ಕೇರಳ ಬಾಲಕಿ ಸಾವು ಕೇಸ್ – ನಾಪತ್ತೆಗೂ ಮೊದಲು ಫೋನ್ನಲ್ಲಿ ಮಾತನಾಡಿದ್ದ ಶ್ರೀನಂದಾ!

ಪ್ರವಾಸಕ್ಕೆಂದು ಕೇರಳದಿಂದ ಚಿಕ್ಕಮಗಳೂರಿಗೆ ಬಂದಿದ್ದ ಶ್ರೀನಂದಾ (15) ದುರಂತ ಅಂತ್ಯ ಕಂಡಿದ್ದಾಳೆ. ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಪ್ರಪಾತಕ್ಕೆ ಬಿದ್ದು ಜೀವ ಕಳೆದುಕೊಂಡಿದ್ದಾಳೆ. ಇದೀಗ ಈ ಪ್ರಕರಣಕ್ಕೆ ಬಿಗ್ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾಗುವುದಕ್ಕೂ ಮುನ್ನ ಬಾಲಕಿ15 ನಿಮಿಷ ಫೋನ್ ನಲ್ಲಿ ಮಾತಾಡಿದ್ದಳು ಅನ್ನೋದು ರಿವೀಲ್ ಆಗಿದೆ.
ಇದನ್ನೂ ಓದಿ: SUPER MAN ಸೂರ್ಯವಂಶಿ – RR ವಿರುದ್ಧ ಮುಗ್ಗರಿಸಿದ RCB
ಕೇರಳದ ನಿವಾಸಿಯಾಗಿರುವ ಶ್ರೀನಂದಾ ತನ್ನ ಕುಟುಂಬದವರೊಂದಿಗೆ ಪ್ರವಾಸಕ್ಕಾಗಿ ಬಂದಿದ್ದ ಸಂದರ್ಭದಲ್ಲಿ ಬಾಲಕಿ ಪ್ರಪಾತಕ್ಕೆ ಬಿದ್ದಿದ್ದಳು. ಮಂಗಳವಾರ ಸಂಜೆ ಮಾಣಿಕ್ಯಧಾರಾ ಜಲಪಾತದ ಸುತ್ತಮುತ್ತ ಕಾಣೆಯಾಗಿದ್ದ ಆಕೆಯನ್ನು ಹುಡುಕಲು ಪೊಲೀಸರು ಹಾಗೂ ಸ್ಥಳೀಯರು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ, ಮೂರು ದಿನಗಳ ನಂತರ ಆಕೆಯ ಮೃತದೇಹ ಪತ್ತೆಯಾಗಿತ್ತು. ಇದೀಗ ಪ್ರಾಥಮಿಕ ತನಿಖೆಯ ವೇಳೆ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಶ್ರೀನಂದಾ ನಾಪತ್ತೆಯಾಗುವ ಮುನ್ನ ಸುಮಾರು 1000 ಸೆಕೆಂಡ್ಗಳ ಕಾಲ ಮೊಬೈಲ್ನಲ್ಲಿ ಮಾತನಾಡಿದ್ದಳು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ವಿಶೇಷವಾಗಿ, ಆಕೆ ತನ್ನ ಸ್ನೇಹಿತೆಯೊಂದಿಗೇ ಸುಮಾರು ಹದಿನೈದು ನಿಮಿಷಗಳ ಕಾಲ ಸಂಭಾಷಣೆ ನಡೆಸಿದ್ದಾಳೆ ಎಂಬ ಮಾಹಿತಿಯೂ ಹೊರಬಿದ್ದಿದೆ.
ಇದಲ್ಲದೆ, ಮೊಬೈಲ್ ಬಳಕೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ತಂದೆ ಆಕೆಯನ್ನು ಗದರಿಸಿದ್ದರೆಂಬ ಮಾಹಿತಿ ಕೂಡ ಕುಟುಂಬ ಮೂಲಗಳಿಂದ ಲಭ್ಯವಾಗಿದೆ. ಈ ಹಿನ್ನೆಲೆ, ತಂದೆಯ ಗದರಿಕೆಯಿಂದ ಮನಸ್ಸಿಗೆ ಬೇಸರಗೊಂಡು ಬಾಲಕಿ ಅತಿ ಎತ್ತರದ ಪ್ರದೇಶದಿಂದ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗುತ್ತಿದೆ. ಆದರೆ, ಈ ವಿಷಯವನ್ನು ಪೊಲೀಸರು ಇನ್ನಷ್ಟು ಪರಿಶೀಲಿಸುತ್ತಿದ್ದಾರೆ.
ಇನ್ನೊಂದೆಡೆ, ಬಾಲಕಿಯ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರು ತಜ್ಞ ವೈದ್ಯರಿಂದ ವಿಡಿಯೋ ದಾಖಲಾತಿಯೊಂದಿಗೆ ಪರಿಶೀಲನೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿನ ನಿಜವಾದ ಕಾರಣ ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ, ಈ ಪ್ರಕರಣದಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಇದ್ದು, ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆಯಿದೆ.

ನೋಡಿರಿ

