ಚಿಕ್ಕಬಳ್ಳಾಪುರ ಸುಮಲತಾಗೋ.. ಸುಧಾಕರ್​ಗೋ? – ಕೈ-ಕಮಲ ಪಾಳಯದಲ್ಲಿ ಅದೆಷ್ಟು ಲೆಕ್ಕಾಚಾರ?

ಚಿಕ್ಕಬಳ್ಳಾಪುರ ಸುಮಲತಾಗೋ.. ಸುಧಾಕರ್​ಗೋ? – ಕೈ-ಕಮಲ ಪಾಳಯದಲ್ಲಿ ಅದೆಷ್ಟು ಲೆಕ್ಕಾಚಾರ?

ಚಿಕ್ಕಬಳ್ಳಾಪುರ ಕ್ಷೇತ್ರ ಕೂಡ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ ಪೈಪೋಟಿ ತಾರಕಕ್ಕೇರಿದೆ. ಬಿಜೆಪಿಯಲ್ಲಿ ದಿನಕ್ಕೊಬ್ಬರ ಹೆಸರು ಕೇಳಿಬರುತ್ತಿದ್ದರೆ, ಕಾಂಗ್ರೆಸ್‌ ಇರೋ ಮೂವರಲ್ಲಿ ಒಬ್ಬರನ್ನು ಫೈನಲ್‌ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ತಿಣುಕಾಡುತ್ತಿದೆ. ಬಿಜೆಪಿ ಅಭ್ಯರ್ಥಿ ಘೋಷಣೆಯನ್ನೇ ಎದುರು ನೋಡಿದಂತೆ ಕಾಣಿಸ್ತಿದೆ. ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿಹಾಗೂ ಮಾಜಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಹೆಸರು ಕೇಳಿಬರುತ್ತಿದೆ. ಸದ್ಯಕ್ಕೆ ರಕ್ಷಾ ರಾಮಯ್ಯ ಅವರ ಹೆಸರು ರೇಸ್‌ನಲ್ಲಿ ಮುಂದಿದೆ. ಆದರೆ ಮೊಯ್ಲಿ ಬೆಂಬಲಿಗರು ಇದು ಕೊನೆಯ ಬಾರಿ, ಟಿಕೆಟ್‌ ಕೊಟ್ಟು ಬಿಡಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಬೇಡಿಕೆ ಇಟ್ಟಿದ್ದಾರೆ. ಇತ್ತ ಬಿಜೆಪಿಯಲ್ಲಿ ಒಂದ್ಕಡೆ ಸುಮಲತಾ ಅಂಬರೀಶ್ ಮತ್ತೊಂದೆಡೆ ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಹೆಸರು ಮುಂಚೂಣಿಯಲ್ಲಿದೆ.

ಇದನ್ನೂ ಓದಿ: ಡಿ.ವಿ ಸದಾನಂದಗೌಡರಿಗೆ ಕಾಂಗ್ರೆಸ್ ಆಫರ್ ಕೊಟ್ಟ ಬೆನ್ನಲ್ಲೇ ಮಧ್ಯಸ್ಥಿಕೆ ವಹಿಸಿದ RSS – ಡಿವಿಎಸ್ ಮುಂದಿನ ನಡೆ ಏನು?

ಕಾಂಗ್ರೆಸ್ ಟಿಕೆಟ್ ಫೈಟ್!

