ICC ಟೂರ್ನಿ.. 8 ರಾಷ್ಟ್ರ.. ಸವಾಲೇನು? – ಬಾತ್​ರೂಂ, ಸೀಟ್, ಹೋಟೆಲ್ಸ್ ಇಲ್ಲ
ಚಾಂಪಿಯನ್ಸ್ ಟ್ರೋಫಿಗೆ ದಿಕ್ಕೆಟ್ಟ ಪಾಕ್

ICC ಟೂರ್ನಿ.. 8 ರಾಷ್ಟ್ರ.. ಸವಾಲೇನು? – ಬಾತ್​ರೂಂ, ಸೀಟ್, ಹೋಟೆಲ್ಸ್ ಇಲ್ಲಚಾಂಪಿಯನ್ಸ್ ಟ್ರೋಫಿಗೆ ದಿಕ್ಕೆಟ್ಟ ಪಾಕ್

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೆಂಗಿದೆ ಅಂತಾ ಇಡೀ ಜಗತ್ತಿಗೇ ಗೊತ್ತಿದೆ. ಸಾಮಾನ್ಯ ಜನ ಒಂದೊತ್ತಿನ ಊಟಕ್ಕೂ ಕೂಡ ಕೈ ಚಾಚುತ್ತಿದ್ದಾರೆ. ಹೀಗಿದ್ರೂ ಜಟ್ಟಿ ಜಾರಿ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ ಅಂತಾರಲ್ಲ ಹಾಗೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಡಾಯಿ ಕೊಚ್ಚಿಕೊಳ್ತಿದೆ. 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಮ್ಮಲ್ಲೇ ನಡೆಸೋದು ಅಂತಾ ಬಿಲ್ಡಪ್ ಕೊಟ್ಕೊಂಡು ಭಾರತ ಪಾಕಿಸ್ತಾನಕ್ಕೇ ಬಂದು ಕ್ರಿಕೆಟ್ ಆಡ್ಬೇಕು ಅಂತಾ ಪಟ್ಟು ಹಿಡಿದು ಕೊನೆಗೆ ಕೈ ಕೈ ಹಿಸುಕಿಕೊಳ್ತಿದೆ. ಯಾಕಾದರೂ ಟೂರ್ನಿ ಆಯೋಜನೆಯ ಜವಾಬ್ದಾರಿ ವಹಿಸಿಕೊಂಡ್ವೋ ಅಂತಾ ತಲೆಕೆಡಿಸಿಕೊಂಡಿದೆ. ಪಾಕಿಸ್ತಾನ ತಾನೇ ಗುಂಡಿ ತೋಡಿ ತಾನೇ ಹಳ್ಳಕ್ಕೆ ಬಿತ್ತಾ? ಪಿಸಿಬಿಗೆ ಎದುರಾಗಿರೋ ಸಂಕಷ್ಟ ಎಂಥಾದ್ದು? ಚಾಂಪಿಯನ್ಸ್ ಟ್ರೋಫಿ ಶಿಫ್ಟ್ ಆಗುತ್ತಾ? ಈ ಬಗೆಗಿನ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಿಕೆಗೆ ಜಡ್ಜಸ್ ಕಮೆಂಟ್ ಕೊಡಲ್ಲ ಯಾಕೆ? – ಇವರೇನಾ ರಾಜಾ ರಾಣಿ ವಿನ್ನರ್?

ಇರಲಾರದೆ ಇರುವೆ ಬಿಟ್ಕೊಂಡ್ರು ಅಂತಾರಲ್ಲ ಹಂಗಾಗಿದೆ ಪಾಕಿಸ್ತಾನದ ಕಥೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೊಣೆ ಹೊತ್ತ ಪಾಕ್​ನ ಮಾನ ಈಗ ವಿಶ್ವಮಟ್ಟದಲ್ಲಿ ಹರಾಜಾಗುತ್ತಿದೆ. ಯಾರೋ ಯಾಕೆ ಪಿಸಿಬಿ ಅಧ್ಯಕ್ಷರೇ ತಮ್ಮ ದುಸ್ಥಿತಿಯನ್ನ ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಟೂರ್ನಿ.. 8 ಬಲಿಷ್ಠ ತಂಡಗಳು.. 3 ವಾರಗಳ ಶೆಡ್ಯೂಲ್.. ಸ್ಟಾರ್ ಆಟಗಾರರ ದಂಡೇ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕ್​ಗೆ ಪಯಣ ಬೆಳೆಸಲಿದೆ. ಆದ್ರೆ ಟೂರ್ನಮೆಂಟ್ ಆತಿಥ್ಯ ವಹಿಸುತ್ತಿರೋ ಪಾಕ್​ನಲ್ಲಿ ಏನೊಂದೂ ಸರಿ ಇಲ್ಲ. ಕ್ರೀಡಾಂಗಣ ಇದ್ರೂ ಆಡೋಕೆ ಆಗಲ್ಲ. ಜನರಿಗೆ ಕೂರೋಕೆ ಆಸನಗಳೇ ಇಲ್ಲ. ಬಾತ್​ರೂಂ, ಟಾಯ್ಲೆಟ್, ಹೋಟೆಲ್ಸ್ ಹೀಗೆ ಸಾಲು ಸಾಲು ಸಮಸ್ಯೆಗಳಿವೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಜವಾಬ್ದಾರಿ ತಗೊಂಡು ಪಿಸಿಬಿ ಪೇಚಿಗೆ ಸಿಲುಕಿದ್ದೇಗೆ ಅನ್ನೋದನ್ನೇ ಹೇಳ್ತೇನೆ ನೋಡಿ.

