ಭಾರತದ ಭದ್ರತೆ ಕೆಣಕಿದ PAK.. ಕಂಪೇರ್ ಮಾಡದಂತೆ BCCI ವಾರ್ನಿಂಗ್ – ಚಾಂಪಿಯನ್ಸ್ ಟ್ರೋಫಿ ಕಗ್ಗಂಟಾಯ್ತಾ?
ಭಾರತದ ವಿರುದ್ಧ ಜಿದ್ದಿಗೆ ಬಿದ್ದು ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನ ಸಂಪೂರ್ಣವಾಗಿ ಪಾಕಿಸ್ತಾನದಲ್ಲೇ ನಡೆಸಬೇಕು ಅಂತಾ ಪಟ್ಟು ಹಿಡಿದಿದ್ದ ಪಿಸಿಬಿ ಕೊನೆಗೂ ಐಸಿಸಿ ಚಾಟಿಗೆ ತಲೆಬಾಗಿದೆ. ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡಿದೆ. ಬಟ್ ಇಷ್ಟಾದ್ರೂ ಪಾಕ್ನ ಮೊಂಡಾಟ ಮಾತ್ರ ನಿಂತಿಲ್ಲ. ಐಸಿಸಿಗೆ ಕಂಡೀಷನ್ಸ್ ಹಾಕಿ ಬಿಲ್ಡಪ್ ಕೊಟ್ಟಿತ್ತು. ಬಟ್ ಪಾಕ್ ಬಿಲ್ಡಪ್ಗೆ ಬಿಸಿಸಿಐ ಸರಿಯಾಗೇ ಏಟು ಕೊಟ್ಟಿದೆ. ಭದ್ರತೆ ವಿಚಾರ ಕೆದಕಿದ ವೈರಿ ರಾಷ್ಟ್ರಕ್ಕೆ ಸರಿಯಾಗೇ ತಿರುಗೇಟು ಕೊಟ್ಟಿದೆ. ಹಾಗಾದ್ರೆ ಈ ಸಲ ಪಾಕ್ ಮಾಡಿದ ಕಿತಾಪತಿ ಏನು..? ಭಾರತ ಕೊಟ್ಟಿರೋ ತಿರುಗೇಟು ಹೇಗಿತ್ತು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಲ್ಲು ಕಿಸಕ್.. ಸಿನಿಮಾ ಧಮಾಕಾ! – ಶೇಖಾವತ್ ಖಾಲಿ.. ಡಾಲಿ ಜಾಲಿ?
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆತಿಥ್ಯವನ್ನ ಪಾಕಿಸ್ತಾನಕ್ಕೆ ಕೊಟ್ಟಾಗಿಂದ ಒಂದಿಲ್ಲೊಂದು ಕಿರಿಕ್ಗಳು ಇದ್ದದ್ದೇ. ಭಾರತದ ವಿರುದ್ಧ ಜಿದ್ದಿಗೆ ಬಿದ್ದು ತಿಂಗಳುಗಟ್ಟಲೆ ಮೊಂಡಾಟ ಮಾಡಿ ಕೊನೆಗೂ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಒಪ್ಪಿಕೊಂಡಿದೆ. ಬಟ್ ಹೈಬ್ರಿಡ್ ಮಾದರಿ ಒಪ್ಪಿಕೊಂಡಿದ್ದೇ ಪಾಕ್ಗೆ ದೊಡ್ಡ ಮುಖಭಂಗ ಆದಂತಾಗಿದೆ. ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ. ಸಂಪೂರ್ಣ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಆಯೋಜನೆಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದ ಅದೇ ಪಾಕಿಸ್ತಾನಕ್ಕೆ ಈಗ ಬಿಸಿಸಿಐ ಇನ್ನೊಂದು ಶಾಕ್ ಕೊಟ್ಟಿದೆ.
ಭಾರತಕ್ಕೆ ನಾವೂ ಕಾಲಿಡಲ್ಲವೆಂದು ಪಾಕಿಸ್ತಾನ ಕಂಡೀಷನ್!
