PAKಗೆ ಚೋಕ್ ಕೊಟ್ಟ ICC – ಚಾಂಪಿಯನ್ಸ್ ಟ್ರೋಫಿಗಿಲ್ಲ ಅನುಮತಿ!
ಟೂರ್ನಿ ಶಿಫ್ಟ್.. ಪಾಕ್​ ಗೆ ಮುಖಭಂಗ?

PAKಗೆ ಚೋಕ್ ಕೊಟ್ಟ ICC – ಚಾಂಪಿಯನ್ಸ್ ಟ್ರೋಫಿಗಿಲ್ಲ ಅನುಮತಿ!ಟೂರ್ನಿ ಶಿಫ್ಟ್.. ಪಾಕ್​ ಗೆ ಮುಖಭಂಗ?

ಸಾಲು ಸಾಲು ಸೋಲಿನ ಸುಳಿಯಲ್ಲಿ ಸಿಲುಕಿರೋ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ 2025ರ ಚಾಂಪಿಯನ್ಸ್ ಟ್ರೋಫಿ ಹೊಸ ಭರವಸೆ ಮೂಡಿಸಿದೆ. ದಶಕಗಳ ಬಳಿಕ ಐಸಿಸಿ ಟೂರ್ನಿ ಆಯೋಜನೆಗೆ ಪಿಸಿಬಿ ಸಿದ್ಧತೆಗಳನ್ನ ಮಾಡಿಕೊಳ್ತಿದೆ. ಅದ್ರಲ್ಲೂ ಟೀಂ ಇಂಡಿಯಾ ಪಾಕಿಸ್ತಾನಕ್ಕೇ ಬಂದು ಕ್ರಿಕೆಟ್ ಆಡ್ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಇನ್ನು ಪಾಕ್​ನ ಮಾಜಿ ಕ್ರಿಕೆಟಿಗರಂತೂ ಎಲ್ಲಾ ರಾಷ್ಟ್ರಗಳ ಕ್ರಿಕೆಟರ್ಸ್ ಪಾಕ್​ಗೆ ಬರ್ತಾರೆ. ಭಾರತದ ಆಟಗಾರರು ಮಾತ್ರ ಯಾಕೆ ಬರಲ್ಲ. ಕ್ರೀಡೆಯ ನಿಯಮಗಳನ್ನ ಪಾಲಿಸ್ಬೇಕು. ಭಾರತೀಯ ತಂಡ ಪಾಕಿಸ್ತಾನಕ್ಕೇ ಬಂದು ಆಡ್ಬೇಕು ಅಂತಾ ತಮ್ಮದೇ ದಾಟಿಯಲ್ಲಿ ಮಾತಾಡ್ತಿದ್ದಾರೆ. ಬಟ್ ರಿಯಾಲಿಟಿ ಬೇರೆನೇ ಇದೆ. ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಸೋಕೆ ಐಸಿಸಿ ಈವರೆಗೂ ಗ್ರೀನ್ ಸಿಗ್ನಲ್ ನೀಡಿಯೇ ಇಲ್ಲ. ಹಾಗಾದ್ರೆ ಪಾಕ್​ನಿಂದ ಟೂರ್ನಿ ಎತ್ತಂಗಡಿ ಆಯ್ತಾ? ಪಿಸಿಬಿಗೆ ತಲೆ ಬಿಸಿ ಶುರುವಾಗಿರೋದೇಕೆ? ಐಸಿಸಿ ನೂತನ ಬಾಸ್ ಆಗಿ ಆಯ್ಕೆ ಆಗಿರುವ ಜೈ ಶಾ ನಿರ್ಧಾರ ಏನು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಗ್ ಬಾಸ್ ಗೆ ಹೊಸ್ ಆಂಕರ್? – ರಮೇಶ್‌ ಅರವಿಂದ್‌ ಮಾತಿನ ಅರ್ಥವೇನು?

ಟಿ-20 ವಿಶ್ವಕಪ್ ಬಳಿಕ ಕ್ರಿಕೆಟ್ ಲೋಕದ ಕಣ್ಣು 2025ರ ಚಾಂಪಿಯನ್ಸ್ ಟ್ರೋಫಿ ಮೇಲೆ ನೆಟ್ಟಿದೆ. ಟೂರ್ನಿ ಆಯೋಜನೆಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ದು, ಈಗಾಗ್ಲೇ ಕರಡು ವೇಳಾಪಟ್ಟಿ ಕೂಡ ರಿಲೀಸ್ ಮಾಡಿದೆ. ಈ ಐಸಿಸಿ ಟೂರ್ನಿಯ ಮೊದಲ ಪಂದ್ಯವನ್ನ 2025ರ ಫೆಬ್ರವರಿ 19 ರಂದು ನಡೆಸಲು ಡೇಟ್ ಫಿಕ್ಸ್ ಆಗಿದೆ. ಆದ್ರೆ ಟೂರ್ನಿಗಾಗಿ ಪಾಕಿಸ್ತಾನಕ್ಕೆ ಭಾರತ ಪ್ರಯಾಣ ಬೆಳೆಸುತ್ತೋ ಇಲ್ಲವೋ ಅನ್ನೋದು ಈವರೆಗೂ ಕನ್ಫರ್ಮ್ ಆಗಿಲ್ಲ.  ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ವರ್ಷಗಳಿಂದ ಉತ್ತಮ ಸಂಬಂಧವಿಲ್ಲ. ಪಾಕಿಸ್ತಾನಕ್ಕೆ ಹೋಗಲು ಭಾರತ ಸರ್ಕಾರ ಅನುಮತಿ ನೀಡಿದ್ರೆ ಮಾತ್ರ ಟೀಮ್ ಇಂಡಿಯಾ ಹೋಗಬಹುದು. ಇದನ್ನ ಸ್ವತಃ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ಇದೆಲ್ಲದ್ರ ನಡುವೆ ಐಸಿಸಿ ನಿಯೋಗ ಪಾಕಿಸ್ತಾನಕ್ಕೆ ಭೇಟಿ ನೀಡಲು ಸಜ್ಜಾಗಿದೆ.

ಸಿದ್ಧತೆಗಳನ್ನ ಪರಿಶೀಲಿಸಲು ಪಾಕಿಸ್ತಾನಕ್ಕೆ ಐಸಿಸಿ ನಿಯೋಗ!

ಚಾಂಪಿಯನ್ಸ್ ಟ್ರೋಫಿ 2025ರ ಸಿದ್ಧತೆಗಳನ್ನು ಪರಿಶೀಲಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ತಿಂಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ. ಕ್ರೀಡಾಂಗಣಗಳ ಸ್ಥಿತಿಗತಿ, ಮೈದಾನದಲ್ಲಿನ ವ್ಯವಸ್ಥೆ, ಪ್ರೇಕ್ಷಕರ ಗ್ಯಾಲರಿ ಹೀಗೆ ಎಲ್ಲವೂ ಹೇಗಿದೆ ಅನ್ನೋದನ್ನ ಪರಿಶೀಲಿಸಲಿದ್ದಾರೆ. ಆ ಬಳಿಕವಷ್ಟೇ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಲು ಪಾಕಿಸ್ತಾನ ಗ್ರೀನ್ ಸಿಗ್ನಲ್ ಸಿಗಲಿದೆ. ಈ ನಿಯೋಗವು ಪಾಕಿಸ್ತಾನದಲ್ಲಿ ಟೂರ್ನಿಯ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಐಸಿಸಿಗೆ ವರದಿ ಸಲ್ಲಿಸಲಿದ್ದು, ಐಸಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಬಿಸಿಸಿಯ ಕಾರ್ಯದರ್ಶಿ ಜಯ್ ಶಾ ಅವರು ಡಿಸೆಂಬರ್ 1 ರಂದು ಐಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು ಐಸಿಸಿ ನಿಯೋಗ ಪಾಕಿಸ್ತಾನಕ್ಕೆ ಹೋಗಲಿದೆ. ಐಸಿಸಿ ನೀಯೊಗ ಈಗಾಗಲೇ ಪಿಚ್ ಸಲಹೆಗಾರರು, ಭದ್ರತಾ ಮುಖ್ಯಸ್ಥರು ಮತ್ತು ಟೂರ್ನಿಯ ವ್ಯವಸ್ಥೆಗಳನ್ನು ಪರಿಶೀಲಿಸಲು ಪ್ರತ್ಯೇಕವಾಗಿ ಮೂರು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದೆ.

ಪಿಸಿಬಿ ಅಧಿಕಾರಿಗಳ ಜೊತೆ ಐಸಿಸಿ ನಿಯೋಗ ಚರ್ಚೆ!

ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿರೋ ಪಾಕಿಸ್ತಾನ ಪಂದ್ಯಗಳಿಗಾಗಿ ಮೂರು ಕ್ರೀಡಾಂಗಣಗಳನ್ನ ಫೈನಲ್ ಮಾಡಿದೆ. ಹೀಗಾಗಿ ಪಂದ್ಯ ನಡೆಯಲಿರುವ ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯ ಪ್ರಮುಖ ಸ್ಥಳಗಳಿಗೆ ಐಸಿಸಿ ನಿಯೋಗವು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ತಿಳಿಯಲಿದೆ. ಪಂದ್ಯಗಳ ವೇಳಾಪಟ್ಟಿ, ಅಭ್ಯಾಸ ಪಂದ್ಯಗಳು, ಅಭ್ಯಾಸ ಸ್ಥಳಗಳು ಮತ್ತು ಟಿಕೆಟ್‌ಗಳಂತಹ ಅಗತ್ಯ ವಿವರಗಳ ಬಗ್ಗೆ ಪಿಸಿಬಿ ಅಧಿಕಾರಿಗಳ ಜೊತೆ ಐಸಿಸಿ ನಿಯೋಗ ಚರ್ಚಿಸಲಿದೆ. ಸದಗ್ಯಕ್ಕೆ ಪಾಕಿಸ್ತಾನದಲ್ಲಿ ರಾಜಕೀಯ ಪರಿಸ್ಥಿತಿ ಚೆನ್ನಾಗಿಲ್ಲ. ಅಲ್ಲಿನ ಅತಿದೊಡ್ಡ ರಾಜಕೀಯ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಈಗಿನ ಸರ್ಕಾರದ ಆಡಳಿತ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಯಾಕಂದ್ರೆ ಆ ಪಕ್ಷದ ನಾಯಕ ಹಾಗು ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ಅವರು ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ. ಹೀಗಾಗಿ ಟೂರ್ನಿ ಆಯೋಜನೆ ದೃಷ್ಟಿಯಿಂದ ಎಲ್ಲಾ ರಾಷ್ಟ್ರಗಳ ಆಟಗಾರರಿಗೆ ಭದ್ರತೆಯ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ.

ಪರಿಶೀಲನೆ ಬಳಿಕವಷ್ಟೇ ಪಾಕಿಸ್ತಾನಕ್ಕೆ ಐಸಿಸಿ ಗ್ರೀನ್ ಸಿಗ್ನಲ್!

ಮೇಲ್ನೋಟಕ್ಕೆ ಈಗ ಪಾಕಿಸ್ತಾನದಲ್ಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯೋದು ಅಂತಾ ಫಿಕ್ಸ್ ಆಗಿದೆ. ಬಟ್ ರಿಯಾಲಿಟಿ ಏನಂದ್ರೆ ಪಾಕಿಸ್ತಾನದ ಆತಿಥ್ಯಕ್ಕೆ ಐಸಿಸಿ ಬೋರ್ಡ್ ಈವರೆಗೂ ಅಂತಿಮ ಮುದ್ರೆ ಒತ್ತಿಲ್ಲ. ಇದೇ ಕಾರಣಕ್ಕೆ ಐಸಿಸಿಯ ನಿಯೋಗ ಪಾಕ್​​ಗೆ ಭೇಟಿ ನೀಡ್ತಿದೆ. ಪಾಕಿಸ್ತಾನದಲ್ಲಿ ಭದ್ರತೆಯ ದೃಷ್ಟಿಯಿಂದ ಉತ್ತಮವಾಗಿದೆಯೇ? ಅಥವಾ ಇಲ್ಲವೇ? ಎಂಬುದರ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಯಾಕಂದ್ರೆ ಪಾಕಿಸ್ತಾನದಲ್ಲಿ ಆಟಗಾರರ ಸುರಕ್ಷತೆಯೇ ಒಂದು ದೊಡ್ಡ ಸವಾಲು. ಬಾಂಗ್ಲಾದೇಶ ರೀತಿಯಲ್ಲೇ ಪಾಕಿಸ್ತಾನದಲ್ಲಿ ಭದ್ರತೆಗೆ ಅಡ್ಡಿಯಾದರೆ, ಮಹಿಳಾ ಟಿ20 ವಿಶ್ವಕಪ್‌ನಂತೆ ಚಾಂಪಿಯನ್ಸ್ ಟ್ರೋಫಿ ಕೂಡ ಸ್ಥಳಾಂತರ ಮಾಡುವ ತಕ್ಷಣದ ನಿರ್ಧಾರವನ್ನು ಐಸಿಸಿ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಗೆ ಅನುಮೋದನೆ ಸಿಗಲ್ವಾ?

