ಪಾಕಿಸ್ತಾನಕ್ಕೆ ಹೋಗುತ್ತಾ ಟೀಂ ಇಂಡಿಯಾ? – ಚಾಂಪಿಯನ್ಸ್ ಟ್ರೋಫಿಗೆ ಭಾರತದ ಮುಂದಿದೆ ಸವಾಲು!

ಪಾಕಿಸ್ತಾನಕ್ಕೆ ಹೋಗುತ್ತಾ ಟೀಂ ಇಂಡಿಯಾ? – ಚಾಂಪಿಯನ್ಸ್ ಟ್ರೋಫಿಗೆ ಭಾರತದ ಮುಂದಿದೆ ಸವಾಲು!

ಶ್ರೀಲಂಕಾ ವಿರುದ್ಧದ ಸರಣಿ ಬಳಿಕ ಟೀಂ ಇಂಡಿಯಾ ಆಟಗಾರರು ಕಂಪ್ಲೀಟ್ ರೆಸ್ಟ್ ಮೂಡ್ನಲ್ಲಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಆಟಗಾರರು ತಯಾರಿ ನಡೆಸಬೇಕಿದೆ. ಬಾಂಗ್ಲಾ ಸರಣಿ ಬಳಿಕ ಟೀಮ್ ಇಂಡಿಯಾಗೆ ಸಾಲು ಸಾಲು ಸರಣಿಗಳು ಎದುರಾಗುತ್ತವೆ. ಬಟ್ ಇದೆಲ್ಲದ್ರ ನಡುವೆ ತುಂಬಾನೇ ಚರ್ಚೆಯಾಗ್ತಿರೋ ವಿಚಾರ ಅಂದ್ರೆ ಚಾಂಪಿಯನ್ಸ್ ಟ್ರೋಫಿ. 2025ರಲ್ಲಿ ಪಾಕಿಸ್ತಾನದಲ್ಲಿ ಆಯೋಜನೆಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿ ಆಡಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗುತ್ತಾ ಅನ್ನೋ ಚರ್ಚೆ ಜೋರಾಗಿದೆ.  ಆದ್ರೆ ಈ ವಿಚಾರವಾಗಿ ಇನ್ನೂ ಕೂಡ ಯಾವುದೇ ಅಂತಿಮ ನಿರ್ಧಾರ ಹೊರ ಬಿದ್ದಿಲ್ಲ. ಇದೇ ಈಗ ಗೊಂದಲಕ್ಕೆ ಕಾರಣವಾಗಿದೆ. ಮತ್ತೊಂದ್ಕಡೆ ಭದ್ರತೆ ವಿಚಾರ ಕೂಡ ಸಾಕಷ್ಟು ಸದ್ದು ಮಾಡ್ತಿದ್ದು, ಪಾಕಿಸ್ತಾನ ಆಟಗಾರರೇ ಈ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ಗೆ ಭದ್ರತೆ ಭಯ ಕಾಡ್ತಿದ್ಯಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಒಂದು ಸಾವಿರ ಅಕೌಂಟ್‌ ಬ್ಲಾಕ್‌ ಮಾಡಿದ ಜ್ಯೋತಿ ರೈ – ಖಡಕ್‌ ನಿರ್ಧಾರ ಕೈಗೊಂಡಿದ್ದೇಕೆ ನಟಿ?

ಪಾಕಿಸ್ತಾನದಲ್ಲಿ ನಡೆಯುತ್ತಿರುವ ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭಾಗವಹಿಸುತ್ತದೆಯೇ ಅನ್ನೋದಕ್ಕೆ ಈವರೆಗೂ ಕ್ಲಾರಿಟಿ ಸಿಕ್ಕಿಲ್ಲ.  ಉಭಯ ರಾಷ್ಟ್ರಗಳ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಇರೋದ್ರಿಂದ ಭಾರತವು 2008 ರಿಂದ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ಕ್ರಿಕೆಟ್ ಅಭಿಮಾನಿಗಳು ಹೆಚ್ಚಿರುವ ಈ ಎರಡೂ ದೇಶಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಕಣಕ್ಕಿಳಿಯುತ್ತವೆ. ಕಳೆದ ಬಾರಿ ಪಾಕಿಸ್ತಾನ ಏಷ್ಯಾ ಕಪ್ ಆಯೋಜಿಸಿದ್ರೂ ಕೂಡ ಅಂತಿಮವಾಗಿ ಭಾರತಕ್ಕೆ ಶ್ರೀಲಂಕಾದಲ್ಲಿ ತಮ್ಮ ಎಲ್ಲಾ ಪಂದ್ಯಗಳನ್ನು ಆಡಲು ಅವಕಾಶ ನೀಡಲಾಗಿತ್ತು. ಪಾಕಿಸ್ತಾನ ಪ್ರವಾಸ ಮಾಡಲು ತಮ್ಮ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ ಎಂದು ಬಿಸಿಸಿಐ ಹೇಳಿತ್ತು. ಆದ್ರೆ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನಕ್ಕೇ ಬರುವಂತೆ ಪಟ್ಟು ಹಿಡಿದಿರೋ ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಈಗಾಗ್ಲೇ ಲಾಹೋರ್ನ ಗಡಾಫಿ ಕ್ರೀಡಾಂಗಣವನ್ನು ಸಜ್ಜುಗೊಳಿಸುತ್ತಿದೆ. ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗಲಿವೆ.  ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಕಾದಾಟ ನಡೆಸಲಿವೆ.

