ಚಾರ್ ಧಾಮ್ ಯಾತ್ರಿಕರೇ ಇವರ ಟಾರ್ಗೆಟ್!‌ – ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಹಿಂದೂಗಳ ತೀರ್ಥಯಾತ್ರೆ ಕನಸುಗಳ ಪೈಕಿ ಚಾರ್‌ಧಾಮ್‌ ಯಾತ್ರೆಯೂ ಒಂದು. ಲಕ್ಷಾಂತರ ಭಕ್ತಾಧಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷದ ಮೇ 2 ರಿಂದ ಚಾರ್‌ಧಾಮ್‌ ಯಾತ್ರೆ ಆರಂಭವಾಗಲಿದೆ. ಇದೀಗ ಸರ್ಕಾರ ಭಕ್ತಾಧಿಗಳಿಗೆ ಮಹತ್ವದ ಸಂದೇಶವೊಂದನ್ನ ನೀಡಿದೆ. ಆನ್‌ಲೈನ್ ಬುಕಿಂಗ್ ವಂಚನೆಗೆ ಬಲಿಯಾಗದಿರಿ ಎಂದು ಕೇಂದ್ರ  ಸರ್ಕಾರ ತಿಳಿಸಿದೆ.

ಇದನ್ನೂ ಓದಿ: RCBಗೆ ಬ್ಯಾಡ್ ಲಕ್ ಬೆಂಗಳೂರು – ಟೀಂ ಸೋತರೂ ಗೆದ್ದ ಟಿಮ್ ಡೇವಿಡ್

ಚಾರ್‌ಧಾಮ್‌ ಯಾತ್ರೆಗೆ ಲಕ್ಷಾಂತರ ಮಂದಿ ತೆರಳುತ್ತಾರೆ. ಇದೀಗ ಭಕ್ತಾಧಿಗಳನ್ನ ಟಾರ್ಗೆಟ್‌ ಮಾಡಿಕೊಂಡು ವಂಚನೆ ಮಾಡುವ ಜಾಲ ಹೆಚ್ಚಾಗಿದೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ಬುಕಿಂಗ್ ವಂಚನೆ ಜಾಲ ದೇಶಾದ್ಯಂತ ಹೆಚ್ಚಳವಾಗುತ್ತಿದೆ. ಯಾತ್ರಿಕರಿಗೆ ಅತಿಥಿ ಗೃಹ, ಹೋಟೆಲ್ ಬುಕಿಂಗ್, ಆನ್‌ಲೈನ್ ಕ್ಯಾಬ್ ಮತ್ತು ಟ್ಯಾಕ್ಸಿ ಬುಕಿಂಗ್‌ಗಳು ಮತ್ತು ಪ್ಯಾಕೇಜ್‌ಗಳು, ಧಾರ್ಮಿಕ ಪ್ರವಾಸದ ಹೆಸರಿನಲ್ಲಿ ವಂಚಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಮನವಿ ಮಾಡಿದೆ.

ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಮತ್ತು ಬದರಿನಾಥಗಳನ್ನು ಒಳಗೊಂಡ ಚಾರ್ ಧಾಮ್ ಯಾತ್ರೆ 2025 ರ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಬೆನ್ನಲ್ಲೇ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (I4C), ಧಾರ್ಮಿಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಡಿಜಿಟಲ್ ವಂಚನೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದು, ಉತ್ತರಾಖಂಡದ ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಳ್ಳಲು ಸಾವಿರಾರು ಭಕ್ತರು ತಯಾರಿ ನಡೆಸುತ್ತಿರುವ ಸಮಯದಲ್ಲಿ ಎಚ್ಚರಿಕೆ ನೀಡಿದೆ.

ಸೈಬರ್ ಅಪರಾಧಿಗಳು ಅಸಲಿ ಸೇವಾ ಪೂರೈಕೆದಾರ ವೆಬ್​ಸೈಟ್​ಗಳನ್ನೇ ಹೋಲುವ ನಕಲಿ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ರಚಿಸುವ ಮೂಲಕ ಯಾತ್ರಾರ್ಥಿಗಳ ಧಾರ್ಮಿಕ ಭಾವನೆಗಳು ಮತ್ತು ಅನಿವಾರ್ಯತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಈ ವಂಚನೆಯ ತಾಣಗಳು ಕೇದಾರನಾಥಕ್ಕೆ ಹೆಲಿಕಾಪ್ಟರ್ ಬುಕಿಂಗ್, ಅತಿಥಿ ಗೃಹ ಮತ್ತು ಹೋಟೆಲ್ ಕಾಯ್ದಿರಿಸುವಿಕೆಗಳು, ಕ್ಯಾಬ್ ಅಥವಾ ಟ್ಯಾಕ್ಸಿ ಸೇವಾ ಬುಕಿಂಗ್‌ಗಳು ಮತ್ತು ಸಂಪೂರ್ಣ ರಜಾ ಅಥವಾ ಧಾರ್ಮಿಕ ಪ್ರವಾಸ ಪ್ಯಾಕೇಜ್‌ಗಳಂತಹ ಸೇವೆಗಳ ಜಾಹೀರಾತು ನೀಡಿ ಜನರನ್ನು ಮರುಳು ಮಾಡುತ್ತವೆ ಎಂದು ಸಚಿವಾಲಯ ತಿಳಿಸಿದೆ.

ದಾರಿ ತಪ್ಪಿಸುವಂಥ ಫೇಸ್‌ಬುಕ್ ಪೋಸ್ಟ್‌ಗಳು, ವಾಟ್ಸ್​ಆ್ಯಪ್ ಸಂದೇಶಗಳು ಮತ್ತು ಗೂಗಲ್‌ನಂತಹ ಜನಪ್ರಿಯ ಸರ್ಚ್ ಇಂಜಿನ್‌ಗಳಲ್ಲಿ ಪೇಯ್ಡ್ ಜಾಹೀರಾತುಗಳ ಮೂಲಕ ವಂಚಕರು ಜನರ ಮನಗೆಲ್ಲುತ್ತಾರೆ. ಜನರನ್ನು ಆಕರ್ಷಿಸಲು ರಿಯಾಯಿತಿ ದರಗಳನ್ನು ನೀಡುತ್ತಾರೆ. ಅಸ್ತಿತ್ವದಲ್ಲಿಲ್ಲದ ಸೇವೆಗಳಿಗೆ ಮುಂಗಡ ಪಾವತಿಗಳನ್ನು ಮಾಡುವಂತೆ ಮಾಡಿ ಹಣ ಲಪಟಾಯಿಸುತ್ತಾರೆ ಎಂದು ಎಚ್ಚರಿಕೆ ಸಂದೇಶದಲ್ಲಿ ಸಚಿವಾಲಯ ಉಲ್ಲೇಖಿಸಿದೆ.

ಯಾವುದೇ ಅನುಮಾನಾಸ್ಪದ ವೆಬ್‌ಸೈಟ್‌ಗಳು ಅಥವಾ ಜಾಹೀರಾತುಗಳು ಗಮನಕ್ಕೆ ಬಂದಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್‌ಗೆ (www.cybercrime.gov.in) ದೂರು ನೀಡುವಂತೆ ಸೂಚಿಸಲಾಗಿದೆ. ಇದರಿಂದಾಗಿ ಅಂತಹ ಚಟುವಟಿಕೆಗಳನ್ನು ತಡೆಯುವ ಕಾರ್ಯದಲ್ಲಿ ಇಲಾಖೆಗೆ ಸಹಾಯವಾಗುತ್ತದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

Shwetha M