ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಪ್ರಜ್ಞಾನಂದಗೆ ಸೋಲು – 6ನೇ ಬಾರಿಗೆ ವಿಶ್ವಚಾಂಪಿಯನ್ ಆದ ಮ್ಯಾಗ್ನಸ್ ಕಾರ್ಲ್‌ಸನ್

ಚೆಸ್ ಲೋಕದಲ್ಲಿ ಇತಿಹಾಸ ಸೃಷ್ಟಿಸಿರುವ ಭಾರತದ ಧ್ರುವತಾರೆ, ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಫಿಡೆ ವಿಶ್ವಕಪ್ ಚೆಸ್ ಟೂರ್ನಿಯ ಚಾಂಪಿಯನ್ ಪಟ್ಟವನ್ನ ಕೊನೇ ಕ್ಷಣದಲ್ಲಿ ಕಳೆದುಕೊಂಡಿದ್ದಾರೆ. 12 ವರ್ಷಗಳಿಂದ ನಂಬರ್ 1 ಚಾಂಪಿಯನ್ ಪಟ್ಟದಲ್ಲಿರುವ ಮ್ಯಾಗ್ನೆಸ್ ಕಾರ್ಲ್ ಸನ್ ವಿರುದ್ಧ ಫೈನಲ್ ವೀರೋಚಿತವಾಗಿ ಸೋಲು ಕಂಡಿದ್ದಾರೆ.
ಇದನ್ನೂ ಓದಿ: ಚೆಸ್ ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟ ಭಾರತದ ಆರ್.ಪ್ರಜ್ಞಾನಂದ – ವಿಶ್ವನಾಥನ್ ಆನಂದ್ ಬಳಿಕ 18ರ ಬಾಲಕನ ಅಮೋಘ ಸಾಧನೆ
ಅಜರ್ ಬೈಜನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎರಡು ಪಂದ್ಯಗಳು ಡ್ರಾನಲ್ಲಿ ಮುಕ್ತಾಯಗೊಂಡಿದ್ದವು. ಹೀಗಾಗಿ ಮೂರನೇ ದಿನ ಚಾಂಪಿಯನ್ ಪಟ್ಟಕ್ಕೇರುವ ಟೈಬ್ರೇಕರ್ ತೀವ್ರ ಪೈಪೊಟಿಯಿಂದ ಕೂಡಿತ್ತು. ಈ ನಿರ್ಣಾಯಕ ಸೆಣಸಾಟದಲ್ಲಿ ಚೆಸ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎನಿಸಿಕೊಳ್ಳುವ ಕಾರ್ಲ್ಸನ್ ಭಾರತದ 18ರ ಹರೆಯದ ಯುವ ಆಟಗಾರ ಪ್ರಜ್ಞಾನಂದರನ್ನ ಸೋಲಿಸಿದ್ದಾರೆ. ಟೈ ಬ್ರೇಕರ್‌ನ ಮೊದಲ ಪಂದ್ಯವನ್ನು ಕಾರ್ಲ್ಸನ್ ಗೆದ್ದು 1-0 ಮುನ್ನಡೆ ಸಾಧಿಸಿದ್ದರು. ಆದ್ರೆ ಎರಡನೇ ಪಂದ್ಯವನ್ನ ಪ್ರಜ್ಞಾನಂದ ಡ್ರಾ ಮಾಡಿಕೊಂಡರು. ಹೀಗಾಗಿ ಕಾರ್ಲ್ ಸನ್ ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನ ತಮ್ಮದಾಗಿಸಿಕೊಂಡರು.
ಪ್ರಜ್ಞಾನಂದ ಅಂತಿಮ ಕ್ಷಣದಲ್ಲಿ ಸೋಲು ಕಂಡಿದ್ರೂ ಕೂಡ 140 ಕೋಟಿ ಭಾರತೀಯರ ಮನಸ್ಸನ್ನ ಗೆದ್ದಿದ್ದಾರೆ. ಹಾಗೇ ವಿಶ್ವದ ಘಟಾನುಘಟಿ ಆಟಗಾರರನ್ನೇ ಸೋಲಿಸಿ ಫೈನಲ್ಗೂ ಲಗ್ಗೆ ಇಟ್ಟಿದ್ರು. ಜೊತೆಗೆ ವಿಶ್ವದ ನಂಬರ್ 1 ಕಾರ್ಲ್ ಸನ್ಗೂ ನಡುಕ ಹುಟ್ಟಿಸಿದ್ದರು. ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಬಳಿಕ ಅಂದ್ರೆ 21 ವರ್ಷಗಳ ಬಳಿಕ ಪ್ರಜ್ಞಾನಂದ ವಿಶ್ವಕಪ್ ಟೂರ್ನಿಯ ಫೈನಲ್ಗೇರಿದ 2ನೇ ಭಾರತೀಯ ಅನ್ನೋ ದಾಖಲೆಯನ್ನ ಬರೆದಿದ್ದಾರೆ.