INDಗೆ ಪಾಕ್ ಪ್ಲೇಯರ್ ಸವಾಲ್ – ಭಾರತ ಇಲ್ಲದೇ ಚಾಂಪಿಯನ್ಸ್ ಟೂರ್ನಿ
ROHIT ಸೇನೆ ಇಲ್ಲದಿದ್ರೆ ಅದೆಷ್ಟು ನಷ್ಟ?

INDಗೆ ಪಾಕ್ ಪ್ಲೇಯರ್ ಸವಾಲ್ – ಭಾರತ ಇಲ್ಲದೇ ಚಾಂಪಿಯನ್ಸ್ ಟೂರ್ನಿROHIT ಸೇನೆ ಇಲ್ಲದಿದ್ರೆ ಅದೆಷ್ಟು ನಷ್ಟ?

ಪಾಕಿಸ್ತಾನದಲ್ಲಿ ಅದ್ಯಾವ ಗಳಿಗೆಯಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆ ಮಾಡಿದ್ರೋ ಏನೋ. ಒಂದಿಲ್ಲೊಂದು ಕನ್ಫ್ಯೂಷನ್ಸ್ ಕ್ರಿಯೇಟ್ ಆಗ್ತಾನೇ ಇದೆ. ಪಾಕ್​ಗೆ ಕಾಲಿಡಲ್ಲ ಅಂತಾ ಬಿಸಿಸಿಐ ಮುಖದ ಮೇಲೆ ಹೊಡ್ದಂಗೆ ಹೇಳಿದ್ರೂ ಕೂಡ ಪಾಕಿಸ್ತಾನ ಮಾತ್ರ ತನ್ನ ಹಠಮಾರಿತನ ಬಿಡ್ತಿಲ್ಲ. ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸೋದನ್ನೂ ಒಪ್ಪಿಕೊಳ್ತಿಲ್ಲ. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರೋ ಪಾಕ್ ಆಟಗಾರರು ತಮ್ಮ ದೌಲತ್ತು ತೋರ್ತಿದ್ದಾರೆ. ಟೀಂ ಇಂಡಿಯಾ ಇಲ್ಲದೆಯೇ ನಾವು ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಸ್ತೇನೆ ಅಂಥಾ ಧಿಮಾಕು ತೋರಿಸ್ತಿದ್ದಾರೆ. ಹಾಗಾದ್ರೆ ಭಾರತ ಇಲ್ಲದೆಯೇ ಟೂರ್ನಿ ನಡೆಸೋಕೆ ಸಾಧ್ಯನಾ? ಪಾಕ್​ನ ಹುಚ್ಚಾಟವನ್ನ ಇತರೆ ರಾಷ್ಟ್ರಗಳು ಒಪ್ಪಿಕೊಳ್ಳುತ್ತವಾ? ಹಾಗೇನಾದ್ರೂ ಭಾರತ ಟೂರ್ನಿ ಆಡದೇ ಹೋದ್ರೆ ಎಷ್ಟೆಲ್ಲಾ ನಷ್ಟ ಆಗುತ್ತೆ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮುಂಬೈಗೆ RO & SKY ಗುಡ್ ಬೈ – ₹30 ಕೋಟಿ ಆಫರ್ ಕೊಟ್ಟ ಶಾರುಖ್?

2025ರ ಫೆಬ್ರವರಿ & ಮಾರ್ಚ್​ನಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೆ ಐಸಿಸಿ ಒಪ್ಪಿಗೆ ನೀಡಿದೆ. ಟೂರ್ನಿ ಫೆಬ್ರವರಿ 19ರಂದು ಪ್ರಾರಂಭವಾಗಲಿದ್ದು, ಫೈನಲ್ ಮಾರ್ಚ್ 9ರಂದು ಲಾಹೋರ್​​​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸಲು ಪಾಕ್ ಕ್ರಿಕೆಟ್ ಮಂಡಳಿ ಸಿದ್ಧತೆ ನಡೆಸ್ತಿದೆ. ಆದ್ರೆ ಮುಂದಿನ ವರ್ಷ ನಡೆಯಲಿರುವ ಟೂರ್ನಿಗಾಗಿ ಈಗಾಗಕಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈಟ್ ಶುರುವಾಗಿದೆ. ಅದ್ರಲ್ಲೂ ಪಾಕಿಸ್ತಾನದ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಭಾರತೀಯರನ್ನು ಕೆರಳಿಸುತ್ತಿದ್ದಾರೆ. ಇದೆಲ್ಲದ್ರ ನಡುವೆ ನಂದೆಲ್ಲಿ ಇಡ್ಲಿ ನಂದಗೋಪಾಲ ಅಂತಾ ಪಾಕ್​ನ ವೇಗದ ಬೌಲರ್​​ ಹಸನ್ ಅಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಅದೂ ಕೂಡ ಭಾರತ ತಂಡ ಇಲ್ಲದೆಯೇ ನಾವು ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಸ್ತೇವೆ ಅಂತಾ ದೌಲತ್ತು ತೋರಿದ್ದಾರೆ.

