ಬಿಬಿಎಂಪಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮುಖ್ಯ ಇಂಜಿನಿಯರ್  ಸಾವು – ಡಿ.ಕೆ ಶಿವಕುಮಾರ್ ಸಂತಾಪ

ಬಿಬಿಎಂಪಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮುಖ್ಯ ಇಂಜಿನಿಯರ್  ಸಾವು – ಡಿ.ಕೆ ಶಿವಕುಮಾರ್ ಸಂತಾಪ

ಬೆಂಗಳೂರು: ಬಿಬಿಎಂಪಿಯ ಗುಣ ನಿಯಂತ್ರಣ ಲ್ಯಾಬ್’ನ ಅಗ್ನಿ ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯ ಎಂಜಿನಿಯರ್ ಶಿವಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಬಿಬಿಎಂಪಿಯ ಕ್ವಾಲಿಟಿ ಅಶ್ಯೂರೆನ್ಸ್ ಲ್ಯಾಬ್‌ನಲ್ಲಿ ಆಗಸ್ಟ್ 11 ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 45 ವರ್ಷದ ಶಿವಕುಮಾರ್ ಅವರು ಸೇರಿದಂತೆ 9 ನೌಕರರು ಗಾಯಗೊಂಡಿದ್ದರು. ಶೇ. 25 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಶಿವಕುಮಾರ್ ಅವರನ್ನು ಕಳೆದ ಕೆಲ ದಿನಗಳ ಹಿಂದೆ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬುಧವಾರ ಶಿವಕುಮಾರ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಪೊಲೋ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹಾಸನಾಂಬೆ ಜಾತ್ರೆಗೆ ಮುಹೂರ್ತ ನಿಗದಿ – ನವೆಂಬರ್ 2ರಿಂದ 15ರವರೆಗೆ ದಿನದ 24 ಗಂಟೆಯೂ ದರ್ಶನ

ಶಿವಕುಮಾರ್ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಮುಖ್ಯ ಇಂಜಿನಿಯರ್ ಶಿವಕುಮಾರ್ ಅವರ ಅಗಲಿಕೆ ಸುದ್ದಿ ಕೇಳಿ ಬೇಸರವಾಗಿದೆ. ಕೆಲ ದಿನಗಳ ಹಿಂದಷ್ಟೇ ನಾನು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡಿದರೂ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅವರು ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೆವು. ನಮ್ಮ ಪ್ರಾರ್ಥನೆ ಫಲ ನೀಡಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಈ ಅವಘಡದಿಂದ ಪ್ರಾಣ ಕಳೆದುಕೊಂಡಿರುವುದು ಮನಸ್ಸಿಗೆ ನೋವು ಉಂಟು ಮಾಡಿದೆ. ಶಿವಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು ಹಾಗೂ ಬಂಧು ಮಿತ್ರರಿಗೆ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಇನ್ನು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೂ ಕೂಡ ಸಂತಾಪ ಸೂಚಿಸಿದ್ದಾರೆ. ಪಾಲಿಕೆಯ ಹಲವು ವಿಭಾಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಶಿವಕುಮಾರ್ ಅವರು ಕಿರಿಯ ವಯಸ್ಸಿನಲ್ಲೇ ವಿಧಿವಶರಾಗಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ಕುಟುಂಬ ಸದಸ್ಯರು, ಬಂಧು-ಮಿತ್ರರಿಗೆ ಕರುಣಿಸಲೆಂದು ಕೋರುತ್ತೇವೆಂದು ಹೇಳಿದ್ದಾರೆ. ಅಲ್ಲದೆ, ಶಿವಕುಮಾರ್ ಕುಟುಂಬಕ್ಕೆ ಬಿಬಿಎಂಪಿಯಿಂದ ರೂ.10 ಲಕ್ಷ ಪರಿಹಾರ ಹಾಗೂ ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana