ಭಾರತ Vs ನ್ಯೂಜಿಲೆಂಡ್ ಫೈನಲ್.. ಯಾರಾಗ್ತಾರೆ ದುಬೈನಲ್ಲಿ ಚಾಂಪಿಯನ್?

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾವನ್ನ ಸೋಲಿಸೋ ಮೂಲಕ ನ್ಯೂಜಿಲೆಂಡ್ ತಂಡ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಈಗಾಗಲೇ ಆಸ್ಟ್ರೇಲಿಯಾವನ್ನ ಸೋಲಿಸಿ ಫಿನಾಲೆಗೆ ಕಾಲಿಟ್ಟಿರೋ ಭಾರತ ಚಾಂಪಿಯನ್ ಪಟ್ಟಕ್ಕೇರಲು ಕಿವೀಸ್ ಪಡೆ ವಿರುದ್ಧ ಭಾನುವಾರ ಪೈಪೋಟಿ ನಡೆಸಲಿದೆ. ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ರಣರೋಚಕ ಕದನ ಹೇಗಿತ್ತು..? ಏನೆಲ್ಲಾ ದಾಖಲೆಗಳು ಕ್ರಿಯೇಟ್ ಆದ್ವು? ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈಟ್ ಹೇಗಿರುತ್ತೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಗೆ ಮತ್ತೆ ಮುಡಾ ಸಂಕಷ್ಟ – ಸಿಬಿಐ ತನಿಖೆ ಕೋರಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಮಾರ್ಚ್ 9 ರಂದು ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಟೀಮ್ ಇಂಡಿಯಾ ಫೈನಲ್ಗೇರಿದರೆ, ಅತ್ತ ದ್ವಿತೀಯ ಸೆಮಿಫೈನಲ್ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿ ನ್ಯೂಝಿಲೆಂಡ್ ಫೈನಲ್ ಫೈಟ್ಗೆ ಎಂಟ್ರಿ ಕೊಟ್ಟಿದೆ. 2025 ರ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದಿದ್ದು ಈ ವೇಳೆ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಳ್ತು. ಬಹುಶಃ ಈ ನಿರ್ಧಾರವೇ ನ್ಯೂಜಿಲೆಂಡ್ಗೆ ಪ್ಲಸ್ ಆಯ್ತು ಅನ್ಸುತ್ತೆ. ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಅವ್ರ ನಿರ್ಧಾರ ಸರಿ ಎನ್ನುವಂತೆ ಬ್ಯಾಟಿಂಗ್ ಮಾಡಿದ್ದು ಕಿವೀಸ್ನ ಬ್ಯಾಟರ್ಸ್. ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡವು 50 ಓವರ್‌ಗಳಲ್ಲಿ 363 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 300+ ರನ್ ಸ್ಕೋರ್ ಮಾಡಿದ್ರೂ ಗೆಲುವು ಮಾತ್ರ ಸಿಗಲಿಲ್ಲ.
ನ್ಯೂಜಿಲೆಂಡ್ ಪರ ರಚಿನ್ & ವಿಲಿಯಮ್ಸನ್ ಭರ್ಜರಿ ಶತಕ!
ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಮ್ಯಾಚಲ್ಲಿ ನ್ಯೂಜಿಲೆಂಡ್ ಆಟಗಾರರು ದಾಖಲೆಯ ಗೆಲುವು ಸಾಧಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪರ ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಇನ್ನಿಂಗ್ಸ್ ಆರಂಭಿಸಿದ್ರು. ಬಟ್ ವಿಲ್ ಯಂಗ್ 23 ರನ್ಗೆ ಆಟ ಮುಗಿಸಿದ್ರು. ಆ ನಂತ್ರ ರಚಿನ್ಗೆ ಜೊತೆಯಾದ ಕೇನ್ ವಿಲಿಯಮ್ಸನ್ ಶತಕದ ಇನ್ನಿಂಗ್ಸ್ ಆಡಿದರು. ಇಬ್ಬರು ಎರಡನೇ ವಿಕೆಟ್‌ಗೆ 164 ರನ್‌ಗಳ ಜೊತೆಯಾಟವನ್ನಾಡಿದರು. ರಚಿನ್ 101 ಎಸೆತಗಳಲ್ಲಿ 13 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳ ಸಹಿತ 108 ರನ್ ಬಾರಿಸಿದರೆ, ವಿಲಿಯಮ್ಸನ್ 94 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 102 ರನ್ ಗಳಿಸಿದರು. ಇಬ್ಬರೂ ಔಟಾದ ನಂತರ, ಡ್ಯಾರಿಲ್ ಮಿಚೆಲ್ 37 ಎಸೆತಗಳಲ್ಲಿ 49 ರನ್‌ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ 27 ಎಸೆತಗಳಲ್ಲಿ 49 ರನ್ ಸಿಡಿಸಿ ಅಜೇಯರಾಗಿ ಉಳಿದ್ರು. ಹೀಗೆ ಆರಂಭದಿಂದ ಕೊನೇವರೆಗೂ ಸೌತ್ ಆಫ್ರಿಕಾ ಆಟಗಾರರ ಮೇಲೆ ಅಟ್ಯಾಕಿಂಗ್ ಮೋಡ್ನಲ್ಲಿ ಬ್ಯಾಟ್ ಬೀಸಿದ ನ್ಯೂಜಿಲೆಂಡ್ ಪಡೆ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಕಲೆ ಹಾಕಿತು.
ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾಗೆ ಕೈಕೊಟ್ಟ ಬ್ಯಾಟರ್ಸ್!
ನ್ಯೂಜಿಲೆಂಡ್ ನೀಡಿದ್ದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಸೌತ್ ಆಫ್ರಿಕಾದ ಆಟಗಾರರನ್ನ ಮೊದಲ ಓವರ್‌ನಿಂದಲೇ ಕಿವೀಸ್ ಬೌಲರ್‌ಗಳು ಕಂಟ್ರೋಲ್ ಮಾಡಿದ್ರು. ಆರಂಭಿಕ ಆಟಗಾರ ರಿಯಾನ್ 17 ರನ್ ಸಿಡಿಸಿದ್ರೆ ಕ್ಯಾಪ್ಟನ್ ಟೆಂಬಾ ಹಾಗೇ ರಾಸ್ಸಿ ವ್ಯಾನ್ ಡೆರ್ ಡುಸೆನ್ ಜವಾಬ್ದಾರಿಯುತ ಆಟವಾಡಿದ್ರು. 105 ರನ್‌ಗಳ ಪಾರ್ಟ್ನರ್ಶಿಪ್ ಬಂತು. ಬಟ್ ರನ್ ಸ್ಕೋರ್ ತುಂಬಾನೇ ಸ್ಲೋವಿಂಗ್ ಆಗಿತ್ತು. ಇದ್ರಿಂದಾಗಿ ಓವರ್ ಮುಗಿದಂತೆಲ್ಲಾ ಪ್ರೆಶರ್ ಕೂಡ ಜಾಸ್ತಿ ಆಗ್ತಿತ್ತು. 125 ರನ್ ಗಳಿಗೆ ಎರಡನೇ ವಿಕೆಟ್ ಆಗಿ ಬವುಮಾ ಔಟಾದ ನಂತರ, ಯಾವುದೇ ಬ್ಯಾಟ್ಸ್ ಮನ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. 161 ರನ್‌ಗಳಿಗೆ ಮೂರನೇ ವಿಕೆಟ್ ಮತ್ತು 167 ರನ್‌ಗಳಿಗೆ ನಾಲ್ಕನೇ ವಿಕೆಟ್ ಕಳೆದುಕೊಂಡಿತು.
312 ರನ್ ಗಳಿಸಿ ಸೋಲೊಪ್ಪಿಕೊಂಡ ಸೌತ್ ಆಫ್ರಿಕಾ!
ಹೀಗೆ ಟೀಮ್ನ ಅರ್ಧದಷ್ಟು ಆಟಗಾರರು 189 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ರು. ಮುಂದಿನ 29 ರನ್ ಗಳಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾ ಇನ್ನೂ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ, ಡೇವಿಡ್ ಮಿಲ್ಲರ್ ಏಕಾಂಗಿಯಾಗಿ ಹೋರಾಡಿ 67 ಎಸೆತಗಳಲ್ಲಿ 100 ರನ್ ಗಳಿಸಿದರು. ಆದರೆ ಅವರ ಇನ್ನಿಂಗ್ಸ್ ಕೂಡ ತಂಡವನ್ನು ಗೆಲುವಿನ ದಡ ಮುಟ್ಟಿಸಲಿಲ್ಲ. ಅವರನ್ನು ಹೊರತುಪಡಿಸಿ, ಬವುಮಾ 71 ಎಸೆತಗಳಲ್ಲಿ 56 ರನ್, ವ್ಯಾನ್ ಡೆರ್ ಡುಸೆನ್ 66 ಎಸೆತಗಳಲ್ಲಿ 69 ರನ್ ಮತ್ತು ಐಡೆನ್ ಮಾರ್ಕ್ರಾಮ್ 29 ಎಸೆತಗಳಲ್ಲಿ 31 ರನ್ ಗಳಿಸಿದರು. ಒಟ್ಟಾರೆ 50 ಓವರ್‌ಗಳಲ್ಲಿ ಸೌತ್ ಆಫ್ರಿಕಾಗೆ 312 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಈ ಮೂಲಕ 50 ರನ್‌ಗಳ ಅಂತರದಿಂದ ಸೋಲೊಪ್ಪಿಕೊಳ್ತು.
