ದೇವರ ಪ್ರಸಾದ ಹಿಡಿದುಕೊಂಡು ಮಗನ ನೋಡಲು ಬಂದ ಚೆನ್ನಮ್ಮ ದೇವೇಗೌಡ
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದ ಮಗನನ್ನು ನೋಡಲು ತಾಯಿ ಚೆನ್ನಮ್ಮ ದೇವೇಗೌಡ ಆಗಮಿಸಿದರು. ಮಗನನ್ನು ನೋಡಲು ಬರುವ ಮೊದಲು ದೇವಸ್ಥಾನಕ್ಕೆ ಹೋಗಿ ಮಗನ ಆರೋಗ್ಯ ಸುಧಾರಣೆಗೆ ಪೂಜೆ ಮಾಡಿಸಿಕೊಂಡು ಬಂದಿದ್ದರು. ಪ್ರಸಾದ ಸಮೇತ ಆಗಮಿಸಿರುವ ಚೆನ್ನಮ್ಮ ಮಗನನ್ನು ನೋಡಿ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ: ಹೆಚ್.ಡಿ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ – ಡಿಶ್ಚಾರ್ಜ್ ಯಾವಾಗ?
ದೇವಸ್ಥಾನದಿಂದ ಪ್ರಸಾದ ತೆಗೆದುಕೊಂಡು ಆಸ್ಪತ್ರೆಗೆ ಧಾವಿಸಿದ ಚೆನ್ನಮ್ಮ ಅವರನ್ನು ಕಾರಿಂದ ಇಳಿಸಿ ವ್ಹೀಲ್ ಚೇರೊಂದರಲ್ಲಿ ಕೂರಿಸಿ ಒಳಗೆ ಕರೆದುಕೊಂಡು ಹೋಗಲಾಯಿತು. ಅವರ ಹಿಂದೆಯೇ ವ್ಯಕ್ತಿಯೊಬ್ಬರು ಹಳದಿ ಬಣ್ಣದ ಚೀಲದಲ್ಲಿ ಪ್ರಸಾದ ತೆಗೆದುಕೊಂಡು ಬಂದರು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪತ್ನಿ ಚೆನ್ನಮ್ಮ ದೇವೇಗೌಡ ಅವರಿಗೆ ಈಗ 90 ರ ವಯಸ್ಸು. ನಡೆದಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ವ್ಹೀಲ್ ಚೇರ್ ನಲ್ಲಿ ಕುಳಿತು ಮಗನ ನೋಡಲು ಆಸ್ಪತ್ರೆ ಒಳಗೆ ಹೋಗಿದ್ದರು. ಮಗ ಹೆಚ್ ಡಿ ಕುಮಾರಸ್ವಾಮಿ ಅನಾರೋಗ್ಯ ವಿಚಾರ ಕೇಳಿ ಸಹಜವಾಗಿಯೇ ತಾಯಿ ಚೆನ್ನಮ್ಮ ಆತಂಕಕ್ಕೊಳಗಾಗಿದ್ದರು. ಹೀಗಾಗಿ ಮಗನನ್ನು ನೋಡಬೇಕೆಂದು ಜಯನಗರದ ಅಪೋಲೋ ಆಸ್ಪತ್ರೆಗೆ ಆಗಮಿಸಿದರು.
ಅಪ್ಪನ ಆರೋಗ್ಯ ವಿಚಾರಿಸಲು ಮಗ ನಿಖಿಲ್ ಕುಮಾರಸ್ವಾಮಿ ಕೂಡಾ ಬೆಳಗ್ಗೆಯೇ ಆಸ್ಪತ್ರೆಗೆ ಆಗಮಿಸಿದರು. ತನ್ನ ತಾಯಿ ಅನಿತಾ ಕುಮಾರಸ್ವಾಮಿ ಜೊತೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ತಂದೆಯ ಆರೋಗ್ಯದ ಬಗ್ಗೆ ಆತಂಕ ಪಡಬೇಕಿಲ್ಲ ಎಂದಿದ್ದಾರೆ. ಇನ್ನು ಕುಮಾರಸ್ವಾಮಿಯವರ ಆರೋಗ್ಯ ವಿಚಾರಿಸಲು ಆದಿಚುಂಚನಗಿರಿ ಮಠದ ಸ್ವಾಮೀಜಿ ನಿರ್ಮಲಾನಂದನಾಥ ಶ್ರೀಗಳು ಆಗಮಿಸಿದರು. ಕುಮಾರಸ್ವಾಮಿಯವರ ಕ್ಷೇಮ ವಿಚಾರಿಸಿದರು.