ಹೌದು. ಇದೇ ತಿಂಗಳು ಪಾಕ್​ಗೆ ಭೇಟಿ ನೀಡಲಿರುವ ಐಸಿಸಿ ನಿಯೋಗವು ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ತಾತ್ಕಾಲಿಕ ವೇಳಾಪಟ್ಟಿಯ ಬಗ್ಗೆ ಚರ್ಚಿಸಲಿದೆ. ಸೋ ಅಲ್ಲಿಗೆ ಪಿಸಿಬಿ ಈಗಾಗ್ಲೇ ಕಳುಹಿಸಿರುವ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಕೂಡ ಅನುಮೋದಿಸಿಲ್ಲ ಅನ್ನೋದು ಕನ್ಫರ್ಮ್. ಇದೆಲ್ಲದ್ರ ನಡುವೆ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್​ನ​ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗಿದ್ದಾರೆ. ಹೀಗಾಗಿ ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಗೆ ಅನುಮೋದನೆ ಸಿಗುವುದು ಸಹ ಅನುಮಾನ ಎನ್ನಲಾಗುತ್ತಿದೆ. ಸದ್ಯಕ್ಕಂತೂ ಚಾಂಪಿಯನ್ಸ್ ಟ್ರೋಫಿಗೆ 8 ತಂಡಗಳು ಅರ್ಹತೆ ಪಡೆದಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಟೂರ್ನಿಯಲ್ಲಿ ಭಾಗವಹಿಸಲು ಆರ್ಹತೆ ಪಡೆದಿದ್ದು, ಶ್ರೀಲಂಕಾ ತಂಡವು ಈ ಪ್ರತಿಷ್ಠಿತ ಟೂರ್ನಿಯಿಂದ ಹೊರಗುಳಿದೆ. ಪಾಕಿಸ್ತಾನ ರೆಡಿ ಮಾಡಿರೋ ಕರುಡು ವೇಳಾಪಟ್ಟಿ ಪ್ರಕಾರ, ಫೆಬ್ರವರಿ 19 ರಿಂದ ಟೂರ್ನಿ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಇನ್ನು ಭಾರತ ತಂಡವು ಫೆಬ್ರವರಿ 20 ರಿಂದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಗ್ರೂಪ್​-ಎ ನಲ್ಲಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಎರಡನೇ ಮ್ಯಾಚ್​ನಲ್ಲಿ ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ವಿರುದ್ಧ ಸೆಣಸಲಿದೆ. ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳಿಗೆ ಲಾಹೋರ್​ನ ಗಡ್ಡಾಫಿ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಭಾರತ ತಂಡವು ತನ್ನೆಲ್ಲಾ ಪಂದ್ಯಗಳನ್ನು ಲಾಹೋರ್​ನಲ್ಲಿ ಆಡಲಿದೆ. ಬಟ್ ಭಾರತ ಪಾಕಿಸ್ತಾನಕ್ಕೆ ಹೋಗುತ್ತಾ ಇಲ್ವಾ ಅನ್ನೋ ಬಗ್ಗೆ ಇನ್ನೂ ಕ್ಲಾರಿಟಿ ಇಲ್ಲ. ಅಷ್ಟೇ ಯಾಕೆ ಪಾಕಿಸ್ತಾನದಲ್ಲಿ ಟೂರ್ನಿ ನಡೆಯುತ್ತೋ ಇಲ್ವೋ ಅನ್ನೋದನ್ನೂ ಹೇಳೋಕಾಗಲ್ಲ. ಐಸಿಸಿ ನಿಯೋಗದ ಭೇಟಿಗಾಗಿ ಕಾಯ್ತಿರೋ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೂರ್ನಿ ಕೈ ತಪ್ಪಿಹೋಗದಿರಲಿ ಅಂತಾ ಬೇಡಿಕೊಳ್ತಿದ್ದಾರೆ.

Shwetha M