ಚನ್ನಪಟ್ಟಣ ಅಖಾಡಕ್ಕೆ ಡಿಕೆ ಬ್ರದರ್? – ಬೈ ಎಲೆಕ್ಷನ್ ಗೆ ನಿಖಿಲ್ Vs ಸುರೇಶ್?
ಸೋಲಿನ ಸೇಡು ತೀರಿಸಿಕೊಳ್ತಾರಾ ಡಿಸಿಎಂ?

ಒಕ್ಕಲಿಗ ಸಮುದಾಯದ ಪ್ರಬಲ ಕುಟುಂಬಗಳ ನಡುವಿನ ಹೈವೋಲ್ಟೇಜ್ ಕದನದಲ್ಲಿ ಕೊನೆಗೂ ಡಾಕ್ಟರ್ಗೆ ಗೆಲುವಾಗಿದೆ. ದೇವೇಗೌಡ ವರ್ಸಸ್ ಡಿಕೆ ಬ್ರದರ್ಸ್ ಫ್ಯಾಮಿಲಿ ಫೈಟ್ ಎಂದೇ ಬಿಂಬಿತವಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದೊಡ್ಡಗೌಡ್ರ ಅಳಿಯ ಡಾ.ಸಿಎನ್ ಮಂಜುನಾಥ್ ರಣರೋಚಕ ಜಯ ಸಾಧಿಸಿದ್ದಾರೆ. ಡಿಕೆ ಬ್ರದರ್ಸ್ಗೆ ಇದು ಬಹುದೊಡ್ಡ ಹೊಡೆತವನ್ನೇ ನೀಡಿದೆ. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಈಗ ತಮ್ಮ ಸೋದರನನ್ನೇ ಗೆಲ್ಲಿಸಿಕೊಳ್ಳೋಕೆ ಆಗಲಿಲ್ವಲ್ಲ ಅನ್ನೋ ಶಾಕ್ನಲ್ಲಿದ್ದಾರೆ. ಹೀಗಾಗಿ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ತಮ್ಮನನ್ನ ಕರೆತರೋ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅದೂ ಕೂಡ ಈ ಎರಡೂ ಕುಟುಂಬಗಳ ನಡುವೆ ಮತ್ತೊಂದು ಬ್ಯಾಟಲ್ ನಡೆಯೋ ಸಾಧ್ಯತೆ ದಟ್ಟವಾಗಿದೆ. ಅದುವೇ ಚನ್ನಪಟ್ಟಣ ಕದನ.
ಇದನ್ನೂ ಓದಿ: ಮಂತ್ರಿ ಸ್ಥಾನ ಬೇಕೆಂದು ಒತ್ತಡ ಹಾಕಲ್ಲ! – ಹೀಗೆ ಯಾಕೆ ಹೇಳಿದ್ರು ಹೆಚ್‌ಡಿ ಕುಮಾರಸ್ವಾಮಿ
2024ರ ಲೋಕಸಭಾ ಚುನಾವಣೆಯಲ್ಲಿ ಮೂವರು ಶಾಸಕರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರ, ಜೆಡಿಎಸ್‌ನ ಎಚ್. ಡಿ. ಕುಮಾರಸ್ವಾಮಿ ಮಂಡ್ಯ ಕ್ಷೇತ್ರ ಹಾಗೇ ಕಾಂಗ್ರೆಸ್ ಶಾಸಕ ಇ. ತುಕಾರಾಮ್ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿನ್ ಆಗಿದ್ದಾರೆ. ಈ ಮೂಲಕ ಬೊಮ್ಮಾಯಿ ಪ್ರತಿನಿಧಿಸುತ್ತಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ, ಹೆಚ್ ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ಹಾಗೇ ಇ ತುಕಾರಾಂ ಶಾಸಕರಾಗಿದ್ದ ಸಂಡೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ಬೇಕು. ರಾಜೀನಾಮೆ ಬಳಿಕ ಮೂರೂ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯಲಿದೆ. ಸೋ ಹೆಚ್ ಡಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ರೆ ಈ ಕ್ಷೇತ್ರದಲ್ಲಿ ಮತ್ತೆ ತಮ್ಮ ಫ್ಯಾಮಿಲಿಗೆ ಮಣೆ ಹಾಕೋ ಸಾಧ್ಯತೆ ಇದೆ. ಇದೇ ಕ್ಷೇತ್ರದಿಂದ ಡಿ.ಕೆ ಸುರೇಶ್ರನ್ನ ಅಖಾಡಕ್ಕೆ ಇಳಿಸೋಕೆ ಕಾಂಗ್ರೆಸ್ ಭರ್ಜರಿ ಪ್ಲ್ಯಾನ್ ಮಾಡಿದೆ.
ದೇವೇಗೌಡ್ರು ವರ್ಸಸ್ ಡಿಕೆ ಬ್ರದರ್ಸ್!
