IND ಹಠಕ್ಕೆ ಬೆಪ್ಪಾದ PAK – ಚಾಂಪಿಯನ್ಸ್ ಟ್ರೋಫಿ ಟೂರ್ನಿ ಶಿಫ್ಟ್?
BCCI ಬೆನ್ನಿಗೆ ನಿಂತ ರಾಷ್ಟ್ರಗಳೆಷ್ಟು?

 IND ಹಠಕ್ಕೆ ಬೆಪ್ಪಾದ PAK – ಚಾಂಪಿಯನ್ಸ್ ಟ್ರೋಫಿ ಟೂರ್ನಿ ಶಿಫ್ಟ್?BCCI ಬೆನ್ನಿಗೆ ನಿಂತ ರಾಷ್ಟ್ರಗಳೆಷ್ಟು?

ಐಸಿಸಿ ಬಳಿ ಕಾಡಿ ಬೇಡಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನುಮತಿ ಪಡೆದಿದೆ. ಈಗಾಗ್ಲೇ ವೇಳಾಪಟ್ಟಿ ಹಾಗೇ ಕ್ರೀಡಾಂಗಣಗಳನ್ನೂ ಫೈನಲ್ ಮಾಡಿ ಐಸಿಸಿಗೆ ಕರಡು ಪ್ರತಿಯನ್ನೂ ಸಲ್ಲಿಕೆ ಮಾಡಿದೆ. ಆರ್ಥಿಕ ದಿವಾಳಿತನದ ನಡುವೆಯೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮೈದಾನಗಳನ್ನ ರೆಡಿ ಮಾಡಲಾಗ್ತಿದೆ. ಆದ್ರೆ ಈಗ ಪಾಕ್ ಉತ್ಸಾಹಕ್ಕೆ ತಣ್ಣೀರು ಬೀಳೋ ಎಲ್ಲಾ ಲಕ್ಷಣಗಳೂ ಕಾಣ್ತಿದೆ. ಯಾಕಂದ್ರೆ ಪಾಕಿಸ್ತಾನದಿಂದಲೇ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಶಿಫ್ಟ್ ಆಗುತ್ತಾ ಅನ್ನೋ ಸ್ಫೋಟಕ ಸುದ್ದಿ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ದಶಕದ ಬಳಿಕ ಟೂರ್ನಿ ಆಯೋಜನೆಗೆ ಸಜ್ಜಾಗಿದ್ದ ಪಾಕಿಸ್ತಾನಕ್ಕೆ ಇಂಥಾದ್ದೊಂದು ಶಾಕ್ ಕೊಡ್ತಿರೋದು ಭಾರತ. ಹಾಗಾದ್ರೆ ಪಾಕ್​ನಲ್ಲಿ ಟೂರ್ನಿ ನಡೆಯಲ್ವಾ? ಭಾರತ ಪಾಕ್​ಗೆ ಕಾಲಿಡಲ್ಲ ಎಂದಿದ್ದೇ ಮುಳುವಾಯ್ತಾ? ಯಾವ ದೇಶದಲ್ಲಿ ಟೂರ್ನಿ ನಡೆಯುತ್ತೆ? ಈ ಬಗೆಗಿನ ಅಚ್ಚರಿಯ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಐಶ್‌ ಗೆ ಬಚ್ಚನ್‌ ಫ್ಯಾಮಿಲಿ ದೂರ ದೂರ..  – ನಟಿಯೊಂದಿಗಿನ ಸಲುಗೆಯೇ ಮುಳುವಾಯ್ತಾ?