ಅಯ್ಯೋ ಪಾಪ ಪಾಕಿಸ್ತಾನ!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹೊಣೆ ಹೊತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಈಗ ರಿಪೇರಿ ಕೆಲಸವೇ ಮುಗೀತಿಲ್ಲ. ಎರಡ್ಮೂರು ತಿಂಗಳಿಂದಲೂ ನವೀಕರಣ ಕಾಮಗಾರಿ ನಡೆಯುತ್ತಿದ್ರೂ ಮುಗಿಯೋ ಲಕ್ಷಣಗಳೇ ಕಾಣ್ತಿಲ್ಲ. ಅಭಿಮಾನಿಗಳು ಕುಳಿತುಕೊಳ್ಳೋಕೆ ಆಸನಗಳು, ಬಾತ್​ರೂಂಗಳೇ ಇಲ್ಲ ಎಂಬ ವಿಚಾರ ಹೊರ ಬಿದ್ದಿದೆ. ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಮೊಹ್ಸಿನ್​​ ನಖ್ವಿ ಅವರೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗಡ್ಡಾಫಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ನಖ್ವಿ, ಪಾಕಿಸ್ತಾನದ​​ ಕ್ರೀಡಾಂಗಣ ಮತ್ತು ಇತರ ದೇಶಗಳ ಕ್ರೀಡಾಂಗಣಗಳ ನಡುವಿನ ವ್ಯತ್ಯಾಸವನ್ನು ಹೇಳಿದ್ದಾರೆ. ಗಡ್ಡಾಫಿ ಕ್ರೀಡಾಂಗಣದ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆಗೆ ತೆರಳಿದ್ದ​ ನಖ್ವಿ ಈ ಮಾಹಿತಿಯನ್ನ ಹೊರ ಹಾಕಿದ್ದಾರೆ. ಮೂರು ಕ್ರೀಡಾಂಗಣಗಳ ದುರಸ್ಥಿಗಾಗಿ 12 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ನಮ್ಮ ಕ್ರೀಡಾಂಗಣ ಮತ್ತು ವಿಶ್ವದ ಇತರ ಕ್ರೀಡಾಂಗಣಗಳ ನಡುವೆ ವ್ಯತ್ಯಾಸವಿದೆ. ಕರಾಚಿ ಕ್ರೀಡಾಂಗಣ ಅಂತಾರಾಷ್ಟ್ರೀಯ ಕ್ರೀಡಾಂಗಣವಾಗಿರಲಿಲ್ಲ. ಮಾತ್ರವಲ್ಲದೆ, ನಮ್ಮ ಕ್ರೀಡಾಂಗಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ಆಸನಗಳಾಗಲಿ, ಬಾತ್​ ರೂಮ್​ಗಳಾಗಲಿ ಇರಲಿಲ್ಲ. 500 ಮೀಟರ್​ ದೂರದಿಂದ ಪಂದ್ಯ ವೀಕ್ಷಿಸುವಂತಿತ್ತು. ಆದರೀಗ ಜಗತ್ತು ತುಂಬಾ ಮುಂದುವರೆದಿದೆ ಎಂದಿದ್ದಾರೆ. ಕರಾಚಿಯ ರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ, ರಾವಲಪಿಂಡಿಯ ಪಿಂಡಿ ಕ್ರಿಕೆಟ್‌ ಸ್ಟೇಡಿಯಂ ಮತ್ತು ಲಾಹೋರ್‌ನ ಗದಾಫಿ ಸ್ಟೇಡಿಯಂ ಎಲ್ಲವನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಯೋಜನೆಗೆ ತಕ್ಕಂತೆ ದುರಸ್ಥಿಕರಣ ಮಾಡಲಾಗುತ್ತಿದೆ.. 8 ಅಂತಾರಾಷ್ಟ್ರೀಯ ತಂಡಗಳನ್ನು ಹೊಂದಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಆಯೋಜನೆಗೆ ಈ ಕೆಲಸ ಮೊದಲ ಆದ್ಯತೆ ಮೇರೆಗೆ ಆಗಬೇಕಿದೆ ಎಂದಿದ್ದಾರೆ. ಈಗಾಗಲೇ ಕರಾಚಿ ರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ದುರಸ್ಥಿಕರಣದ ಕೆಲಸ ಭರದಿಂದ ಸಾಗಿದೆ. ಮತ್ತೊಂದೆಡೆ ಟೂರ್ನಿಯಲ್ಲಿ ಭಾಗಿಯಾಗೋ ತಂಡಗಳ ಆಟಗಾರರು ಉಳಿದುಕೊಳ್ಳೋಕೆ ಒಂದೊಳ್ಳೆ ಹೋಟೆಲ್​ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ಟೂರ್ನಿಗೆ ಉಳಿದಿರೋ ನಾಲ್ಕೈದು ತಿಂಗಳಲ್ಲಿ ಎಲ್ಲವನ್ನೂ ರೆಡಿ ಮಾಡಬೇಕಾದ ಒತ್ತಡಕ್ಕೆ ಸಿಲುಕಿದೆ.

