ನೂರಾರು ವರ್ಷಗಳ ನಂತರ ಭಾರತಕ್ಕೆ ಮರಳಲಿದೆ ಛತ್ರಪತಿ ಶಿವಾಜಿಯ ಐತಿಹಾಸಿಕ ಆಯುಧ ʼವಾಘ್ ನಾಖ್ʼ! – ಇದರ ವಿಶೇಷತೆ ಏನು?

ನೂರಾರು ವರ್ಷಗಳ ನಂತರ ಭಾರತಕ್ಕೆ ಮರಳಲಿದೆ ಛತ್ರಪತಿ ಶಿವಾಜಿಯ ಐತಿಹಾಸಿಕ ಆಯುಧ ʼವಾಘ್ ನಾಖ್ʼ! – ಇದರ ವಿಶೇಷತೆ ಏನು?

ಛತ್ರಪತಿ ಶಿವಾಜಿ ಮಹಾರಾಜರ ಅತ್ಯಂತ ವಿಶೇಷ ಆಯುಧ ‘ವಾಘ್ ನಾಖ್’ ನೂರಾರು ವರ್ಷಗಳ ನಂತರ ಶೀಘ್ರದಲ್ಲೇ ಭಾರತಕ್ಕೆ ಮರಳಲಿದೆ. ಲಂಡನ್ ಮ್ಯೂಸಿಯಂನಿಂದ ಈ ಹುಲಿ ಪಂಜ ಆಯುಧವನ್ನು ಭಾರತಕ್ಕೆ ತರಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಛತ್ರಪತಿ ಶಿವಾಜಿಯ ‘ವಾಘ್ ನಾಖ್’ ಆಯುಧವನ್ನು ನವೆಂಬರ್​ನಲ್ಲಿ ಲಂಡನ್​ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಭಾರತಕ್ಕೆ ತರಲಾಗುತ್ತಿದೆ. ಈ ಸಂಬಂಧ ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಈಗಾಗಲೇ ಲಂಡನ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತಕ್ಕೆ ತರಲು ಅಗತ್ಯವಿರುವ ಎಲ್ಲ ಅನುಮತಿ ಪಡೆಯಲಾಗಿದೆ. ಶೀಘ್ರದಲ್ಲೇ ಅವರು ತಮ್ಮ ತಂಡದೊಂದಿಗೆ ಲಂಡನ್​ಗೆ ತೆರಳಿ ಬ್ರಿಟಿಷ್ ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಾವಲಿ ಗುಹೆಯಲ್ಲಿ ಪತ್ತೆಯಾಯ್ತು ಬರೋಬ್ಬರಿ 6 ಸಾವಿರ ವರ್ಷಗಳಷ್ಟು ಹಳೆಯ ಶೂಗಳು!

350ನೇ ವಾರ್ಷಿಕೋತ್ಸವದ ಅಂಗವಾಗಿ ಭಾರತಕ್ಕೆ ತರಲು ಚಿಂತನೆ

ಈ ವರ್ಷ ಛತ್ರಪತಿ ಶಿವಾಜಿಯ 350ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಲಂಡನ್​ನಲ್ಲಿರುವ ಶಿವಾಜಿಯ ಆಯುಧವನ್ನು ಭಾರತಕ್ಕೆ ತಂದು ಗೌರವ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ. ಭಾರತಕ್ಕೆ ಈ ಆಯುಧವನ್ನು ತಂದ ನಂತರ ಮೂರು ವರ್ಷಗಳ ಕಾಲ ಮ್ಯೂಸಿಯಂನಲ್ಲಿ ಇರಿಸಲಾಗುವುದು ಮತ್ತು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗುವುದು. ಇದನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂನಲ್ಲಿ ಇಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಹುಲಿ ಪಂಜ ತರಲು 11 ಸದಸ್ಯರ ಸಮಿತಿ ರಚನೆ!

ಲಂಡನ್​ನಿಂದ ಹುಲಿ ಪಂಜ ಮರಳಿ ತರಲು ಭದ್ರತೆ ಮತ್ತು ಸಾರಿಗೆ ವ್ಯವಸ್ಥೆ ಯೋಜಿಸಲು ಮಹಾರಾಷ್ಟ್ರ ಸರ್ಕಾರ 11 ಸದಸ್ಯರ ಸಮಿತಿ ರಚಿಸಿದೆ. 1659ರ ಪ್ರತಾಪಗಡ ಕದನದಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್​ನನ್ನು ಸೋಲಿಸಲು ಛತ್ರಪತಿ ಶಿವಾಜಿ ಅವರು ಈ ಆಯುಧವನ್ನು ಬಳಸಿದ್ದರಿಂದ ಐತಿಹಾಸಿಕ ಮಹತ್ವ ಪಡೆದಿದೆ.

ಬ್ರಿಟನ್ ಸೇರಿದ್ದು ಹೇಗೆ?

ಛತ್ರಪತಿ ಶಿವಾಜಿ ಯುದ್ಧಕ್ಕಾಗಿ ವಿಶೇಷವಾಗಿ ತಯಾರಿಸಿದ ಈ ಆಯುಧವನ್ನು ಆತನ ವಂಶಸ್ಥರು ಈಸ್ಟ್ ಇಂಡಿಯಾ ಕಂಪನಿ ಅಧಿಕಾರಿ ಜೇಮ್ಸ್ ಗ್ರಾಂಟ್ ಡಫ್ ಅವರಿಗೆ ನೀಡಿದ್ದರು. ಜೇಮ್ಸ್ ಗ್ರಾಂಟ್ ಭಾರತದಲ್ಲಿ ಸೇವೆ ಸಲ್ಲಿಸಿದ ನಂತರ ಬ್ರಿಟನ್​ಗೆ ಆಯುಧವನ್ನು ತೆಗೆದುಕೊಂಡು ಹೋದರು. ಡಫ್ ಅವರ ವಾರಸುದಾರರು ನಂತರ ಅದನ್ನು ವಸ್ತುಸಂಗ್ರಹಾಲಯಕ್ಕೆ ದಾನ ಮಾಡಿದ್ದಾರೆ. ಅಂದಿನಿಂದ ಬ್ರಿಟನ್ ಮ್ಯೂಸಿಯಂನಲ್ಲಿ ಇಡಲಾಗಿದೆ.

Shwetha M