ಹೈಬ್ರಿಡ್ ಮಾದರಿ ಟೂರ್ನಿ ನಡೆಸೋಕೆ ಒಪ್ಪಿಕೊಂಡಿದ್ದ ಪಾಕಿಸ್ತಾನ ಐಸಿಸಿಗೆ ಮೂರು ಕಂಡೀಷನ್ಗಳನ್ನ ಹಾಕಿದೆ. ಅದ್ರಲ್ಲಿ ಒಂದು ಭಾರತ ಹೇಗೆ ಪಾಕಿಸ್ತಾನಕ್ಕೆ ಬರಲ್ಲ ಅಂತಾ ಹೈಬ್ರಿಡ್ ಮಾದರಿ ಪಂದ್ಯಗಳಿಗೆ ಡಿಮ್ಯಾಂಡ್ ಮಾಡ್ತಿದ್ದಾರೋ ಹಾಗೇ ನಾವು ಕೂಡ ಭಾರತದಲ್ಲಿ ಐಸಿಸಿ ಟೂರ್ನಿ ಆಯೋಜನೆ ಮಾಡಿದ್ರೆ ಬರೋದಿಲ್ಲ ಅಂತಾ ಷರತ್ತು ಇಟ್ಟಿದೆ. 2031ರ ವರೆಗೆ ಭಾರತದಲ್ಲಿ ನಡೆಯುವ ಐಸಿಸಿ ಆಯೋಜಿತ ಟೂರ್ನಿಗಳನ್ನು ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು. ಯಾವುದೇ ಕಾರಣಕ್ಕೂ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಪಿಸಿಬಿ ಐಸಿಸಿಗೆ ಹೇಳಿದೆ. ಮುಂದಿನ 7 ವರ್ಷಗಳಲ್ಲಿ ಭಾರತವು 2026ಕ್ಕೆ T20 ವಿಶ್ವಕಪ್, 2029ಕ್ಕೆ ಚಾಂಪಿಯನ್ಸ್ ಟ್ರೋಫಿ ಹಾಗೇ 2031ಕ್ಕೆ ODI ವಿಶ್ವಕಪ್ ಆಯೋಜನೆಯ ಜಬಾವ್ದಾರಿಯನ್ನ ವಹಿಸಿಕೊಂಡಿದೆ. ಸೋ ಈಗ ಪಾಕ್ ಬೇಡಿಕೆಯಂತೆ ಈ ಮೂರು ಟೂರ್ನಿಗಳಲ್ಲಿ ಪಾಕಿಸ್ತಾನದ ಪಂದ್ಯಗಳನ್ನ ಭಾರತ ಕೂಡ ಹೈಬ್ರಿಡ್ ಮಾದರಿಯಲ್ಲಿ ಆಯೋಜನೆ ಮಾಡಬೇಕು ಅನ್ನೋ ಕಂಡೀಷನ್ ಅದು.
ಭಾರತದ ಭದ್ರತೆಯನ್ನ ಪಾಕಿಸ್ತಾನಕ್ಕೆ ಹೋಲಿಸಬೇಡಿ ಎಂದ ಬಿಸಿಸಿಐ!
ಯೆಸ್. 2008ರ ಬಳಿಕ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಕಾಲಿಟ್ಟಿಲ್ಲ. 2012-13ರ ದ್ವಿಪಕ್ಷೀಯ ಸರಣಿ ಬಳಿಕ ಉಭಯ ರಾಷ್ಟ್ರಗಳ ನಡುವೆ ಸರಣಿಗಳನ್ನೂ ಆಡಿಸಲಾಗ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನದ ನಸುಗುನ್ನಿ ಬುದ್ಧಿ. ಸುಖಾಸುಮ್ಮನೆ ಭಾರತದ ಮೇಲೆ ಕಾಲು ಕೆರೆದುಕೊಂಡು ಬರೋ ಪಾಕಿಗಳು ಒಂದಿಲ್ಲೊಂದು ಕಿತಾಪತಿ ಮಾಡ್ತಾನೇ ಇರ್ತಾರೆ. ಹೀಗಾಗಿ ಭಾರತ ಸರ್ಕಾರ ಐಸಿಸಿ ಟೂರ್ನಿಗಳನ್ನ ಹೊರತುಪಡಿಸಿ ಉಭಯ ರಾಷ್ಟ್ರಗಳ ನಡುವೆ ಉಳಿದ ಸರಣಿಗಳನ್ನ ನಿಷೇಧಿಸಿದೆ. ಭದ್ರತೆ ವೈಫಲ್ಯವೂ ದೊಡ್ಡ ಕಾರಣವೂ ಆಗಿದೆ. ಬಟ್ ಈಗ ಪಾಕಿಸ್ತಾನ ಕೂಡ ಭಾರತಕ್ಕೆ ನಾವೂ ಬರೋದಿಲ್ಲ ಅಂತಾ ಪಟ್ಟು ಹಿಡಿದಿದೆ. ಪಾಕ್ನ ಇದೇ ಕಾರಣ ಈಗ ಬಿಸಿಸಿಐ ಸಿಟ್ಟಿಗೆ ಕಾರಣವಾಗಿದೆ.
ಐಸಿಸಿಗೆ ಸ್ಪಷ್ಟ ಸಂದೇಶ ರವಾನಿಸಿದ ಬಿಸಿಸಿಐ!