ಸದ್ಯ ಸ್ಟೇಡಿಯಂ ನವೀಕರಣ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತ ಬಾಂಗ್ಲಾದೇಶ ನಡುವೆ ನಡೆಯಬೇಕಿದ್ದ ಟೆಸ್ಟ್‌ ಸರಣಿಯ 2ನೇ ಪಂದ್ಯವನ್ನು ರಾವಲಪಿಂಡಿ ಸ್ಟೇಡಿಯಂಗೆ ಪಿಸಿಬಿ ಸ್ಥಳಾಂತರಿಸಿದೆ. ಪರಿಣಾಮ ಟೆಸ್ಟ್‌ ಸರಣಿಯ ಎರಡೂ ಪಂದ್ಯಗಳಿಗೆ ರಾವಲ್ಪಿಂಡಿ ಕ್ರಿಕೆಟ್‌ ಸ್ಟೇಡಿಯಂ ಆತಿಥ್ಯ ವಹಿಸುವಂತ್ತಾಗಿದೆ. ಕ್ರೀಡಾಂಗಣದ ದುರಸ್ಥಿಕರಣಕ್ಕೆ ಪಿಸಿಬಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಕ್ರೀಡಾಂಗಣಗಳ ಮರು ನಿರ್ಮಾಣದ ನೀಲಿ ನಕ್ಷೆಗೆ ಮೊಹ್ಸೀನ್‌ ನಖ್ವಿ ಈಗಾಗಗಲೇ ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಲಂಡನ್‌ ಮೂಲದ ಪ್ರಸಿದ್ಧ ಕಟ್ಟಡ ನಿರ್ಮಾಣ ಸಂಸ್ಥೆ ಬಿಡಿಪಿಗೆ ಈ ಕೆಲಸವನ್ನು ಪಿಸಿಬಿ ಒಪ್ಪಿಸಿದೆ.  ಎಲ್ಲವೂ ಅಂದುಕೊಂಡಂತೆ ಆದರೆ ಫೈನಲ್‌ ಪಂದ್ಯ ಲಾಹೋರ್‌ನ ಗದಾಫಿ ಕ್ರೀಡಾಂಗಣದಲ್ಲಿ ಆಯೋಜನೆ ಆಗಲಿದೆ ಎಂಬ ಆಶಾಭಾವವನ್ನು ಮೊಹ್ಸೀನ್‌ ನಖ್ವೀ ಹೊರಹಾಕಿದ್ದಾರೆ. ಪ್ರವಾಸಿ ತಂಡಗಳಿಗೆ ಕ್ರೀಡಾಂಗಣದ ಸಮೀಪವೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ನೂತನ ಹೋಟೆಲ್‌ ನಿರ್ಮಾಣಕ್ಕೆ ಸ್ಥಳ ಗೊತ್ತುಮಾಡಲಾಗಿದೆ ಎಂದು ಮೊಹ್ಸೀನ್‌ ನಖ್ವೀ ಮಾಹಿತಿ ನೀಡಿದ್ದಾರೆ. ಆದರೆ, ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಹೊತ್ತಿಗೆ ಹೋಟೆಲ್‌ ಸಂಪೂರ್ಣ ನಿರ್ಮಾಣಗೊಳ್ಳುವುದೇ? ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಪಿಸಿಬಿ ಕಟ್ಟಡ ದುರಸ್ಥಿಕರಣಕ್ಕೆ ಬರೋಬ್ಬರಿ 17 ಬಿಲಿಯನ್‌ ಡಾಲರ್‌ ಹಣ ಖರ್ಚು ಮಾಡುತ್ತಿದೆ. ಹಳೇ ಕ್ರೀಡಾಂಗಣ ಆದ ಕಾರಣಕ್ಕೆ ದುರಸ್ತೀಕರಣದ ಕೆಲಸ ಕಷ್ಟವಾಗಿದೆ. ಆದರೂ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಹೊತ್ತಿಗೆ ಎಲ್ಲ ಕೆಲಸಗಳು ಅಂತ್ಯಗೊಳ್ಳಲಿದೆ ಎಂಬ ವಿಶ್ವಾಸ ಹೊರಹಾಕಿದ್ದಾರೆ.

Shwetha M

Leave a Reply

Your email address will not be published. Required fields are marked *