ಹೆಚ್ಡಿಕೆ ರಾಜೀನಾಮೆಯಿಂದ ತೆರವಾಗಲಿರುವ ಸ್ಥಾನಕ್ಕೆ ಆರು ತಿಂಗಳ ಒಳಗೆ ವಿಧಾನಸಭೆ ಉಪಚುನಾವಣೆ ನಡೆಯಲಿದೆ. ಒಕ್ಕಲಿಗ ಭದ್ರಕೋಟೆಯಲ್ಲಿ ಮೇಲುಗೈ ಸಾಧಿಸಲು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ದೇವೇಗೌಡರ ಕುಟುಂಬ ಮತ್ತೊಮ್ಮೆ ಎದುರು ಬದುರಾಗಲಿವೆ. ಡಿಕೆಶಿ ಸಹೋದರ ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಬಾ ಕ್ಷೇತ್ರದಲ್ಲಿ ಸೋತ ನಂತರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ರಾಮನಗರ ಜಿಲ್ಲೆಯ ರಾಜಕೀಯ ವಲಯಗಳಲ್ಲಿ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ. ಉಪಚುನಾವಣೆಯಲ್ಲಿ ನಾವು 20,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಚನ್ನಪಟ್ಟಣ ಕ್ಷೇತ್ರವನ್ನು ಖಂಡಿತವಾಗಿಯೂ ವಶಪಡಿಸಿಕೊಳ್ಳಲಿದ್ದೇವೆ ಅಂತಾ ಮಾಗಡಿ ಕಾಂಗ್ರೆಸ್ ಶಾಸಕ ಎಚ್‌ಸಿ ಬಾಲಕೃಷ್ಣ ಹೇಳಿದ್ದಾರೆ. ಇತ್ತ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸುತ್ತಾರೋ ಅಥವಾ ಮೈತ್ರಿಕೂಟದ ಪಾಲುದಾರ ಬಿಜೆಪಿಗೆ ಕ್ಷೇತ್ರವನ್ನು ತ್ಯಾಗ ಮಾಡುತ್ತಾರೋ ಅನ್ನೋದು ಸ್ಪಷ್ಟವಾಗಿಲ್ಲ. ಮತ್ತೊಂದೆಡೆ ಬಿಜೆಪಿಯಿಂದ ಮಾಜಿ ಶಾಸಕ ಹಾಗೂ ಎಂಎಲ್‌ಸಿ ಸಿಪಿ ಯೋಗೇಶ್ವರ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ & ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಥವಾ ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಮಾಡಬಹುದು ಎನ್ನಲಾಗಿದೆ. ಹೀಗಾಗಿ ಡಿ.ಕೆ. ಸುರೇಶ್ರನ್ನೇ ಅಖಾಡಕ್ಕಿಳಿಸಿ ಗೆಲ್ಲಿಸೋ ಮೂಲಕ ಡಿಕೆ ಬ್ರದರ್ಸ್ ಸೇಡು ತೀರಿಸಿಕೊಳ್ಳೋ ಚಿಂತನೆಯಲ್ಲಿದ್ದಾರೆ.
ಅಸಲಿಗೆ ಈ ಕ್ಷೇತ್ರ ಆರಂಭದಿಂದಲೂ ಕೂಡ ಕಾಂಗ್ರೆಸ್ನ ಭದ್ರಕೋಟೆ. 1952ರಿಂದ ಈವರೆಗೂ ನಡೆದ 17 ಚುನಾವಣೆಗಳಲ್ಲಿ ಬಿಜೆಪಿಗೆ ಇದು 2ನೇ ಗೆಲುವು. ಈ ಹಿಂದೆ ಕನಕಪುರ ಲೋಕಸಭೆ ಕ್ಷೇತ್ರ ಅಸ್ತಿತ್ವದಲ್ಲಿದ್ದ ವೇಳೆ 1998 ಕೇವಲ 16,000 ಮತಗಳಿಂದ ಬಿಜೆಪಿಯ ಶ್ರೀನಿವಾಸ್ ಗೆಲುವು ಸಾಧಿಸಿದ್ದರು. ಅದಾದ 26 ವರ್ಷಗಳ ಬಳಿಕ ಡಾ. ಮಂಜುನಾಥ್ ಕಮಲ ಅರಳಿಸಿ ಹೊಸ ಭಾಷ್ಯ ಬರೆದಿರುವುದು ವಿಶೇಷ. ಕಾಂಗ್ರೆಸ್ನ ಘಟಾನುಘಟಿ ನಾಯಕ ಡಿಕೆ ಸುರೇಶ್ ಅವರನ್ನು ಎರಡು ಲಕ್ಷಕ್ಕೂ ಅಧಿಕ ಅಂತರದಿಂದ ಡಾ.ಸಿಎನ್ ಮಂಜುನಾಥ್ ಸೋಲಿಸಿದ್ದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಅಲ್ದೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಮಂಜುನಾಥ್ 1,06,971 ಮತ ಪಡೆದ್ರೆ ಡಿಕೆ ಸುರೇಶ್ಗೆ 85,357 ಮತಗಳು ಬಿದ್ದಿವೆ. ಹೀಗಾಗಿ ಡಿಕೆ ಸುರೇಶ್ ಸ್ಪರ್ಧಿಸಿದ್ರೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಹಾಗೇನಾದ್ರೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಡಿಕೆ ಸುರೇಶ್ ಸ್ಪರ್ಧಿಸಿದ್ದೇ ಆದಲ್ಲಿ ಮತ್ತೊಮ್ಮೆ ದೌಡ್ಡಗೌಡ್ರ ಫ್ಯಾಮಿಲಿ ವರ್ಸಸ್ ಡಿಕೆ ಬ್ರದರ್ಸ್ ಫ್ಯಾಮಿಲಿ ನಡುವೆ ಮತ್ತೊಂದು ಹೈವೋಲ್ಟೇಜ್ ಕದನ ನಡೆಯಲಿದೆ.