ಐಸಿಸಿ ಟೂರ್ನಮೆಂಟ್ ನಲ್ಲಿ ದಾಖಲೆ ಬರೆದ ರಚಿನ್!
ನ್ಯೂಜಿಲೆಂಡ್ನ ಆರಂಭಿಕ ಆಟಗಾರ ರಚಿನ್ ರವೀಂದ್ರ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸೋ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ರಚಿನ್ ರವೀಂದ್ರ ಐಸಿಸಿ ಟೂರ್ನಮೆಂಟ್‌ನಲ್ಲಿ 5 ಶತಕಗಳನ್ನು ಬಾರಿಸಿದ್ದು ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ರಚಿನ್ ರವೀಂದ್ರ ಕೇವಲ 13 ಇನ್ನಿಂಗ್ಸ್‌ಗಳಲ್ಲಿ 5 ಶತಕಗಳನ್ನು ಬಾರಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ರಚಿನ್ ಬಾರಿಸಿರುವ ಐದು ಶತಕಗಳು ಏಕದಿನ ಮಾದರಿಯಲ್ಲೇ ಬಂದಿವೆ. ಅದರಲ್ಲೂ ಈ 5 ಶತಕಗಳು ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಬಂದಿವೆ. ರಚಿನ್ 2023 ರ ವಿಶ್ವಕಪ್‌ನಲ್ಲಿ 3 ಶತಕಗಳನ್ನು ಬಾರಿಸಿದ್ದರೆ, ಈಗ ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ದೊಡ್ಡ ಟೂರ್ನಿಗಳಲ್ಲಿ ತಂಡಕ್ಕೆ ನೆರವಾಗೋ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನ ಫೈನಲ್ ಗೇರಿಸಿದ್ದಾರೆ. ಭಾನುವಾರ ಭಾರತದ ವಿರುದ್ಧ ಕಿವೀಸ್ ಪಡೆ ಟ್ರೋಫಿಗಾಗಿ ಪೈಪೋಟಿ ನಡೆಸಲಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಹೈಯೆಸ್ಟ್ ಸ್ಕೋರ್!
ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ನ್ಯೂಜಿಲೆಂಡ್ ತಂಡವು ಅತ್ಯಧಿಕ ಸ್ಕೋರ್ ಗಳಿಸಿದ ಸಾಧನೆ ಮಾಡಿದೆ. ಇದೇ ಪಂದ್ಯಾವಳಿಯಲ್ಲಿ, ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ 356 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಮಾಡಿತ್ತು. ಆದರೆ ಇದೀಗ ನ್ಯೂಜಿಲೆಂಡ್ 362 ರನ್ ಬಾರಿಸಿ ಆ ದಾಖಲೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ, 350 ಕ್ಕಿಂತ ಹೆಚ್ಚು ಸ್ಕೋರ್ ಮೂರು ಬಾರಿ ದಾಖಲಾಗಿದೆ. ಈ ಆವೃತ್ತಿಯಲ್ಲೇ ಮೂರು ಬಾರಿ 350 ರನ್‌ಗಳ ಗಡಿ ದಾಟಿರುವುದು ವಿಶೇಷ. ಅಲ್ದೇ ಐಸಿಸಿ ಟೂರ್ನಿಗಳ ಇತಿಹಾಸದಲ್ಲಿ ಯಾವುದೇ ತಂಡವು 300 ಕ್ಕಿಂತ ಹೆಚ್ಚು ರನ್‌ಗಳ ಟಾರ್ಗೆಟ್ ರೀಚ್ ಮಾಡೋಕೆ ಯಶಸ್ವಿಯಾಗಿಲ್ಲ. ಆದರೆ, ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದೆ.