ತವರಲ್ಲೇ ಹೀನಾಯವಾಗಿ ಸೋತ ಪಾಕ್ – ನ್ಯೂಜಿಲೆಂಡ್ಗೆ ಭರ್ಜರಿ ಜಯ

ತವರಲ್ಲೇ ಹೀನಾಯವಾಗಿ ಸೋತ ಪಾಕ್ –  ನ್ಯೂಜಿಲೆಂಡ್ಗೆ ಭರ್ಜರಿ ಜಯ

ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಪಂದ್ಯದಲ್ಲೇ ಆತಿಥೇಯ ಪಾಕಿಸ್ತಾನವನ್ನು 60 ರನ್‌ಗಳಿಂದ ಸೋಲಿಸುವ ಮೂಲಕ ಗೆಲುವಿನ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ಅವರ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 320 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಹಾಲಿ ಚಾಂಪಿಯನ್ ಪಾಕಿಸ್ತಾನ ಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೆ 47.2 ಓವರ್‌ಗಳಲ್ಲಿ 260 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ಪರ ಖುಸ್ದಿಲ್ ಶಾ ಮತ್ತು ಬಾಬರ್ ಆಝಂ ಅರ್ಧಶತಕ ಬಾರಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಇದೀಗ ಕಿವೀಸ್ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಪಂದ್ಯವೇ ನಿರ್ಣಾಯಕವಾಗಿದೆ. ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೋತರೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳಲಿದೆ.

 

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡ 9ನೇ ಓವರ್ ವೇಳೆಗೆ ಡೆವೊನ್ ಕಾನ್ವೇ ಮತ್ತು ಕೇನ್ ವಿಲಿಯಮ್ಸನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿತು. ಇದಾದ ಸ್ವಲ್ಪ ಸಮಯದ ನಂತರ ಡ್ಯಾರಿಲ್ ಮಿಚೆಲ್ ಕೂಡ ವಿಕೆಟ್ ಒಪ್ಪಿಸಿದರು. ಹೀಗಾಗಿ ಸ್ಕೋರ್ 3 ವಿಕೆಟ್‌ಗಳಿಗೆ ಕೇವಲ 73 ರನ್‌ಗಳಾಗಿತ್ತು. ಇಲ್ಲಿಂದ ವಿಲ್ ಯಂಗ್ ಮತ್ತು ಟಾಮ್ ಲ್ಯಾಥಮ್ ಇನ್ನಿಂಗ್ಸ್ ಮೇಲೆ ಹಿಡಿತ ಸಾಧಿಸಿ ಪಾಕಿಸ್ತಾನಿ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಾರಂಭಿಸಿದರು. ಶೀಘ್ರದಲ್ಲೇ ವಿಲ್ ಯಂಗ್ ತಮ್ಮ ಏಕದಿನ ವೃತ್ತಿಜೀವನದ ಮೊದಲ ಶತಕವನ್ನು ದಾಖಲಿಸುವುದರೊದಿಗೆ ಲ್ಯಾಥಮ್ ಅವರೊಂದಿಗೆ 118 ರನ್‌ಗಳ ಪಾಲುದಾರಿಕೆಯನ್ನು ಮಾಡಿದರು. ಯಂಗ್ ಔಟಾದ ನಂತರ ಲ್ಯಾಥಮ್, ಗ್ಲೆನ್ ಫಿಲಿಪ್ಸ್ ಜೊತೆಗೂಡಿ 125 ರನ್‌ಗಳ ತ್ವರಿತ ಜೊತೆಯಾಟ ನಡೆಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಈ ಸಮಯದಲ್ಲಿ, ಲ್ಯಾಥಮ್ ಕೇವಲ 95 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ 8 ನೇ ಶತಕವನ್ನು ಪೂರೈಸಿದರೆ,ಫಿಲಿಪ್ಸ್ ಕೇವಲ 39 ಎಸೆತಗಳಲ್ಲಿ 61 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಲ್ಯಾಥಮ್ 104 ಎಸೆತಗಳಲ್ಲಿ 118 ರನ್ ಗಳಿಸಿ ಅಜೇಯರಾಗಿ ಮರಳಿದರು.

Kishor KV