ಬಿಸಿಗಾಳಿ, ಬಿಸಿಲಿನ ಬೇಗೆ ಹೆಚ್ಚಳ – 10 ದಿನಗಳ ಕಾಲ ಬೇಸಿಗೆ ರಜೆ ವಿಸ್ತರಣೆ
ದೇಶದಾದ್ಯಂತ ಮುಂಗಾರು ಮಳೆ ವಿಳಂಬವಾಗಿದೆ. ಇದರಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಬರದ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರಿನ ಕೊರತೆಯೂ ಉಂಟಾಗಿದೆ. ಬಿಸಿಗಾಳಿ, ಬಿಸಿಲಿನ ಬೇಗೆ ಮುಂದುವರಿದ ಕಾರಣ ಛತ್ತೀಸ್‌ಗಢದಲ್ಲಿ ಬೇಸಿಗೆ ರಜೆಯನ್ನು ಇನ್ನೂ ಹತ್ತು ದಿನಗಳ ಕಾಲ ವಿಸ್ತರಿಸಲಾಗಿದೆ.
ಛತ್ತೀಸ್‌ಗಢದಲ್ಲಿ ಜೂನ್ 16 ರಿಂದ ಶಾಲೆಗಳು ತೆರೆಯಲು ನಿರ್ಧರಿಸಲಾಗಿತ್ತು. ಬಿಸಿಗಾಳಿ, ಬಿಸಿಲಿನ ಬೇಗೆ ಹೆಚ್ಚಾದ ಹಿನ್ನೆಲೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಜೂನ್ 26 ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ನಿರಾಕರಣೆ – ʼಮೋದಿ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆʼ ಎಂದ ಕಾಂಗ್ರೆಸ್
ಬಿಸಿಲಿನ ತಾಪದಿಂದಾಗಿ ಎಲ್ಲ ಶಾಲೆಗಳಿಗೆ ಜೂನ್ 26ರವರೆಗೆ ರಜೆ ನೀಡಲಾಗಿದೆ. ರಾಜ್ಯದಲ್ಲಿ ಬಿಸಿಲ ತಾಪದಿಂದ ಮಕ್ಕಳನ್ನು ರಕ್ಷಿಸಲು ಅಧೀಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ತಾಪಮಾನ ಹೆಚ್ಚಳ ಹಾಗೂ ಬಿಸಿಗಾಳಿಯು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲಾ ಪ್ರಾರಂಭದ ದಿನಾಂಕವನ್ನು ಮುಂದೂಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಶಿಕ್ಷಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಗಾರು ಆಗಮನ ವಿಳಂಬವಾಗಿರುವುದರಿಂದ ಇನ್ನೂ ಬಿಸಿಲಿನ ಝಳ ಮುಂದುವರಿದಿದೆ. 40 ರಿಂದ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರಂತರವಾಗಿ ದಾಖಲಾಗುತ್ತಿದೆ. ಮಧ್ಯಾಹ್ನದ ಬಿಸಿಲಿನ ಬೇಗೆಯಿಂದ ಜನರ ಸಮಸ್ಯೆಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಬಿಸಿಗಾಳಿಯ ವಾತಾವರಣ ಇರಲಿದೆ ಎಂದು ಮಂಗಳವಾರ ರಾಯ್‌ಪುರ ಹವಾಮಾನ ಇಲಾಖೆ ತಿಳಿಸಿತ್ತು. ಈ ಹಿನ್ನೆಲೆ ಬೇಸಿಗೆ ರಜೆಯನ್ನು 10 ದಿನಗಳ ಕಾಲ ವಿಸ್ತರಿಸಲಾಗಿದೆ.