2 ಸೋಲು.. 3ನೇ ಪರೀಕ್ಷೆಗೆ ನಿಖಿಲ್ ರೆಡಿ – HDKಗೆ ಮೈತ್ರಿಯೇ ಮುಳ್ಳು?
ಲೋಕಸಭಾ ಚುನಾವಣೆ ಬಳಿಕ ತೆರವಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ಗೆ ಇನ್ನೂ ಕೂಡ ಡೇಟ್ ಅನೌನ್ಸ್ ಆಗಿಲ್ಲ. ಆದ್ರೂ ಕೂಡ ಚುನಾವಣಾ ಕಾವು ಜೋರಾಗ್ತಾನೇ ಇದೆ. ಅದ್ರಲ್ಲೂ ಚನ್ನಪಟ್ಟಣ ಕ್ಷೇತ್ರವಂತೂ ಈಗಿನಿಂದಲೇ ನಿಗಿನಿಗಿ ಅಂತಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗಿದ್ಧಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಚುನಾವಣೆ ನಡೆಯುವುದು ಬಾಕಿಯಿದ್ದು, ಯಾವುದೇ ಕ್ಷಣದಲ್ಲಾದರೂ ಚುನಾವಣೆ ಘೋಷಣೆ ಆಗ್ಬೋದು. ಆದ್ರೀಗ ಚನ್ನಪಟ್ಟಣದಲ್ಲಿ ಹಿಡಿತ ಸಾಧಿಸೋಕೆ ಇಬ್ಬರು ಪ್ರಬಲ ಒಕ್ಕಲಿಗ ನಾಯಕರ ನಡುವೆ ನೇರ ಫೈಟ್ ಏರ್ಪಟ್ಟಿದೆ. ಹೆಚ್ ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇದ್ರ ನಡುವೆ ಐದು ಬಾರಿ ಪ್ರತಿನಿಧಿಸಿ ಸಚಿವರೂ ಆಗಿದ್ದ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕೂಡ ಟಿಕೆಟ್ಗಾಗಿ ಟವೆಲ್ ಹಾಕಿದ್ದಾರೆ. ಮೈತ್ರಿ ಟಿಕೆಟ್ ನಿಖಿಲ್ಗೆ ಕೊಡಿಸೋಕೆ ಹೆಚ್ಡಿಕೆ ಕಸರತ್ತು ನಡೆಸ್ತಿದ್ರೆ ನಾನೇ ಅಭ್ಯರ್ಥಿ ಅಂತಾ ಈಗಾಗ್ಲೇ ಯೋಗೇಶ್ವರ್ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಹೆಚ್ಡಿಕೆ ಪ್ಲ್ಯಾನ್ ಏನು? ಡಿಕೆಶಿ ಸವಾಲಾಗಿ ಸ್ವೀಕರಿಸಿದ್ದೇಕೆ..? 3ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳೀತಾರಾ ನಿಖಿಲ್ ಕುಮಾರಸ್ವಾಮಿ..? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಗ್ನಿ ಕ್ಷಿಪಣಿ ಪಿತಾಮಹ ಡಾ. ರಾಮ್ ನಾರಾಯಣ್ ಅಗರ್ವಾಲ್ ಇನ್ನಿಲ್ಲ
ಹೆಚ್ ಡಿಕೆ Vs ಡಿಕೆಶಿ!
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ಹೆಚ್ಡಿಕೆ ಮತ್ತು ಡಿಕೆಶಿ ನಡುವೆ ಫೈಟ್ ಎಂದೇ ಬಿಂಬಿತವಾಗ್ತಿದೆ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ಡಿಕೆಶಿ ಮತ್ತು ಹೆಚ್ ಡಿಕೆ ಕರ್ಮಭೂಮಿ ರಾಮನಗರ ಜಿಲ್ಲೆ. ಭವಿಷ್ಯದಲ್ಲಿ ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ನಾಮಕರಣಗೊಳ್ಳಲಿದೆ. ಅಭ್ಯರ್ಥಿಗಳು ಯಾರೇ ಆದರೂ ರಾಜಕೀಯದಲ್ಲಿ ಗೆಲ್ಲೋದು ಸೋಲೋದು ಇವ್ರಿಬ್ರೇ. ಅಲ್ದೇ ಚನ್ನಪಟ್ಟಣ ಕ್ಷೇತ್ರ ಒಳಪಡುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಮಾಜಿ ಪ್ರದಾನಿ ದೇವೇಗೌಡ ಅವರ ಕುಟುಂಬ ಕಸಿದುಕೊಂಡಿದೆ. ದೊಡ್ಡಗೌಡ್ರ ಆಳಿಯ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಅವರು ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಡಿಕೆಶಿ ಸಹೋದರ ಡಿಕೆ ಸುರೇಶ್ ಅವರನ್ನು ಮಣಿಸಿದ್ರು. ಇದು ಶಿವಕುಮಾರ್ ಅವರಿಗೆ ನುಂಗಲಾರದ ತುತ್ತಾಗಿದೆ. ಹಾಗಾಗಿ ಈ ಕ್ಷೇತ್ರ ಸೇಡು ತೀರಿಸಿಕೊಳ್ಳುವ ಅಖಾಡವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಕೀಯದಲ್ಲಿ ಕುಮಾರಸ್ವಾಮಿ ಮತ್ತು ಶಿವಕುಮಾರ್ ಪರಸ್ಪರ ಎದುರಾಳಿಗಳಾಗಿದ್ದಾರೆ. ಪರಸ್ಪರ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಏಕವಚನದಲ್ಲಿ ನಿಂದಿಸುವ ಮಟ್ಟಕ್ಕೆ ದ್ವೇಷ ಬೆಳೆದಿದೆ. ಅಲ್ದೇ ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಹೆಜ್ಜೆಯೂರಲು ಬಿಜೆಪಿ ಹವಣಿಸುತ್ತಿದೆ. ಇನ್ನು ಹೆಚ್ಡಿಕೆ ತಮ್ಮ ಪುತ್ರ ನಿಖಿಲ್ ರಾಜಕೀಯ ಭವಿಷ್ಯಕ್ಕೆ ಅಡಿಗಲ್ಲು ಹಾಕಲು ಯತ್ನಿಸುತ್ತಿದ್ದಾರೆ. ಈಗಾಗ್ಲೇ ಎರಡು ಬಾರಿ ರಾಜಕೀಯ ಪ್ರವೇಶಕ್ಕೆ ಧುಮುಕಿ ಫೇಲ್ ಆಗಿರೋ ನಿಖಿಲ್ಗೆ ಚನ್ನಪಟ್ಟಣದಿಂದಲೇ ಭದ್ರ ಬುನಾದಿ ಹಾಕಲು ಪ್ಲ್ಯಾನ್ ಮಾಡಿದ್ದಾರೆ. ಆದ್ರೆ ಸಿಪಿ ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾಗಲು ತುದಿಗಾಲಲ್ಲಿ ನಿಂತಿದ್ದಾರೆ.
ಚನ್ನಪಟ್ಟಣ ಕ್ಷೇತ್ರವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಡಿಕೆಶಿ ಈಗಾಗ್ಲೇ ಕ್ಷೇತ್ರದಲ್ಲಿ ಭರ್ಜರಿ ತಂತ್ರಗಾರಿಕೆಯನ್ನೇ ಮಾಡ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಸರ್ಕಾರಿ ಬಾಲಕರ ಪದವಿ ಕಾಲೇಜು ಆವರಣದಲ್ಲಿ ಇದೇ ಮೊದಲ ಬಾರಿಗೆ ಧ್ವಜಾರೋಹಣ ಮಾಡಿದ್ದಾರೆ. ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಧ್ವಜಾರೋಹಣದ ಬಳಿಕ ಮಾತನಾಡಿದ ಡಿಕೆಶಿ, ಬೆಂಗಳೂರು ದಕ್ಷಿಣ ಎಂಬ ಹೆಸರು ಬದಲಾವಣೆ ಆಗ್ತಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಆಗ್ತಿದೆ, ಹಾಗಾಗಿ ಚನ್ನಪಟ್ಟಣಕ್ಕೆ ಬಂದು ಧ್ವಜಾರೋಹಣ ಮಾಡ್ತಿದ್ದೇನೆ. ನಿಮ್ಮನ್ನ ಬಿಟ್ಟುಹೋಗುವ ಪ್ರಶ್ನೆಯೇ ಇಲ್ಲ. ಚನ್ನಪಟ್ಟಣ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಚನ್ನಪಟ್ಟಣಕ್ಕೆ 150ಕೋಟಿ ವಿಶೇಷ ಅನುದಾನ ಕೊಟ್ಟಿದ್ದೇವೆ ಎಂದಿದ್ದಾರೆ. ಅಭಿವೃದ್ಧಿ, ಅನುದಾನದ ಹೆಸ್ರಲ್ಲೇ ಡಿಕೆಶಿ ಮತಬುಟ್ಟಿಗೆ ಕೈ ಹಾಕ್ತಿದ್ರೆ ಮೈತ್ರಿ ಪಕ್ಷದಲ್ಲಿ ಟಿಕೆಟ್ ಜಟಾಪಟಿ ಜೋರಾಗಿದೆ. ಹೀಗಾಗಿ ಅಂತಿಮವಾಗಿ ಅಖಾಡಕ್ಕೆ ನಾನೇ ಇಳಿತೇನೆ.. ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ನಿಂದ ನಾನೇ ಅಭ್ಯರ್ಥಿ ಅಂತಾ ಘೋಷಣೆ ಮಾಡಿದ್ದಾರೆ. ಇದೀಗ ಮೈತ್ರಿ ಪಕ್ಷದ ಅಭ್ಯರ್ಥಿ ಯಾರೆಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಬೈ ಎಲೆಕ್ಷನ್ ಯುದ್ಧದಲ್ಲಿ ಗೆಲ್ಲೋದು ಹೆಚ್ಡಿಕೆಯೋ ಅಥವಾ ಡಿಕೆಶಿಯೋ ಅನ್ನೋದನ್ನ ಕಾದು ನೊಡ್ಬೇಕು.