ಚಂದ್ರಯಾನ -3 ಯಶಸ್ಸಿಗಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ!

ಚಂದ್ರಯಾನ -3 ಯಶಸ್ಸಿಗಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ!

ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ-3 ರ ಸಾಫ್ಟ್ ಲ್ಯಾಂಡಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 23 ರಂದು 18:04 ಗಂಟೆಗೆ ಲ್ಯಾಂಡರ್ ಮಾಡ್ಯೂಲ್-ವಿಕ್ರಮ್ ಚಂದ್ರನನ್ನು ಸ್ಪರ್ಶಿಸುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಮಿಷನ್‌ನ ಯಶಸ್ಸಿಗಾಗಿ ವಿವಿಧ ದೇಗುಲಗಳಲ್ಲಿ ಭಕ್ತರಿಂದ ವಿಶೇಷ ಪೂಜೆ, ಪುನಸ್ಕಾರಗಳನ್ನು  ನಡೆಸಲಾಗುತ್ತಿದೆ. ಉತ್ತರ ಪ್ರದೇಶದ ವಾರಣಾಸಿಯ ಕಾಮಾಕ್ಯ ದೇವಾಲಯದಲ್ಲಿ ‘ಹವನ’ ನಡೆಸಲಾಯಿತು. ಮುಂಬೈನ ಚಂದ್ರಮೌಳೇಶ್ವರ ಶಿವ ಮಂದಿರದಲ್ಲಿ ಶಿವಸೇನಾ ಉದ್ದವ್ ಠಾಕ್ರೆ ಬಣದ ನಾಯಕ ಆನಂದ್ ದುಬೆ ಅವರು ಚಂದ್ರಯಾನ-3 ರ ಯಶಸ್ಸಿಗಾಗಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಇದನ್ನೂ ಓದಿ: ಚಂದ್ರಯಾನ 3 ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯದ ಟ್ವೀಟ್ – ನಟನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಇನ್ನು ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬಸವನಗುಡಿಯ ಗಣೇಶ ದೇವಾಲಯದಲ್ಲೂ ಕೂಡ ಚಂದ್ರಯಾನ-3 ಯೋಜನೆ ಯಶಸ್ಸು ಸಿಗಲೆಂದು ಪ್ರಾರ್ಥಿಸಲಾಯಿತು. ಚಂದ್ರಯಾನ -3ರ ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಭಾರತದ ಮಹತ್ವಕಾಂಕ್ಷೆಯ ಯೋಜನೆ ಯಶಸ್ಸು ಸಾಧಿಸಲಿ ಎಂದು ಪ್ರಾರ್ಥಿಸಲಾಯಿತು.

ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಆಗಸ್ಟ್ 23 ರಂದು ಸಂಜೆ 6.04 ರ ಸುಮಾರಿಗೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ನಿರೀಕ್ಷೆಯಿದೆ ಎಂದು ಇಸ್ರೋ ತಿಳಿಸಿದೆ. ಇದು ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಇಳಿಯಲಿದೆ.

ಚಂದ್ರಯಾನ-3 ಮಿಷನ್ ಕುರಿತು ನವೀಕರಣವನ್ನು ನೀಡುತ್ತಾ ಇಸ್ರೋ ಚಂದ್ರನ ಮೇಲ್ಮೈ ಭಾಗದ ಚಿತ್ರಗಳನ್ನು ಟ್ವೀಟ್ ಮೂಲಕ ಹಂಚಿಕೊಂಡಿದೆ. ವಿಕ್ರಮ್ ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾದಿಂದ ಚಂದ್ರನ ದೂರದ ಭಾಗದ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಇಸ್ರೋ ಹೇಳಿದೆ.

ಇಸ್ರೋ ಟ್ವಿಟ್ಟರ್‌ನಲ್ಲಿ ನಾಲ್ಕು ಫೋಟೋಗಳನ್ನು ಹಂಚಿಕೊಂಡಿದೆ. ಹೀಗೆ ಬರೆದಿದೆ, “ಇವು ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾ (ಎಲ್‌ಎಚ್‌ಡಿಎಸಿ) ತೆಗೆದ ಚಂದ್ರನ ಚಿತ್ರಗಳಾಗಿವೆ. ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದೆ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ಈ ಕ್ಯಾಮೆರಾ ಸಹಾಯ ಮಾಡುತ್ತದೆ” ಎಂದು ಇಸ್ರೋ ಹೇಳಿದೆ.

suddiyaana