ಪಾಕಿಸ್ತಾನಕ್ಕೆ ಹೋಗುತ್ತಾ ಟೀಂ ಇಂಡಿಯಾ?

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭಾಗವಹಿಸೋದು ದೃಢಪಟ್ಟಿದ್ರೂ ಕೂಡ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡುವ ಬಗ್ಗೆ ಇನ್ನು ಯಾವುದೇ ನಿರ್ಣಯ ಆಗಿಲ್ಲ. ಬಿಸಿಸಿಐ ಸರ್ಕಾರದ ಸಲಹೆಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದೆ. ಒಂದು ವೇಳೆ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ನಿರಾಕರಿಸಿದರೆ, ಏಷ್ಯಾಕಪ್ನಂತೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಕೇಳಬಹುದು. ಆದರೆ ಈ ಬಾರಿ ಪಾಕಿಸ್ತಾನ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಒಪ್ಪಿಕೊಳ್ತಿಲ್ಲ. ಈಗಾಗ್ಲೇ ಐಸಿಸಿ ಬಳಿಯೂ ಕೂಡ ಹೇಗಾದ್ರೂ ಮಾಡಿ ಭಾರತ ತಂಡವನ್ನ ಪಾಕಿಸ್ತಾನಕ್ಕೆ ಕರೆತರುವಂತೆ ದುಂಬಾಲು ಬಿದ್ದಿದೆ.

ಭಾರತಕ್ಕೆ ಭದ್ರತೆಯ ಅಭಯ ನೀಡಿ ಎಂದ ಪಾಕ್ ಆಟಗಾರ!

ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಕ್ಕೆ ತೆರಳದೇ ಇರಲು ಮೇನ್ ರೀಸನ್ ಅಂದ್ರೆ ಭದ್ರತೆ. ಭದ್ರತಾ ಕಾರಣ ನೀಡಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಸಹ ಹಿಂದೇಟು ಹಾಕುತ್ತಿದೆ.  ಇದೇ ಕಾರಣಕ್ಕೆ  ಭಾರತ ಕ್ರಿಕೆಟ್ ನಿಂಯತ್ರಣ ಮಂಡಳಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಈ ಬಗ್ಗೆ ಮಾತನಾಡಿರುವ ಪಾಕ್ ಮಾಜಿ ಆಟಗಾರ ಬಸಿತ್ ಅಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಒಂದು ಸಲಹೆ ನೀಡಿದ್ದಾರೆ. ಪಿಸಿಬಿ ಆಟಗಾರರ ಸುರಕ್ಷತೆಯ ಭರವಸೆ ನೀಡಲಿ ಎಂದಿದ್ದಾರೆ. ಪಿಸಿಬಿ ಬೇರೆ ತಂಡಗಳ ಆಟಗಾರರಿಗೆ ಏನು ಆಗುವುದಿಲ್ಲ. ಸುರಕ್ಷತೆಯಲ್ಲಿ ಯಾವುದೇ ಲೋಪ ಆಗುವುದಿಲ್ಲ ಎಂದು ಗ್ಯಾರಂಟಿ ನೀಡಬೇಕು. ಪಾಕಿಸ್ತಾನ ಪ್ರವಾಸ ಬೆಳೆಸಲು ಈ ಹಿಂದೆ ಹಲವು ತಂಡಗಳು ಹಿಂದೇಟು ಹಾಕುತ್ತಿದ್ದವು. ಆದರೆ ಈಗ ದೊಡ್ಡ ತಂಡಗಳು ಸಹ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿವೆ. ಇನ್ನೇನು ಕೆಲವೇ ದಿನಗಳಲ್ಲಿ ಬಾಂಗ್ಲಾದೇಶದ ವಿರುದ್ಧವೂ ಪಾಕ್ನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ. ಸುರಕ್ಷತೆ ಆದ್ಯ ಕರ್ತವ್ಯ ಎಂದು ಬಸಿತ್ ಅಲಿ ಹೇಳಿಕೆ ನೀಡಿದ್ದಾರೆ. ಹಾಗೇ ಪಾಕಿಸ್ತಾನಕ್ಕೆ ಮುಂದಿನ ದಿನಗಳಲ್ಲಿ ಬಾಂಗ್ಲಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ನಂತಹ ತಂಡಗಳು ಬರುತ್ತಿವೆ. ಈ ವೇಳೆ ಸುರಕ್ಷತೆಯ ಬಗ್ಗೆ ನಾವು ಗಮನ ಹರಿಸಬೇಕಿದೆ. ದೇವರು ಈ ಸರಣಿಯ ವೇಳೆ ಯಾವುದೇ ದುರ್ಘಟನೆ ಆಗದಂತೆ ನೋಡಿಕೊಳ್ಳಲಿ. ಒಂದು ವೇಳೆ ಯಾವದಾರರು ಸುರಕ್ಷತೆಯ ಲೋಪ ಕಂಡು ಬಂದಲ್ಲಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಕೈ ತಪ್ಪಲಿದೆ ಎಂದಿದ್ದಾರೆ. ಅಸಲಿಗೆ 1996ರ ಏಕದಿನ ವಿಶ್ವಕಪ್ ಬಳಿಕ ಪಾಕಿಸ್ತಾನದಲ್ಲಿ ನಡೆಯಲಿರುವ ಮೊದಲ ಐಸಿಸಿ ಟೂರ್ನಿ 2025ರ ಚಾಂಪಿಯನ್ಸ್ ಟ್ರೋಫಿ ಆಗಿದೆ. 2009 ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ದಾಳಿ ನಂತರ, ಪಾಕಿಸ್ತಾನವು ಅಂತರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದನ್ನು ನಿಷೇಧಿಸಿತು. ಹಲವು ವರ್ಷಗಳಿಂದ ಪಾಕಿಸ್ತಾನ ತನ್ನ ಪಂದ್ಯಗಳನ್ನು ಯುಎಇಯಲ್ಲಿ ಆಡಬೇಕಿತ್ತು. ಆದ್ರೆ ಈ ಬಾರಿ ಸಂಭ್ರಮದಿಂದ ಟೂರ್ನಿಗೆ ಸಜ್ಜಾಗುತ್ತಿದ್ರೂ ಕೂಡ ಭದ್ರತೆ ಭಯ ಮಾತ್ರ ಕಾಡುತ್ತಲೇ ಇದೆ.

ಐಸಿಸಿ ವಾರ್ಷಿಕ ಸಭೆಯಲ್ಲೂ ಪಾಕ್ ಗೆ ಮುಖಭಂಗ!

ಕಳೆದ ಜುಲೈ ತಿಂಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೆ ಸಂಬಂಧಿಸಿದಂತೆ ಐಸಿಸಿ ಸಭೆ ಆಯೋಜನೆ ಮಾಡಿತ್ತು. ಈ ಸಭೆಯಲ್ಲಿ ತನ್ನ ಪರ ಕೆಲವೊಂದು ಘೋಷಣೆಗಳನ್ನ ಮಾಡಬಹುದು ಅಂತಾ ಪಿಸಿಬಿ ಅಂದುಕೊಂಡಿತ್ತು. ಆದ್ರೆ ಅಲ್ಲೂ ಕೂಡ ಪಾಕ್ಗೆ ಹಿನ್ನಡೆಯಾಗಿತ್ತು. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಬೇಕು ಅನ್ನೋದ್ರ ಬಗ್ಗೆ ಯಾವ ರಾಷ್ಟ್ರವೂ ಧ್ವನಿ ಎತ್ತಲಿಲ್ಲ. ಅಷ್ಟೇ ಯಾಕೆ ಐಸಿಸಿಯೂ ಈ ಬಗ್ಗೆ ತುಟಿ ಬಿಚ್ಚಲಿಲ್ಲ.  ವಾರ್ಷಿಕ ಸಭೆಯಲ್ಲಿ ಎಲ್ಲಾ ಸದಸ್ಯ ಕ್ರಿಕೆಟ್ ಮಂಡಳಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರೂ ಈ ವಿಚಾರ ಚರ್ಚೆಗೆ ಬಂದಿರಲಿಲ್ಲ. ಇದು ಪಾಕಿಸ್ತಾನದ ನಿದ್ದೆಗೆಡಿಸಿದೆ. ಯಾಕಂದ್ರೆ ಆಟಗಾರರ ಭದ್ರತೆಯ ದೃಷ್ಟಿಯಿಂದ ಬಿಸಿಸಿಐ ಈ ಬಾರಿಯೂ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳದಿದ್ದರೆ, ಐಸಿಸಿ ಪರ್ಯಾಯವಾಗಿ ಮಹತ್ವದ ನಿರ್ಧಾರ ಕೈಗೊಳ್ಳಬಹುದು. ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಸಂಕಷ್ಟ ಎದುರಾಗಬಹುದು. ಯಾಕಂದ್ರೆ ಪಾಕಿಸ್ತಾನ ಮತ್ತು ಭಾರತ 2012 ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡಿಲ್ಲ.

ಚಾಂಪಿಯನ್ಸ್ ಟ್ರೋಫಿಗೆ ಭಾರತದ ಮುಂದಿದೆ ಸವಾಲು!

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡ, 11 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2025ರ ಐಸಿಸಿ ಚಾಂಪಿಯನ್ಸ್ ಗೆಲ್ಲುವ ಟಾರ್ಗೆಟ್ ಇಟ್ಕೊಂಡಿದೆ. ಆದ್ರೆ ಏಕದಿನ ಮಾದರಿಯಲ್ಲಿ ನಡೆಯಲಿರುವ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ಇರೋದು ಕೇವಲ ಮೂರು ಏಕದಿನ ಪಂದ್ಯಗಳು ಮಾತ್ರ. ಅದೂ ಕೂಡ 2025ರಲ್ಲಿ ನಡೆಯಲಿದೆ.. ಈಗಾಗಲೇ ಶ್ರೀಲಂಕಾ ವಿರುದ್ದ ಮೂರು ಪಂದ್ಯಗಳ ಒಡಿಐ ಸರಣಿ ಸೋತಿರುವ ಭಾರತ ತಂಡ, ಇಂಗ್ಲೆಂಡ್ ವಿರುದ್ದ ಮುಂದಿನ ವರ್ಷ ಜನವರಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಮೂರು ಪಂದ್ಯಗಳ ಮೂಲಕ ಟೀಮ್ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗಬೇಕಾಗಿದೆ. ಇದೇ ಕಾರಣಕ್ಕೆ ಮಾಜಿ ಕ್ರಿಕೆಟಿಗ ವಾಸೀಮ್ ಜಾಫರ್ ಕಳವಳ ವ್ಯಕ್ತಪಡಿಸಿದ್ದಾರೆ.  ಐಸಿಸಿ ಶ್ರೀಲಂಕಾ ವಿರುದ್ಧ ಒಡಿಐ ಸರಣಿ ಸೋತರೂ ಪರವಾಗಿಲ್ಲ. ಆದರೆ, ಭಾರತಕ್ಕೆ ಹೆಚ್ಚಿನ ಏಕದಿನ ಪಂದ್ಯಗಳು ಇಲ್ಲದೇ ಇರುವುದು ಚಾಂಪಿಯನ್ಸ್ ಟ್ರೋಫಿಗೆ ಹಿನ್ನಡೆಯನ್ನು ತಂದೊಡ್ಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ನಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗ್ತಿರೋ ಪಾಕ್ಗೆ ತನ್ನದೇ ಆಟಗಾರರು ಬುದ್ಧಿ ಹೇಳ್ತಿದ್ದಾರೆ. ಮೊದ್ಲು ಭದ್ರತೆ ಕೊಡಿ ಅಂತಿದ್ದಾರೆ. ಆದ್ರೆ ತನ್ನೊಳಗೇ ಇರೋ ದುಷ್ಟರನ್ನ ಮಟ್ಟ ಹಾಕೋಕೆ ಆಗದ ಪಾಕ್ ಸರ್ಕಾರ ಅದ್ಯಾವ ಸೀಮೆ ರಕ್ಷಣೆ ಕೊಡುತ್ತೆ.

Shwetha M

Leave a Reply

Your email address will not be published. Required fields are marked *