ಕಟ್ಟಡದ ಮೇಲಿದ್ದ ಮೊಬೈಲ್ ಟವರ್ ಮಾಯ – ಮಾಲೀಕ ಕೊಟ್ಟ ಉತ್ತರ ಏನು ಗೊತ್ತಾ?  

ಕಟ್ಟಡದ ಮೇಲಿದ್ದ ಮೊಬೈಲ್ ಟವರ್ ಮಾಯ – ಮಾಲೀಕ ಕೊಟ್ಟ ಉತ್ತರ ಏನು ಗೊತ್ತಾ?  

ಚೆನ್ನೈ:  ಮನೆ, ಕಚೇರಿ, ವಾಣಿಜ್ಯ ಮಳಿಗೆಗಳಿಗೆ ಕಟ್ಟಡ ಬಾಡಿಗೆ ಪಡೆದಾಗ ಅದನ್ನು ನಿಗದಿತ ಅವಧಿಯಲ್ಲಿ ಬಾಡಿಗೆ ಕಟ್ಟಬೇಕಾಗುತ್ತದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಬಾಡಿಗೆ ಕಟ್ಟಲು ಸಾಧ್ಯವಾಗದಿದ್ದರೆ ಕೆಲಕಾಲ ಮಾಲೀಕರು ಸಮಯ ಕೊಡುತ್ತಾರೆ. ಆಗಲೂ ಪಾವತಿಸದಿದ್ದರೆ ಮನೆಯಲ್ಲಿದ್ದ ವಸ್ತುಗಳನ್ನು ಹೊರಗೆ ಹಾಕಿ ಬೀಗ ಹಾಕಿಕೊಂಡು ಹೋಗುವುದನ್ನು ನೋಡಿರುತ್ತೇವೆ. ಆದರೆ ಚೆನ್ನೈನಲ್ಲಿ ನಡೆದ ಘಟನೆ ಕೊಂಚ ವಿಭಿನ್ನವಾಗಿದೆ. ಕಟ್ಟಡವೊಂದರ ಮೇಲೆ ಹಾಕಿದ್ದ ಮೊಬೈಲ್ ಟವರ್  ಬಾಡಿಗೆಯನ್ನು ಕಂಪನಿ ಕಟ್ಟದಿದ್ದಕ್ಕೆ ಮಾಲೀಕ ಮಾಡಿರುವ ಕೆಲಸ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಬೋಯಿಂಗ್ & ಏರ್ ಬಸ್ ನಲ್ಲಿ ನೇಮಕಾತಿಗೆ ಹುಡುಕಾಟ – ಭಾರತದಲ್ಲಿ ಎಷ್ಟು ಜನರಿಗೆ ಅವಕಾಶ..?

ಚೆನ್ನೈನ ಕೊಯಂಬೇಡು ಎಂಬಲ್ಲಿ ಚಂದ್ರನ್, ಕರುಣಾಕರನ್ ಮತ್ತು ಬಾಲಕೃಷ್ಣನ್ ಒಡೆತನದ ಕಟ್ಟಡದ ಮೇಲ್ಛಾವಣಿ ಮೇಲೆ 15 ಅಡಿ ಎತ್ತರದ ಮೊಬೈಲ್ ಟವರ್ ಅನ್ನು 2006 ರಲ್ಲಿ  ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ಹಾಕಿತ್ತು. ಇದಾದ ಮೇಲೆ ಕೆಲವು ತಿಂಗಳುಗಳ ಕಾಲ ಕಂಪನಿ ಬಾಡಿಗೆ ಪಾವತಿಸುತ್ತಾ ಬಂದಿದೆ. ಕೆಲವು ದಿನಗಳ ಹಿಂದೆ ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಕೆಲವು ಉದ್ಯೋಗಿಗಳು ಟವರ್ ಪರಿಶೀಲಿಸಲು ಬಂದಿದ್ದಾರೆ. ಆದರೆ ಮೊಬೈಲ್ ಟವರ್​ ಕಾಣೆಯಾಗಿದ್ದನ್ನು ಕಂಡು ಗಲಿಬಿಲಿಗೊಂಡಿದ್ದಾರೆ. ಕೂಡಲೇ ಅಕ್ಕಪಕ್ಕದವರಲ್ಲಿ ಟವರ್ ಏನಾಯಿತು ಅಂತಾ ವಿಚಾರಿಸಿದ್ದು ಅವರಿಂದ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಕಟ್ಟಡ ಮಾಲೀಕರನ್ನು ಕೇಳಿದ್ದಾರೆ. ಇದಕ್ಕೆ ಮನೆ ಮಾಲೀಕ ನೀಡಿದ ಉತ್ತರ ಕೇಳಿ ಅವರು ಬೆಚ್ಚಿಬಿದ್ದಿದ್ದಾರೆ.

ಜಿಟಿಎಲ್ ಕಂಪನಿ 2006 ರಿಂದ 2018 ರವರೆಗೆ ಬಾಡಿಗೆ ಪಾವತಿಸಿದೆ. ಅದಾದ ಬಳಿಕ ಕಂಪನಿ ಒಂದು ರೂಪಾಯಿಯೂ ಬಾಡಿಗೆ ಪಾವತಿಸಿಲ್ಲ. ಐದು ವರ್ಷಗಳಿಂದ ಬಾಡಿಗೆ ನೀಡದ ಕಾರಣ ಟವರ್ ಕೆಡವಿ ಕೊಯಂಬೇಡುವಿನ ಸ್ಕ್ರ್ಯಾಪ್ ಅಂಗಡಿಗೆ ಮಾರಾಟ ಮಾಡಿದ್ದೇವೆ ಎಂದು ಮಾಲೀಕರು ಹೇಳಿದ್ದರಿಂದ ಕಂಪನಿ ನೌಕರರು ಏನು ಮಾತಾಡಬೇಕು ಎಂದು ತಿಳಿಯದೆ ವಾಪಾಸ್​ ಹೋಗಿ ವಿಷಯವನ್ನು ಕಂಪನಿಗೆ ತಿಳಿಸಿದ್ದಾರೆ.

ಟವರ್ ಅನ್ನು ಅಕ್ರಮವಾಗಿ ಕೆಡವಿ ಮಾರಾಟ ಮಾಡಿದ ಕಟ್ಟಡ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್‌ನ ಅಧಿಕಾರಿಯೊಬ್ಬರು ಕೊಯಂಬೇಡು ಪೊಲೀಸರಿಗೆ ದೂರು ನೀಡಿದ್ದಾರೆ.

ಬರೋಬ್ಬರಿ 8.62 ಲಕ್ಷ ರೂಪಾಯಿ ಮೌಲ್ಯದ  ಮೊಬೈಲ್ ಟವರ್ ಇದಾಗಿದೆ. ಟವರ್​ ಕೆಡವುವ ಸಂದರ್ಭದಲ್ಲಿ ನಮ್ಮ ಬಳಿ ಒಂದು ಮಾತನ್ನೂ ಕೇಳಿಲ್ಲ  ಎಂದು ಕಂಪನಿ ದೂರಿನಲ್ಲಿ ತಿಳಿಸಿದೆ.

suddiyaana