ಭಾರತ ಇಲ್ಲದೆಯೇ ಟೂರ್ನಿ!

ಭದ್ರತೆಯ ಕಾರಣ ನೀಡಿ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾಗವಹಿಸುವುದಿಲ್ಲ. ಹೀಗಾಗಿ ಬೇರೆ ಸ್ಥಳದಲ್ಲಿ ಭಾರತದ ಪಂದ್ಯಗಳನ್ನ ಆಯೋಜನೆ ಮಾಡುವಂತೆ ಬಿಸಿಸಿಐ ಹೇಳಿದೆ. ತಮ್ಮ ಪಂದ್ಯಗಳನ್ನು ಶ್ರೀಲಂಕಾ ಅಥವಾ ದುಬೈಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿದೆ. ಆದ್ರೆ ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಕೊಳ್ತಿಲ್ಲ. ಭಾರತೀಯ ಆಟಗಾರರು ಪಾಕಿಸ್ತಾನಕ್ಕೇ ಬಂದು ಆಡುವಂತೆ ಪಟ್ಟು ಹಿಡಿದಿದ್ದಾರೆ. ಇದೀಗ ಪಾಕಿಸ್ತಾನ ಕ್ರಿಕೆಟಿಗ ಹಸನ್ ಅಲಿ ಮಾತನಾಡಿದ್ದು, ಭಾರತ ಬರದಿದ್ದರೇನಂತೆ, ಅವರಿಲ್ಲದೆಯೇ ಟೂರ್ನಿ ನಡೆಸುತ್ತೇವೆ ಎಂದಿದ್ದಾರೆ. ಪಾಕಿಸ್ತಾನದ ಟಿವಿ ಚಾನೆಲ್​ವೊಂದರಲ್ಲಿ ಮಾತನಾಡಿರುವ ಹಸನ್ ಅಲಿ ‘ಏಕದಿನ ವಿಶ್ವಕಪ್ ಟೂರ್ನಿ ಆಡಲು ನಾವು ಭಾರತಕ್ಕೆ ಹೋಗಿಲ್ಲವೇ? ಅದರಂತೆ ಅವರು ಪಾಕಿಸ್ತಾನಕ್ಕೆ ಬರಬೇಕು. ಕ್ರೀಡೆಗಳು ರಾಜಕೀಯದಿಂದ ದೂರವಿರಬೇಕು. ಹಾಗಾಗಿ ಭಾರತ ಸರ್ಕಾರ ಮತ್ತೊಂದು ದೃಷ್ಟಿಕೋನದಿಂದ ಯೋಚಿಸಬೇಕು. ಇದು ಭಾರತೀಯ ಆಟಗಾರರು ಪಾಕಿಸ್ತಾನಕ್ಕೆ ಬರಲು ನೆರವಾಗುತ್ತದೆ. ಅನೇಕ ಭಾರತದ ಆಟಗಾರರು ಪಾಕ್​ನಲ್ಲಿ ಆಡಲು ಬಯಸುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರು ಈಗಾಗಲೇ ಹೇಳಿದಂತೆ, ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದೆ. ಈ ಟೂರ್ನಿ ಬೇರೊಂದು ದೇಶದ ಆತಿಥ್ಯಕ್ಕೆ ಅವಕಾಶ ಕೊಡುವುದಿಲ್ಲ. ಭಾರತ ತಂಡ ಬರದಿದ್ದರೆ, ಏನು ಮಾಡಲು ಸಾಧ್ಯವಿಲ್ಲ. ಟೀಮ್ ಇಂಡಿಯಾ ಇಲ್ಲದೆಯೇ ಟೂರ್ನಿ ಆಯೋಜಿಸುತ್ತೇವೆ. ಪಾಕಿಸ್ತಾನ ದೇಶಕ್ಕೆ ಭಾರತವು ಬರಲಿಲ್ಲ ಎಂದ ಮಾತ್ರಕ್ಕೆ ಕ್ರಿಕೆಟ್ ಇಲ್ಲಿಗೆ ಕೊನೆಗೊಂಡಿತು ಎಂದು ಅರ್ಥವಲ್ಲ. ಭಾರತ ಹೊರತುಪಡಿಸಿ ಇನ್ನೂ ಅನೇಕ ತಂಡಗಳಿವೆ ಎಂದಿದ್ದಾರೆ. ಅಸಲಿಗೆ 2008ರ ಏಷ್ಯಾಕಪ್ ಟೂರ್ನಿಯ ಬಳಿಕ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. 2012-2013ರ ನಡುವೆ ನಡೆದಿದ್ದ ದ್ವಿಪಕ್ಷೀಯ ಸರಣಿಯಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಅಂದಿನಿಂದ ಎರಡೂ ತಂಡಗಳು ಐಸಿಸಿ ಮತ್ತು ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೆ ಪಿಸಿಬಿ ಸಾಕಷ್ಟು ಸಲ ಆಸಕ್ತಿ ತೋರಿತ್ತು. ಆದರೆ, ಬಿಸಿಸಿಐ ಅದಕ್ಕೆ ಕ್ಯಾರೆ ಎಂದಿಲ್ಲ. ಪಾಕಿಸ್ತಾನ ತಂಡವು 2023 ರಲ್ಲಿ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿತ್ತು, ಆದರೆ ಭಾರತವು ಏಷ್ಯಾ ಕಪ್‌ ಆಡಲು ಪಾಕಿಸ್ತಾನಕ್ಕೆ ಭೇಟಿ ನೀಡಲು ನಿರಾಕರಿಸಿತು. ಆ ಸಂದರ್ಭದಲ್ಲಿ ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಬೇಕಾಯಿತು.

ಪಾಕ್ ಆಟಗಾರರೇನೋ ಭಾರತ ಬರದೇ ಇದ್ರೂ ನಾವು ಟೂರ್ನಿ ಆಡ್ತೇವೆ. ಬೇರೆ ತಂಡಗಳ ಆಟಗಾರರು ಬರ್ತಾರೆ ಅಂತಾ ಉದ್ಧಟತನ ತೋರುಸ್ತಿದ್ದಾರೆ. ಆದ್ರೆ ಚಾಂಪಿಯನ್ಸ್ ಟ್ರೋಫಿಗೆ ಭಾರತ ಗೈರಾದರೆ, ಅದು ಐಸಿಸಿಯ ಆದಾಯಕ್ಕೆ ಅದೆಷ್ಟು ದೊಡ್ಡ ಹೊಡೆತ ಕೊಡುತ್ತೆ ಅನ್ನೋದು ಪಾಕ್​ನವ್ರಿಗೆ ಹೇಗೆ ಅರ್ಥ ಆಗ್ಬೇಕು. ಭಾರತ ಮತ್ತು ಪಾಕಿಸ್ತಾನ ಪಂದ್ಯ ಹೈವೋಲ್ಟೇಜ್​ಗೆ ಮಾತ್ರ ಸೀಮಿತವಾಗಿಲ್ಲ, ಭರ್ಜರಿ ಆದಾಯ ತಂದುಕೊಡುವ ಪಂದ್ಯ ಕೂಡ ಹೌದು. ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಕಾರಣ ಭಾರತ ಗೈರಾದರೆ ಟೂರ್ನಿ ವೀಕ್ಷಿಸುವವರ ಸಂಖ್ಯೆ ಪಾತಾಳಕ್ಕೆ ಕುಸಿಯುತ್ತದೆ. ಇದು ಆದಾಯಕ್ಕೂ ದೊಡ್ಡ ಪೆಟ್ಟು ಬೀಳುತ್ತದೆ. ಹೀಗಾಗಿ ಭಾರತವನ್ನ ಟೂರ್ನಿಯಿಂದ ಹೊರಗಿಟ್ಟು ಪಂದ್ಯಗಳನ್ನ ನಡೆಸೋಕೆ ಐಸಿಸಿ ಒಪ್ಪಿಗೆ ನೀಡಲ್ಲ. ಅದೇ ಕಾರಣಕ್ಕೆ ಭಾರತ ತಂಡವು ಟೂರ್ನಿಯಿಂದ ಹಿಂದೆ ಸರಿಯದಂತೆ ನೋಡಿಕೊಳ್ಳಲು ಐಸಿಸಿ ಪ್ಲ್ಯಾನ್ ಮಾಡ್ತಿದೆ.

Shwetha M