ಪಾಕ್​ ಟೂರ್ನಿಗೆ ಹೋಗ್ಲೇಬೇಕಾ ಭಾರತ? – ಭದ್ರತೆ ಓಕೆ ಎಂದು ICC ಸರ್ಟಿಫಿಕೇಟ್ 
ಚಾಂಪಿಯನ್ಸ್ ಟ್ರೋಫಿ ಫೈಟ್ ಶುರು 

ಪಾಕ್​ ಟೂರ್ನಿಗೆ ಹೋಗ್ಲೇಬೇಕಾ ಭಾರತ? – ಭದ್ರತೆ ಓಕೆ ಎಂದು ICC ಸರ್ಟಿಫಿಕೇಟ್ ಚಾಂಪಿಯನ್ಸ್ ಟ್ರೋಫಿ ಫೈಟ್ ಶುರು 

2025ರಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೊಂಡಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಬಟ್ ಭಾರತೀಯರನ್ನ ಕಾಡ್ತಿರೋ ಪ್ರಶ್ನೆ ಅಂದ್ರೆ ಈ ಟೂರ್ನಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುತ್ತಾ ಅನ್ನೋದು. ಪಾಕ್ ಮಾಧ್ಯಮಗಳು ಈಗಾಗ್ಲೇ ಟೀಂ ಇಂಡಿಯಾ ನಮ್ಮ ನೆಲಕ್ಕೆ ಕಾಲಿಡೋದು ಪಕ್ಕಾ ಅಂತಾನೇ ಸುದ್ದಿ ಪ್ರಸಾರ ಮಾಡ್ತಿವೆ. ಆದ್ರೆ ಈವರೆಗೂ ಬಿಸಿಸಿಐ ಆಗ್ಲಿ ಅಥವಾ ಭಾರತ ಸರ್ಕಾರವಾಗ್ಲಿ ಈವರೆಗೂ ಅಧಿಕೃತವಾಗಿ ಏನನ್ನೂ ಘೋಷಣೆ ಮಾಡಿಲ್ಲ. ಇದೆಲ್ಲದ್ರ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಸಿದ್ಧತೆಗಳು, ವ್ಯವಸ್ಥೆಗಳು ಮತ್ತು ಭದ್ರತಾ ಕ್ರಮಗಳ ಬಗ್ಗೆ ತಪಾಸಣೆ ನಡೆಸಿ ಬಿಗ್ ಅಪ್​ಡೇಟ್ ನೀಡಿದೆ.

ಇದನ್ನೂ ಓದಿ: ಬ್ಯೂಟಿಫುಲ್ ಗವರ್ನರ್‌ ರಂಗಿನಾಟ! – 58 ಅಧಿಕಾರಿಗಳ ಜೊತೆ ಸಂಬಂಧ!

ಐಸಿಸಿ ನಿಯೋಗ ಗ್ರೀನ್ ಸಿಗ್ನಲ್!

ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಐಸಿಸಿಯ ತಪಾಸಣಾ ನಿಯೋಗವು, ಚಾಂಪಿಯನ್ಸ್​ ಟ್ರೋಫಿ ನಡೆಯಲಿರುವ ಲಾಹೋರ್‌ನ ಗಡಾಫಿ ಕ್ರೀಡಾಂಗಣ, ರಾವಲ್ಪಿಂಡಿ ಮೈದಾನ ಮತ್ತು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣವನ್ನು ಒಳಗೊಂಡಂತೆ ಅಲ್ಲಿಯ ಸ್ಥಳಗಳನ್ನು ಪರಿಶೀಲನೆ ನಡೆಸಿದೆ. ಅದರಲ್ಲೂ ಮುಖ್ಯವಾಗಿ ಕ್ರೀಡಾಂಗಣದ ಭದ್ರತಾ ವ್ಯವಸ್ಥೆ, ಮೂಲಸೌಕರ್ಯ ಮತ್ತು ಇತರ ಪ್ರಮುಖ ವ್ಯವಸ್ಥೆಗಳನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದೆ. ಅಂದರೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್​ ಟ್ರೋಫಿಗಾಗಿ ಬರುವ ತಂಡಗಳಿಗೆ ಬೇಕಾಗಿರೋ ಮೂಲಭೂತ ಸೌಕರ್ಯಗಳ ಕುರಿತು ಸಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಐಸಿಸಿ ಈ ಸರ್ಟಿಫಿಕೇಟ್ ಕೊಡ್ತಿದ್ದಂತೆ ಪಾಕ್ ಮಾಧ್ಯಮಗಳು ಮತ್ತು ಪಿಸಿಬಿ ಫುಲ್ ಖುಷಿಯಲ್ಲಿವೆ. ಈ ಮೆಗಾ ಟೂರ್ನಮೆಂಟ್‌ಗಾಗಿ ಟೀಂ ಇಂಡಿಯಾ ಮುಂದಿನ ವರ್ಷ ಪಾಕಿಸ್ತಾನ ಪ್ರವಾಸ ಮಾಡಲಿದೆ ಎಂದು ಸುದ್ದಿ ಮಾಡ್ತಿದ್ದಾರೆ. ಆದ್ರೆ ಭಾರತ ತಂಡ ಪ್ರಯಾಣ ಮಾಡುತ್ತೋ ಇಲ್ವೋ ಅನ್ನೋ ಬಗ್ಗೆ ಬಿಸಿಸಿಐ ಮತ್ತು ಭಾರತ ಸರ್ಕಾರ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ ಸಾಕಷ್ಟು ವಿಚಾರಗಳಲ್ಲಿ ಮನಸ್ಥಾಪಗಳಿವೆ. ಹೀಗಾಗಿ 2008ರ ಬಳಿಕ ಭಾರತ ತಂಡ ಪಾಕ್​ ನೆಲಕ್ಕೆ ಕಾಲಿಟ್ಟಿಲ್ಲ. ಹಾಗೇ ಉಭಯ ತಂಡಗಳು 2012 ರಿಂದ ಈವರೆಗೆ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡಿಲ್ಲ. ಈ ಎರಡು ತಂಡಗಳು ಐಸಿಸಿ ಈವೆಂಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಒಂದು ವೇಳೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ಸರ್ಕಾರ ಅನುಮತಿ ನೀಡಿದ್ದೇ ಆದಲ್ಲಿ ವೇಳಾಪಟ್ಟಿಯ ಪ್ರಕಾರ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಲಾಹೋರ್​ನ ಗಡಾಫಿ ಮೈದಾನದಲ್ಲಿ ಆಡಲಿದೆ. ಅನುಮತಿ ಸಿಗದೇ ಇದ್ದರೆ ಹೈಬ್ರೀಡ್​ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಅಂದರೆ ಭಾರತದ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಡಿಸಲಾಗುತ್ತದೆ. ಹೀಗೇಯೇ 2023ರಲ್ಲಿ ನಡೆದ ಏಷ್ಯಾಕಪ್​ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಆದರೇ ಭಾರತ ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕಿದ್ದರಿಂದ ಪಂದ್ಯವನ್ನು ಹೈಬ್ರೀಡ್​ ಮಾದರಿಯಲ್ಲಿ ನಡೆಸಲಾಗಿತ್ತು. ಭಾರತದ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿಸಿಲಾಗಿತ್ತು.

2025ರ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧವಾಗ್ತಿರೋ ಪಾಕ್​ ಭಾರತ ತಂಡ ಪಾಕಿಸ್ತಾನಕ್ಕೆ ಬರಲೇಬೇಕು ಅಂತಾ ಪಟ್ಟು ಹಿಡಿದಿದೆ. ಐಸಿಸಿ ಕೂಡ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಘೋಷಿಸಿಲ್ಲ. ಇದೆಲ್ಲದ್ರ ನಡುವೆ ಈಗ ಐಸಿಸಿಯ ನಿಯೋಗವೇ ಟೂರ್ನಿ ಆಯೋಜನೆಗೆ ಗ್ರೀನ್ ಸಿಗ್ನಲ್ ಕೊಟ್ಟಿರೋದ್ರಿಂದ ಭಾರತ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋ ಕುತೂಹಲ ಮೂಡಿದೆ.

Shwetha M