ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸರಣಿ ಸಾವಿನ ಕಾರಣ ಬಹಿರಂಗ!  

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸರಣಿ ಸಾವಿನ ಕಾರಣ ಬಹಿರಂಗ!  

ನವದೆಹಲಿ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸರಣಿ ಸಾವು ಮುಂದುವರೆದಿದೆ. ಬುಧವಾರ ಆಗಸ್ಟ್‌ 2 ರಂದು ಕೂಡ ಉದ್ಯಾನದಲ್ಲಿ ಧಾತ್ರಿ ಎಂಬ ಹೆಣ್ಣು ಚೀತಾ ಸಾವನ್ನಪ್ಪಿದೆ. ಮಾರ್ಚ್ ನಂತರ ಈ ಚೀತಾ ಸೇರಿ ಸಾವನ್ನಪ್ಪಿದ ಚೀತಾಗಳ ಸಂಖ್ಯೆ 9ಕ್ಕೇರಿದೆ. ಇದು ಅಧಿಕಾರಿಗಳ ಆತಂಕಕ್ಕೂ ಕಾರಣವಾಗಿದೆ. ಇದೀಗ ಈ ಚೀತಾಗಳು ಸಾವನ್ನಪ್ಪುತ್ತಿರುವುದಕ್ಕೆ ಕಾರಣ ಬಹಿರಂಗವಾಗಿದೆ. ಆಫ್ರಿಕಾದಿಂದ ಭಾರತಕ್ಕೆ ತರಲಾಗಿರುವ ಚೀತಾಗಳಲ್ಲಿ ಬೆಳವಣಿಗೆಯಾಗುತ್ತಿರುವ ತುಪ್ಪಳದ ಕಾರಣದಿಂದಾಗಿ ಅವು ಮಾರಣಾಂತಿಕ ಸೋಂಕಿಗೆ ತುತ್ತಾಗಿ ಸಾವಿಗೀಡಾಗುತ್ತಿವೆ ಎಂದು ಚೀತಾ ಯೋಜನೆಯ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮುಂದುವರಿದ ಚೀತಾಗಳ ಸಾವಿನ ಸರಣಿ – ‘ಧಾತ್ರಿ’ ಶವ ಕಂಡು ಅಧಿಕಾರಿಗಳು ಶಾಕ್

ಈ ಸಮಯದಲ್ಲಿ ಆಫ್ರಿಕಾದಲ್ಲಿ ಚಳಿಗಾಲ ಆರಂಭವಾಗುತ್ತಿದೆ. ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಚೀತಾಗಳು ಈ ತುಪ್ಪಳವನ್ನು ಬೆಳೆಸಿಕೊಳ್ಳುತ್ತವೆ. ಆದರೆ ಇದು ಭಾರತದಲ್ಲಿ ಅವುಗಳಿಗೆ ಸೋಂಕಿಗೆ ಕಾರಣವಾಗುತ್ತಿದೆ. ಚೀತಾಗಳು ತಮ್ಮ ಹಿಂಗಾಲುಗಳ ಮೇಲೆ ಕುಳಿತಾಗ ಬೆನ್ನುಮೂಳೆಯ ಮೂಲಕ ಈ ಸೋಂಕು ಕೆಳಭಾಗದವರೆಗೂ ಹರಿಯುವುದರಿಂದ ಸೋಂಕು ಹೆಚ್ಚಾಗಿ ಸಾವಿಗೀಡಾಗುತ್ತಿವೆ. ಈ ತುಪ್ಪಳವನ್ನು ಶೇವ್‌ ಮಾಡುವ ಮೂಲಕ ಚೀತಾಗಳನ್ನು ಕಾಪಾಡಿಕೊಳ್ಳಬಹುದು. ಇನ್ನು ಉದ್ದಕೂದಲು ಹೊಂದಿಲ್ಲದ ಚೀತಾಗಳು ಈ ಸಮಸ್ಯೆಗೆ ತುತ್ತಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ತಿಂಗಳಲ್ಲಿ 9 ಚೀತಾ ಸಾವನ್ನಪ್ಪಿವೆ. ಬುಧವಾರ ಮುಂಜಾನೆ ಧಾತ್ರಿ ಎಂಬ ಹೆಣ್ಣು ಚೀತಾ ಕೂಡ ಸಾವನ್ನಪ್ಪಿದೆ. ಇದರ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಚೀತಾದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿತ್ತು. ಈಗ ಸಾವಿಗೆ ತುಪ್ಪಳ ಹೆಚ್ಚಾಗಿ ಉಂಟಾದ ಸೋಂಕು ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ.

ಇದೀಗ ಕುನೋ ಅರಣ್ಯದಲ್ಲಿ 7 ಗಂಡು, 6 ಹೆಣ್ಣು ಚೀತಾ ಮತ್ತು 1 ಹೆಣ್ಣು ಚೀತಾ ಮರಿ ಸೇರಿದಂತೆ ಒಟ್ಟು 14 ಚೀತಾಗಳಿದ್ದು 1 ಹೆಣ್ಣು ಚೀತಾ ಅರಣ್ಯದಿಂದ ಆಚೆ ಸಾಗಿದ್ದು ಅದನ್ನು ತೀವ್ರ ನಿಗಾದಲ್ಲಿರಿಸಲಾಗಿದೆ. ವನ್ಯಜೀವಿ ಪಶುವೈದ್ಯರು ಹಾಗೂ ನಮೀಬಿಯಾದ ತಜ್ಞರ ತಂಡವು ಅವುಗಳ ಆರೋಗ್ಯದ ಮೇಲ್ವಿಚಾರಣೆಯನ್ನು ನಿಯಮಿತವಾಗಿ ನಡೆಸುತ್ತಿದೆ.

suddiyaana