ಮಣ್ಣಿನ ಮಗಳಿಗೆ ಕಣ್ಣೀರ ವಿದಾಯ – ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅಂತ್ಯಕ್ರಿಯೆ

ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ಶನಿವಾರ ನಿಧನರಾಗಿದ್ದು, ಇಂದು ಸಂಜೆ ಅಂತ್ಯಕ್ರಿಯೆ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಒಕ್ಕಲಿಗ ಸಂಪ್ರದಾಯದಂತೆ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಇದನ್ನೂ ಓದಿ: ಪತ್ನಿ ಚೆನ್ನಮ್ಮಗೆ ತಾಳಿ ಕಟ್ಟಿ ವಿದಾಯ ಹೇಳಿದ ದೇವೇಗೌಡರು – ದೊಡ್ಡಗೌಡರ ಕುಟುಂಬಕ್ಕೆ ಗಣ್ಯರ ಸಾಂತ್ವನ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಚೆನ್ನಮ್ಮನವರ ಅಂತ್ಯಕ್ರಿಯೆ ನಡೆಸಲಾಗಿದೆ. ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನಡೆಸಲಾಗಿದೆ. ಇದಕ್ಕೂ ಹೊಳೆನರಸೀಪುರದಿಂದ ನಾಗಲಾಪುರ, ಹುಚ್ಚನಕೊಪ್ಪಲು, ಸಂಕನಹಳ್ಳಿ, ಕಳ್ಳಿಕೊಪ್ಪಲು, ಕಟ್ಟಹಳ್ಳಿ ಬಾರೆ, ಮಾರಗೊಡನಹಳ್ಳಿ, ಪಡುವಲಹಿಪ್ಪೆ, ಹನುಮನಹಳ್ಳಿ, ಬಸವನಾಯಕನಹಳ್ಳಿ, ಹಂಗರಹಳ್ಳಿ, ಹಳೇಕೋಟೆ ಗ್ರಾಮಗಳಲ್ಲಿ ಅಂತಿಮ ಯಾತ್ರೆ ನಡೆಸಲಾಗಿತ್ತು. ರಸ್ತೆಯುದ್ದಕ್ಕೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದ್ರು. ಬಳಿಕ ಹೊಳೇನರಸಿಪುರದಲ್ಲಿ ಪುತ್ರ ಹೆಚ್ ಡಿ ರೇವಣ್ಣ ಅವರ ನಿವಾಸದಲ್ಲಿ ಚೆನ್ನಮ್ಮ ಅವರ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಜನ ಸಾಗರವೇ ಹರಿದು ಬಂದು ಅಂತಿಮ ದರ್ಶನ ಪಡೆದರು.
ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅಂತ್ಯಕ್ರಿಯೆ
ಹಾಸನದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಗಣ್ಯರು ಅಂತಿಮ ಪುಷ್ಪನಮನ ಸಲ್ಲಿಸಿದ ಬಳಿಕ 3 ಸುತ್ತು ಕುಶಾಲತೋಪು ಸಿಡಿಸಿ, ರಾಷ್ಟ್ರಗೀತೆ ನಮನದೊಂದಿಗೆ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯಿತು. 2 ನಿಮಿಷ ಮೌನಾಚರಣೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳು ದೇವೇಗೌಡರ ಕುಟುಂಬಕ್ಕೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಇದೇ ವೇಳೆ ಡಿಕೆ ಶಿವಕುಮಾರ್ ಅವರು ದೇವೇಗೌಡರ ಕಾಲಿಗೆ ನಮಸ್ಕರಿಸಿ ವಂದಿಸಿದರು. ಬಳಿಕ ಮಕ್ಕಳು, ಮೊಮ್ಮಕ್ಕಳು, ಕುಟುಂಬಸ್ಥರು ಚೆನ್ನಮ್ಮ ಅವರ ಪಾರ್ಥೀವ ಶರೀರವನ್ನು ಹೂವಿನ ಪಲ್ಲಕ್ಕಿಯಲ್ಲಿ ಹೊತ್ತು ಸಮಾಧಿ ಕಡೆಗೆ ತಂದಿದ್ದಾರೆ. ನಂತರ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಅಂತಿಮ ಸಂಸ್ಕಾರದಲ್ಲಿ ಸಿಎಂ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಿದ್ದರು. ಇದೇ ವೇಳೆ, ನಿರ್ಮಲಾನಂದನಾಥ ಶ್ರೀಗಳು ಮತ್ತು ಶಂಭುನಾಥ ಸ್ವಾಮೀಜಿ ಸೇರಿದಂತೆ ಧಾರ್ಮಿಕ ಮುಖಂಡರು ಸಹ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಗಣ್ಯರಿಗಾಗಿ ಮೀಸಲಾದ ಆಸನಗಳಲ್ಲಿ ಕುಳಿತಿದ್ದ ಹಲವು ನಾಯಕರು, ಚೆನ್ನಮ್ಮನವರ ಅಗಲಿಕೆಗೆ ಸಂತಾಪ ಸೂಚಿಸಿದರು.
ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ಮಾಡಿದ್ದು ಯಾಕೆ?
ಹರದನಹಳ್ಳಿ ಗ್ರಾಮದ ಸಮೀಪ ಇರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲು ಆಯ್ಕೆ ಮಾಡಿರುವುದಕ್ಕೆ ಅನೇಕ ಕಾರಣಗಳಿವೆ. ಚೆನ್ನಮ್ಮ ಅವರು ದೀರ್ಘಕಾಲ ಹೊಳೆನರಸೀಪುರ ಭಾಗದಲ್ಲೇ ಇದ್ದವರು. ಹಳೆಕೋಟೆ, ಮುತ್ತಿಗೆ ಹಿರೀಹಳ್ಳಿ, ಹರದನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳು ಹಾಗೂ ಗ್ರಾಮಸ್ಥರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕುಟುಂಬದ ಸದಸ್ಯರೆಲ್ಲರೂ ಸೇರಿ ಈ ಜಾಗವನ್ನು ಆಯ್ಕೆ ಮಾಡಿದ್ದು, ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನ ಮಾಡಿದ್ದೇವೆ. ಈ ಜಾಗದಲ್ಲಿ ಸ್ಮಾರಕ ಮಾಡಲು ಚಿಂತಿಸಲಾಗಿದೆ ಎಂದು ಸಂಸದ ಹಾಗೂ ಚೆನ್ನಮ್ಮ ಅವರ ಅಳಿಯ ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಹರದನಹಳ್ಳಿಯು ದೇವೇಗೌಡರ ತವರೂರು ಮತ್ತು ಚೆನ್ನಮ್ಮನವರು ಪತಿಯೊಂದಿಗೆ ತಮ್ಮ ಬೇರುಗಳನ್ನು ಗಟ್ಟಿಯಾಗಿರಿಸಿಕೊಂಡಿದ್ದ ಸ್ಥಳವಾಗಿದೆ. ಅವರ ಒಡೆತನದ 32 ಎಕರೆ ವಿಶಾಲವಾದ ಕೃಷಿ ಜಮೀನು ಬೆಟ್ಟದ ತಪ್ಪಲಿನಲ್ಲಿದೆ. ಮಾವಿನಕೆರೆ ರಂಗನಾಥಸ್ವಾಮಿ ಬಗ್ಗೆ ಚೆನ್ನಮ್ಮನವರಿಗೆ ಅಪಾರವಾದ ಭಕ್ತಿ ಇತ್ತು. ಇಡೀ ಕುಟುಂಬದ ಒಳಿತಿಗಾಗಿ ಹಾಗೂ ರೈತರ ಏಳಿಗೆಗಾಗಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದ ಅವರು, ದೈವ ಸನ್ನಿಧಿಯ ನೈಸರ್ಗಿಕ ವಾತಾವರಣದ ತಪ್ಪಲಿನಲ್ಲಿ ತಮ್ಮ ವಿಶ್ರಾಂತಿ ಪಡೆಯಬೇಕೆಂಬುದು ಅವರ ಕುಟುಂಬಸ್ಥರ ಆಶಯವಾಗಿದೆ.

ನೋಡಿರಿ