ಪಾಕಿಸ್ತಾನ ತಂಡ ಕೂಡ ಭಾರತದಲ್ಲಿ ಕ್ರಿಕೆಟ್ ಆಡದೇ ತಟಸ್ಥ ಸ್ಥಳದಲ್ಲಿ ಪಂದ್ಯವನ್ನಾಲಿದೆ ಎನ್ನುವ ಡಿಮ್ಯಾಂಡ್ಗೆ ಬಿಸಿಸಿಐ, ಐಸಿಸಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಭಾರತದಲ್ಲಿ ಕ್ರಿಕೆಟ್ ಆಡಲು ಯಾವುದೇ ಭದ್ರತೆಯ ಭೀತಿಯಿಲ್ಲ. ಹೀಗಾಗಿ ಪಾಕಿಸ್ತಾನದ ಇಂತಹ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಬಿಸಿಸಿಐ ಸ್ಪಷ್ಟವಾಗಿ ಐಸಿಸಿ ಗಮನಕ್ಕೆ ತಂದಿದೆ. ಇದರೊಂದಿಗೆ ಪಾಕಿಸ್ತಾನದ ಭದ್ರತೆಯ ವಿಚಾರಕ್ಕೂ ಭಾರತದ ಭದ್ರತೆ ವಿಚಾರಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಭಾರತ ಜಾಗತಿಕ ಮಟ್ಟದಲ್ಲಿ ಸಾರಿ ಹೇಳಿದೆ.
ಭಾರತವು ಮುಂದಿನ ಒಂದು ದಶಕದಲ್ಲಿ ಹಲವು ಐಸಿಸಿ ಟೂರ್ನಿಗಳ ಆತಿಥ್ಯದ ಹಕ್ಕನ್ನು ಹೊಂದಿದೆ. ಈ ಪೈಕಿ 2025ರಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ, ಇನ್ನು 2026ರಲ್ಲಿ ಶ್ರೀಲಂಕಾದ ಜತೆಗೂಡಿ ಭಾರತ ಜಂಟಿಯಾಗಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ. ಇದಾದ ಬಳಿಕ 2029ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2031ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ.
ಜಯ್ ಶಾ ಐಸಿಸಿ ಅಧ್ಯಕ್ಷರಾಗಿದ್ದು ಪಾಕ್ ಗೆ ತಲೆಬಿಸಿ!
ಇನ್ನು ಈ ಎಲ್ಲಾ ಬೆಳವಣಿಗೆಗಳ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗಿದ್ದಾರೆ. ಡಿಸೆಂಬರ್ 5 ರಂದು ಜಯ್ ಶಾ ನೇತೃತ್ವದಲ್ಲಿ ಮೊದಲ ಸಭೆ ನಡೆಯುತ್ತಿದೆ. ಸಭೆಯಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತನ್ನ ಹೊಸ ಬೇಡಿಕೆಗಳನ್ನು ಮುಂದಿಡುವ ಸಾಧ್ಯತೆಯಿದೆ. ಯಾಕಂದ್ರೆ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದಿಯಲ್ಲಿ ಆಯೋಜಿಸಬೇಕಿದ್ದರೆ ಐಸಿಸಿ ತನ್ನ ಮೂರು ಬೇಡಿಕೆಗಳನ್ನು ಈಡೇರಿಸಬೇಕೆಂದು ಪಿಸಿಬಿ ಆಗ್ರಹಿಸಿದೆ. ಈ ಆಗ್ರಹಕ್ಕೆ ಜಯ್ ಶಾ ಒಪ್ಪಿಕೊಳ್ತಾರಾ ಅಥವಾ ಮತ್ತೆ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸ್ತಾರಾ ಅನ್ನೋ ಪ್ರಶ್ನೆ ಮೂಡಿದೆ.
ಒಟ್ನಲ್ಲಿ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಈಗಾಗ್ಲೇ ಪಿಸಿಬಿ ಸಿದ್ಧತೆಗಳನ್ನ ಮಾಡಿಕೊಂಡಿದೆ. ದುಬೈನಲ್ಲಿ ಭಾರತದ ಪಂದ್ಯಗಳು ನಡೆಯಲಿವೆ. ಬಟ್ ಭಾರತದಂತೆ ತನಗೂ ಹೈಬ್ರಿಡ್ ಮಾದರಿ ಬೇಕು ಅಂತಾ ಪಟ್ಟುಹಾಕಿದ ಪಾಕಿಸ್ತಾನಕ್ಕೆ ಬಿಸಿಸಿಐ ಸರಿಯಾಗೇ ತಿರುಗೇಟು ಕೊಟ್ಟಿದೆ.