವೇಳೆ ಊಟ-ತಿಂಡಿಯೂ ನಿಡುತ್ತಿಲ್ಲವೆಂದು ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿ ಅರಣ್ಯ ಇಲಾಖೆ ವಿರುದ್ಧ ಅಸಾಮಾಧಾನ ಹೊರಹಾಕಿದ್ದರು. ಅಲ್ಲದೆ, ಕೆಲಸಕ್ಕೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಬೀಟಮ್ಮ ಗ್ಯಾಂಗ್ ಬಲಿಷ್ಠವಾಗಿದೆ. ಸಿಕ್ಕ ಸಿಕ್ಕ ಕಡೆಗಳಲ್ಲಿ ದಾಳಿ ನಡೆಸಿ ಸಿಕ್ಕ ಆಹಾರ ತಿನ್ನುತ್ತಿವೆ. ಇವುಗಳ ಕಾರ್ಯಚರಣೆಗೆ ಕರೆಸಿದ್ದ ಕುಮ್ಕಿ ಆನೆಗಳ ಮೇಲೂ ಬೀಟಮ್ಮ ಗ್ಯಾಂಗ್ ದಾಳಿ ನಡೆಸಿತ್ತು. ಕುಮ್ಕಿ ಕ್ಯಾಂಪ್‌ನಲ್ಲಿದ್ದ ಅಭಿಮನ್ಯು, ಮಹೇಂದ್ರ, ಭೀಮ, ಧನಂಜಯ, ಸುಗ್ರೀವ, ಹರ್ಷ, ಅಶ್ವತ್ಥಾಮ, ಪ್ರಶಾಂತ ಹೆಸರಿನ ಆನೆಗಳು ಮತ್ತಾವರ ಗ್ರಾಮದ ಅರಣ್ಯ ಇಲಾಖೆಯ ಗೆಸ್ಟ್ ಹೌಸ್​ನಲ್ಲಿ ಇರಿಸಲಾಗಿತ್ತು. ಆಗ ಬೀಟಮ್ಮ ಗ್ಯಾಂಗ್ ದಾಳಿ ನಡೆಸಿತ್ತು. ಇದರಿಂದ ಭಯಗೊಂಡ ಅರಣ್ಯ ಸಿಬ್ಬಂದಿ ಅಭಿಮನ್ಯ ಟೀಮನ್ನು ಮೂಡಿಗೆರೆಗೆ ಶಿಫ್ಟ್ ಮಾಡಿದ್ದರು.

Shwetha M