ಪಾಕಿಸ್ತಾನದಲ್ಲಿ ಒಂದಿಲ್ಲೊಂದು ದಾಳಿಗಳು ನಡೆಯುತ್ತಲೇ ಇರುತ್ತೆ. ಅಲ್ಲಿನ ಜನರೇ ಸೇಫ್ ಇಲ್ಲ. ಅಂಥಾದ್ರಲ್ಲಿ ಹೊರದೇಶದವ್ರಿಗೆ ಹೇಗೆ ತಾನೇ ರಕ್ಷಣೆ ಕೊಡ್ತಾರೆ. ಅದ್ರಲ್ಲೂ ಕ್ರೀಡಾಪಟುಗಳಿಗೆ ಭದ್ರತೆ ಅನ್ನೋದು ಕನಸಿನ ಮಾತೇ. ಯಾಕಂದ್ರೆ ಶ್ರೀಲಂಕಾ ಆಟಗಾರರ ಮೇಲಿನ ದಾಳಿಯನ್ನ ಮರೆಯೋಕೆ ಯಾರಿಂದಲೂ ಸಾಧ್ಯವಿಲ್ಲ. 1996ರಿಂದ ಪಾಕಿಸ್ತಾನ ಒಮ್ಮೆಯೂ ಐಸಿಸಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿಲ್ಲ. 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ದಾಳಿಯ ನಂತರ ಆತಿಥ್ಯ ವಹಿಸುವ ಅವರ ಕನಸು ನಾಶವಾಗಿತ್ತು. ಅದ್ರಲ್ಲೂ ಶ್ರೀಲಂಕಾ ವಿರುದ್ಧವೇ 10 ವರ್ಷಗಳ ನಂತರ ಪಾಕಿಸ್ತಾನ ತಂಡ ತನ್ನ ಮೊದಲ ತವರಿನ ಸರಣಿಯನ್ನು ಆಡಿತು. ಇದೀಗ ಸಾರ್ವಕಾಲಿಕ ಹೆಚ್ಚಿನ ಭದ್ರತಾ ಕಾಳಜಿಯೊಂದಿಗೆ ಚಾಂಪಿಯನ್ಸ್ ಟ್ರೋಫಿ 2025ರ ಆತಿಥ್ಯದ ಹಕ್ಕುಗಳನ್ನು ಪಡೆಯುವಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದೆ. ಆದ್ರೀಗ ಭಾರತದ ದೃಢ ನಿರ್ಧಾರದಿಂದ ಈ ಕನಸೂ ಕೈ ತಪ್ಪಿ ಹೋಗೋ ಆತಂಕ ಶುರುವಾಗಿದೆ.

ಪಾಕಿಸ್ತಾನಕ್ಕೆ ಬಿಗ್ ಶಾಕ್!

2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನ ಪಾಕಿಸ್ತಾನದಲ್ಲಿ ನಡೆಸೋಕೆ ಐಸಿಸಿ ಅನುಮತಿಯನ್ನ ನೀಡಿದೆ. ಅದ್ರಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶೆಡ್ಯೂಲ್ ಕೂಡ ಫಿಕ್ಸ್ ಮಾಡಿದೆ. ಫೆಬ್ರವರಿ 19 ರಂದು ಉದ್ಘಾಟನಾ ಪಂದ್ಯವನ್ನು ಕರಾಚಿಯಲ್ಲಿ ಆಯೋಜಿಸಲಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯಲಿದೆ. ಒಟ್ಟಾರೆ 8 ತಂಡಗಳು ಟೂರ್ನಿಯಲ್ಲಿ ಭಾಗವಹಿಸ್ತಾ ಇದ್ದು ಮಾರ್ಚ್ 1ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ. ಭಾರತದ ಎಲ್ಲಾ ಪಂದ್ಯಗಳನ್ನ ಲಾಹೋರ್​ನಲ್ಲೇ ನಡೆಸೋದಾಗಿ ಪಿಸಿಬಿ ಹೇಳಿದೆ. ಬಟ್ ಪಾಕಿಸ್ತಾನಕ್ಕೆ ಭೇಟಿ ನೀಡಲು ಭಾರತ ಸರ್ಕಾರ ಈವರೆಗೂ ಬಿಸಿಸಿಐಗೆ ಒಪ್ಪಿಗೆ ನೀಡಿಲ್ಲ. ಟೀಂ ಇಂಡಿಯಾ ಆಟಗಾರರ ರಕ್ಷಣಾ ದೃಷ್ಟಿಯಿಂದ ಒಪ್ಪಿಗೆ ನೀಡೋ ಸಾಧ್ಯತೆಯೂ ಇಲ್ಲ. ಹೀಗಾಗಿ ಬಿಸಿಸಿಐ ಸರ್ಕಾರದ ಒಪ್ಪಿಗೆ ಇಲ್ಲದೆ ಪಾಕ್​ಗೆ ಕಾಲಿಡಲ್ಲ ಅಂತಾ ಸ್ಪಷ್ಟವಾಗಿ ಹೇಳಿದೆ. ಭಾರತದ ಇದೇ ದಿಟ್ಟ ನಿರ್ಧಾರದಿಂದ ಈಗ ಟೂರ್ನಿಯೇ ಶಿಫ್ಟ್ ಆಗುತ್ತೆ ಎಂಬ ಸುದ್ದಿ ಹರಿದಾಡ್ತಿದೆ. ಭದ್ರತಾ ಕಾರಣದಿಂದ ಪಾಕಿಸ್ತಾನಕ್ಕೆ ಬಿಸಿಸಿಐ ಪ್ರವಾಸ ಕೈಗೊಳ್ಳದೇ ಇದ್ರೆ ದುಬೈ ಅಥವಾ ಶ್ರೀಲಂಕಾಕ್ಕೆ ಟೂರ್ನಿ ಶಿಫ್ಟ್ ಆಗಲಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕೂಡ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಕ್ಕೆ ಪ್ರವಾಸ ಮಾಡದಿದ್ರೆ ಟೂರ್ನಿ ಶಿಫ್ಟ್ ಆಗೋ ಸಾಧ್ಯತೆ ಇದೆ ಎಂದಿದೆ. ಇದೇ ವಿಚಾರವಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳೂ ಕೂಡ ಭಾರತದ ನಿರ್ಧಾರದ ಪರ ಇವೆ. ಐಸಿಸಿ ವಾರ್ಷಿಕ ಸಮ್ಮೇಳನ ಸಭೆಯಲ್ಲೂ ಭಾರತದ ಪರ ನಿಲ್ಲೋದಾಗಿ ಹೇಳಿವೆ. ಹೀಗಾಗಿ ಭಾರತ ಪಾಕಿಸ್ತಾನಕ್ಕೆ ಕಾಲಿಡದೇ ಇದ್ರೆ ಇಡೀ ಟೂರ್ನಿಯೇ ಶಿಫ್ಟ್ ಆಗೋ ಆತಂಕ ಈಗ ಪಾಕಿಸ್ತಾನದ ಟೆನ್ಷನ್​ಗೆ ಕಾರಣವಾಗಿದೆ.

