ಚಾರ್ ಧಾಮ್ ಯಾತ್ರೆಗೆ ಜನವೋ ಜನ – ಬದರಿನಾಥದಲ್ಲಿ VIP ದರ್ಶನ ಸೌಲಭ್ಯ ಸ್ಥಗಿತ!

ಚಾರ್ ಧಾಮ್ ಯಾತ್ರೆಗೆ ಜನವೋ ಜನ – ಬದರಿನಾಥದಲ್ಲಿ VIP ದರ್ಶನ ಸೌಲಭ್ಯ ಸ್ಥಗಿತ!

ಉತ್ತರಾಖಂಡದ ಚಾರ್ ಧಾಮ್ ದೇವಾಲಯಗಳ ಬಾಗಿಲುಗಳನ್ನು ಅಕ್ಷಯ ತೃತೀಯ ದಿನದಂದು ತೆರೆಯಲಾಗಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈಗಾಗಲೇ ನೂಕು ನುಗ್ಗಲು ಸಂಭವಿಸುತ್ತಿದ್ದು, ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಇದೀಗ ಬದರಿನಾಥದಲ್ಲಿ ವಿಐಪಿ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಹೌದು, ಚಾರ್ ಧಾಮ್ ಯಾತ್ರೆಗೆ  ದೇಶ, ವಿದೇಶಗಳಿಂದ ಭಕ್ತರು ಹರಿದು ಬರುತ್ತಿದ್ದಾರೆ. ಯಾತ್ರೆಯ ನೋಂದಣಿ ಸಂಖ್ಯೆ ಈಗಾಗಲೇ 26 ಲಕ್ಷ ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ವಿಐಪಿ  ದರ್ಶನ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ಒಳ್ಳೆ ಮಗಳಲ್ಲ.. ತಾನು ಮಾಡಿದ ತಪ್ಪನ್ನು ನನ್ನ ಮಗಳು ಮಾಡುವುದಕ್ಕೆ ಬಿಡೋದಿಲ್ಲ ಎಂದು ಆಲಿಯಾ ಭಟ್‌!

ಏಪ್ರಿಲ್ 15 ರಂದು ಚಾರ್ಧಾಮ್ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅಂದಿನಿಂದ ಇದುವರೆಗೆ ರಾಜ್ಯದಲ್ಲಿ 26 ಲಕ್ಷಕ್ಕೂ ಹೆಚ್ಚು ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ. ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಶ್ರಮಿಸುತ್ತಿದೆ. ಎಲ್ಲಾ ಅಧಿಕಾರಿಗಳು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಗಂಭೀರವಾಗಿ ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮೇ ತಿಂಗಳಲ್ಲಿ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಯಾತ್ರೆಗಾಗಿ ಆನ್‌ಲೈನ್ ನೋಂದಣಿಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ. ಆನ್‌ಲೈನ್ ನೋಂದಣಿಗೆ ನಿಗದಿತ ಸಂಖ್ಯೆಯ ಸ್ಲಾಟ್‌ಗಳು ಲಭ್ಯವಿದೆ. ಪೂರ್ವ ನೋಂದಣಿ ಇಲ್ಲದೆ ಆಗಮಿಸುವ ಭಕ್ತರಿಗೆ ಅವಕಾಶ ಕಲ್ಪಿಸಲು, ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಹರಿದ್ವಾರ ಮತ್ತು ಋಷಿಕೇಶದಲ್ಲಿ ಅವರ ಅನುಕೂಲಕ್ಕಾಗಿ ಆಫ್‌ಲೈನ್ ನೋಂದಣಿ ಸೌಲಭ್ಯಗಳನ್ನು ಆಯೋಜಿಸಿದೆ.

ಇನ್ನು ಗೇಟ್ ವ್ಯವಸ್ಥೆ ಜಾರಿಯಿಂದಾಗಿ ಯಮುನೋತ್ರಿ ಮಾರ್ಗದಲ್ಲಿ ವ್ಯವಸ್ಥೆಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿರುವಂತೆ ಕಂಡುಬಂದರೂ ಗಂಗೋತ್ರಿ ಮಾರ್ಗದಲ್ಲಿ ಸವಾಲುಗಳು ಎದುರಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಗಂಗೋತ್ರಿ ಯಾತ್ರಾ ಮಾರ್ಗದಲ್ಲಿ ಗಂಗನಾನಿ ಮತ್ತು ಗಂಗೋತ್ರಿ ನಡುವೆ ಸುಮಾರು 60 ಕಿ.ಮೀ ವ್ಯಾಪಿಸಿರುವ ಟ್ರಾಫಿಕ್ ಜಾಮ್‌ನಲ್ಲಿ ಹಲವು ಪ್ರಯಾಣಿಕರ ವಾಹನಗಳು ಸಿಲುಕಿವೆ. ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಅನೇಕ ಭಕ್ತರು ತಮ್ಮ ದರ್ಶನವನ್ನು ಪೂರ್ಣಗೊಳಿಸದೆ ಉತ್ತರಕಾಶಿಯಿಂದ ಹಿಂದಿರುಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Shwetha M