ಕಾಂಗ್ರೆಸ್‌ ಪಾಳಯದಲ್ಲಿ ಚಿಕ್ಕಬಳ್ಳಾಪುರ ಟಿಕೆಟ್​ಗಾಗಿ ಪೈಪೋಟಿ ಜೋರಾಗಿದೆ. ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ರಕ್ಷಾ ರಾಮಯ್ಯ, ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ, ಮಾಜಿ ಸಚಿವ ಶಿವಶಂಕರರೆಡ್ಡಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ, ಹೊಸಕೋಟೆ ಕ್ಷೇತ್ರದ ಶಾಸಕ ಶರತ್‌ ಬಚ್ಚೇಗೌಡರ ಪತ್ನಿ ಪ್ರತಿಭಾ ಅವರ ಹೆಸರು ಕೂಡಾ ಹರಿದಾಡುತ್ತಿದೆ. ರಕ್ಷಾ ರಾಮಯ್ಯ ಈಗಾಗಲೇ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ವೀರಪ್ಪಮೊಯ್ಲಿ ಅವರು ಕ್ಷೇತ್ರದ ಮತದಾರರೊಂದಿಗೆ ಉತ್ತಮ ಬಾಂಧವ್ಯವನ್ನ ಹೊಂದಿದ್ದಾರೆ. ಹೀಗಾಗಿ ಮೊಯ್ಲಿಗೆ ಟಿಕೆಟ್ ಕೊಡಿಸುವಂತೆ ಪತ್ರ ಚಳವಳಿ ಆರಂಭಿಸಿದ್ದಾರೆ. ಇತ್ತ ಬಿಜೆಪಿಯಲ್ಲೂ ಟಿಕೆಟ್​ಗಾಗಿ ದೊಡ್ಡ ರೇಸ್ ನಡೀತಿದೆ. ಸ್ಥಳೀಯ ಆಕಾಂಕ್ಷಿಗಳಾದ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಮತ್ತು ಯಲಹಂಕದ ಅಲೋಕ್‌ ವಿಶ್ವನಾಥ್‌ ಹೊರತಾಗಿ ಹೊರಗಿನಿಂದ ಕುಮಾರಸ್ವಾಮಿ, ಸುಮಲತಾ, ಡಿ.ವಿ.ಸದಾನಂದಗೌಡ ಹೀಗೆ ಹಲವರ ಹೆಸರು ಕೇಳಿಬರುತ್ತಿದೆ. ಹೀಗಾಗಿ ಕಾಂಗ್ರೆಸ್‌ ಮೊದಲು ಬಿಜೆಪಿ ಅಭ್ಯರ್ಥಿ ಟಿಕೆಟ್‌ ಘೋಷಣೆಯಾಗಲಿ, ಆನಂತರ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡುವ ತೀರ್ಮಾನಕ್ಕೆ ಬಂದಿದೆ.

ಸದ್ಯ ಬಿಜೆಪಿ ವಶದಲ್ಲಿರುವ ಲೋಕಸಭಾ ಕ್ಷೇತ್ರವನ್ನು ಕಸಿದು ಕೊಳ್ಳಲು ಕಾಂಗ್ರೆಸ್‌ ಅಳೆದುತೂಗಿ ಲೆಕ್ಕಾಚಾರ ಹಾಕುತ್ತಿದೆ. ಇನ್ನೊಂದೆಡೆ ಇರುವ ಕ್ಷೇತ್ರ ಬಿಟ್ಟು ಕೊಡದಂತೆ ಬಿಜೆಪಿ ರಣವ್ಯೂಹ ಎಣೆಯುತ್ತಿದೆ. ಆದರೆ, ಆಕಾಂಕ್ಷಿಗಳ ನಡುವೆ ಇರುವ ಪೈಪೋಟಿಯಿಂದ ಎರಡೂ ಪಕ್ಷಗಳ ಹೈಕಮಾಂಡ್‌ ನಾಯಕರು ಅಭ್ಯರ್ಥಿಗಳ ಹೆಸರು ಘೋಷಣೆಗೆ ಹಿಂದು ಮುಂದು ನೋಡುತ್ತಿದ್ದಾರೆ. ಕ್ಷೇತ್ರದ ಮತದಾರರಲ್ಲೂ ಯಾರಿಗೆ ಟಿಕೆಟ್‌ ಎಂಬುದು ಕುತೂಹಲ ಕೆರಳಿಸಿದೆ. ಜಾತಿ ಲೆಕ್ಕಾಚಾರದ ಚರ್ಚೆಯೂ ನಡೀತಿದೆ.