ಹಾಗೇನಾದ್ರೂ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಕಿಸ್ತಾನದಿಂದ ಕಂಪ್ಲೀಟ್ ಆಗಿ ಶಿಫ್ಟ್ ಆದ್ರೆ ಅದಕ್ಕೆ ಕಾರಣವೇ ಅವ್ರ ಹಠಮಾರಿ ಧೋರಣೆ. 2025ರ ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್​ ಪಂದ್ಯಾವಳಿಯ ಎಲ್ಲ ಪಂದ್ಯಗಳನ್ನು ತನ್ನ ದೇಶದಲ್ಲಿಯೇ ಆಯೋಜಿಸೋದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಠಕ್ಕೆ ಬಿದ್ದಿದೆ. ಅಲ್ದೇ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಪ್ರಸ್ತಾವನೆಗಳನ್ನೂ ಒಪ್ಪಿಕೊಂಡಿಲ್ಲ. ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಬರಲು ಭಾರತ ತಂಡ ಒಪ್ಪದಿದ್ದರೆ, 2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಕೂಡ ಹಾಕಿದೆ. ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತದ ಪಂದ್ಯಗಳನ್ನ ತಟಸ್ಥ ಸ್ಥಳದಲ್ಲಿ ಆಡಿಸೋಕೆ ಒಪ್ಪಿಕೊಂಡಿದ್ರೆ ಟೂರ್ನಿ ಶಿಫ್ಟ್ ಆಗೋದನ್ನ ತಪ್ಪಿಸಬಹುದು. ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗದಿದ್ದರೆ ಶ್ರೀಲಂಕಾದಲ್ಲಿ ಭಾರತದ ಎಲ್ಲಾ ಪಂದ್ಯಗಳನ್ನ ನಡೆಸೋಕೆ ಅವಕಾಶ ಇದೆ. ಹೀಗಾಗಿ ಪಾಕಿಸ್ತಾನ ಇನ್ನಾದ್ರೂ ತನ್ನ ಮೊಂಡಾಟ ಬಿಟ್ಟು ಟೀಂ ಇಂಡಿಯಾದ ನಿರ್ಧಾರವನ್ನ ಒಪ್ಪಿಕೊಳ್ಳುತ್ತಾ? ಇಲ್ಲ ಮತ್ತದೇ ರಾಗ ಮತ್ತದೇ ಹಾಡು ಎಂಬಂತೆ ಟೂರ್ನಿ ಆಯೋಜನೆ ಮಾಡೋ ಅವಕಾಶವನ್ನೂ ಕಳೆದುಕೊಳ್ಳುತ್ತಾ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *