ಸುಧಾಕರ್‌ಗೆ ಒಂದು ವೋಟ್‌ ಜಾಸ್ತಿ ಬಂದ್ರೂ ಶಾಸಕ ಸ್ಥಾನಕ್ಕೆ ರಾಜೀನಾಮೆ -ಪ್ರದೀಪ್ ಈಶ್ವರ್

ಸುಧಾಕರ್‌ಗೆ ಒಂದು ವೋಟ್‌ ಜಾಸ್ತಿ ಬಂದ್ರೂ ಶಾಸಕ ಸ್ಥಾನಕ್ಕೆ ರಾಜೀನಾಮೆ -ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಹಾಗೂ ಡಾ. ಕೆ ಸುಧಾಕರ್‌ ನಡುವಿನ ಜಟಾಪಟಿ ನಿಲ್ಲುವಂತೆ ಕಾಣುತ್ತಿಲ್ಲ.. ಇದೀಗ ಪ್ರದೀಪ್‌ ಈಶ್ವರ್‌ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಧಾಕರ್ ಅವರು ಒಂದೇ ಒಂದು ವೋಟು ಜಾಸ್ತಿ ಪಡೆದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಎಂಎಲ್‌ಸಿ ಅಭ್ಯರ್ಥಿ ಆಯ್ಕೆಗೆ ದಿಲ್ಲಿಯಲ್ಲಿ ಸಿಎಂ, ಡಿಸಿಎಂ ಕಸರತ್ತು – ಪಕ್ಷದಲ್ಲಿ ಮುಂದುವರಿದ ಅಸಮಧಾನ!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್‌ ಈಶ್ವರ್‌,  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಅವರು ಒಂದು ಮತ ಜಾಸ್ತಿ ಪಡೆಯಲಿ. ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ. ನಾನು ನನ್ನ ಮಾತಿಗೆ ಬದ್ಧನಾಗಿರುತ್ತೇನೆ ಅಂತ ಹೇಳಿದ್ದಾರೆ. ಪ್ರದೀಪ್‌ ಈಶ್ವರ್‌ ಹೇಳಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ ಪ್ರದೀಪ್‌ ಈಶ್ವರ್‌, ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಈಶ್ವರಪ್ಪನವರು ಬ್ಯಾಕ್ವರ್ಡ್ ಕ್ಲಾಸ್‍ನವರು. ಅಂತವರನ್ನೂ ನೀವು ಮೂಲೆ ಗುಂಪು ಮಾಡಿದ್ರಿ. ಇದರ ಬಗ್ಗೆ ನೀವು ಮಾತನಾಡಿ. ವಿಜಯೇಂದ್ರ ತಲೆಯಲ್ಲಿ ಕಂಟೆಂಟ್ ಇಲ್ಲ. ವಿಚಾರಗಳ ಮೇಲೆ ಮಾತನಾಡೋಕೆ ಆಗಲ್ಲ. ಅವರ ತಲೆಯಲ್ಲಿರೋದೆಲ್ಲ ಮುಗಿದು ಹೋಗಿದೆ. ಅದಕ್ಕೆ ಇಂತಹ ವೈಯುಕ್ತಿಕ ವಿಷಯ ಮಾತನಾಡ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಎಸ್‍ಎಸ್‍ಎಲ್‍ಸಿ (SSLC) ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಾರಿ ಹತ್ತನೇ ತರಗತಿಯ ಪರೀಕ್ಷೆಯ ಸಂದರ್ಭದಲ್ಲಿ ಭಾರೀ ಸ್ಟ್ರಿಕ್ಟ್ ಮಾಡಿಸಿದ್ದಾರೆ. ಸಿಸಿ ಕ್ಯಾಮೆರಾ ಹಾಕಿ ಪರೀಕ್ಷೆ ನಡೆಸಿದ್ದಾರೆ. ಮಾಸ್ ಕಾಪಿ ಹೊಡೆಯೋಕೆ ಕಡಿವಾಣ ಹಾಕಿದ್ದಾರೆ. ಹಿಂದೆಲ್ಲಾ ಮಾಸ್ ಕಾಪಿ ನಡೆಯುತ್ತಿತ್ತು. ಆದರೆ ಈ ಭಾರಿ ಮಾಸ್ ಕಾಪಿ ನಡೆದಿಲ್ಲ ಎಂದರು.

ಫಲಿತಾಂಶ ಕುಸಿದಿದೆ ಅಂತ ಹೇಳಬೇಡಿ. ಕಳೆದ ಬಾರಿ ಚಿಕ್ಕಬಳ್ಳಾಪುರ 5ನೇ ಸ್ಥಾನದಲ್ಲಿ ಇತ್ತು. ಈ ಬಾರಿ ಅದನ್ನು ನಾನು ಎರಡನೇ ಸ್ಥಾನಕ್ಕೆ ತಂದಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ ಒಟ್ಟು 6 ತಾಲೂಕು ಬರುತ್ತದೆ. ಬೇರೆಡೆ ಡೌನ್ ಆದ್ರೆ ಅದಕ್ಕೆ ನಾನು ಕಾರಣನಾ ಎಂದು ಪ್ರದೀಪ್ ಈಶ್ವರ್ ಪ್ರಶ್ನಿಸಿದರು.

Shwetha M