ಹೇಗಿದೆ ಜಾತಿ ಸಮೀಕರಣ?  

ಜಾತಿ ಸಮೀಕರಣಕ್ಕೆ ಜೋತು ಬಿದ್ದಿರುವ ಎರಡೂ ಪಕ್ಷಗಳು ಪ್ರಬಲ ಸಮುದಾಯಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹೆಚ್ಚಿನ ಗಮನ ಹರಿಸಿವೆ. ಸದ್ಯಕ್ಕೆ ಬಲಿಜ ಮತ್ತು ಒಕ್ಕಲಿಗ ಅಭ್ಯರ್ಥಿಗಳ ಕಡೆ ಒಲವು ತೋರಿರುವ ಪಕ್ಷಗಳು ಒಂದು ಪಕ್ಷ ಯಾರಿಗೆ ಟಿಕೆಟ್‌ ಕೊಡುತ್ತೆ ಎನ್ನುವುದನ್ನು ಗಮನಿಸಿ ಜಾತಿ ಲೆಕ್ಕಾಚಾರದಲ್ಲಿ ಮತ್ತೊಂದು ಪ್ರಬಲ ಜಾತಿಯವರಿಗೆ ಟಿಕೆಟ್‌ ಕೊಡುವ ಲೆಕ್ಕಾಚಾರ ಹಾಕುತ್ತಿವೆ. ಆದ್ರೆ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮಟ್ಟಿಗೆ ಜಾತಿ ಲೆಕ್ಕಾಚಾರ ಹೆಚ್ಚು ನಡೆದಿಲ್ಲ. ಕಳೆದ ಚುನಾವಣೆಯಲ್ಲಿ ಒಕ್ಕಲಿಗರಾದ ಬಿ.ಎನ್‌.ಬಚ್ಚೇಗೌಡ ಅವರು ಗೆದ್ದಿರುವುದನ್ನು ಬಿಟ್ಟರೆ ಹಿಂದಿನ ಚುನಾವಣೆಗಳಲ್ಲಿ ಪ್ರಬಲ ಜಾತಿಯವರಲ್ಲದಿದ್ದರೂ ಕ್ಷೇತ್ರದ ಜನ ಮಣೆ ಹಾಕಿದ್ದಾರೆ. ಪ್ರಬಲ ಜಾತಿಯವರು ಅಖಾಡದಲ್ಲಿದ್ದರೂ ಕಡಿಮೆ ಮತಗಳಿರುವ ಜಾತಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರೌಢಿಮೆ ಕ್ಷೇತ್ರದ ಜನರಲ್ಲಿದೆ. ಆದರೆ ಬದಲಾದ ರಾಜಕೀಯದಲ್ಲಿ ಪಕ್ಷಗಳು ಜಾತಿಗೆ ಮಣೆ ಹಾಕಲಾಗುತ್ತಿದೆ.

ಸದ್ಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಅಹಿಂದ ಮತಗಳದ್ದೇ ಪಾರಮ್ಯ. ಹೀಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಹೈಕಮಾಂಡ್‌ಗೆ ಟಿಕೆಟ್‌ ಘೋಷಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶಾಸಕರ ಬಲಬಲಾದಲ್ಲಿ ನೋಡುವುದಾದರೆ ಕಾಂಗ್ರೆಸ್‌ಗೆ ಹೆಚ್ಚಿನ ಬಲವಿದೆ. ಆದರೆ, ಲೋಕಸಭೆ ಚುನಾವಣೆಯ ಲೆಕ್ಕಾಚಾರವೇ ವಿಭಿನ್ನವಾಗಿ ನಡೆಯುವುದರಿಂದ ಯಾರಿಗೆ ಅನುಕೂಲವಾಗಲಿದೆ ಎಂದು ಹೇಳುವುದು ಕಷ್ಟ.

Shwetha M