IND Vs PAK ಕದನಕ್ಕೆ ಮುಹೂರ್ತ – ಪಾಕ್​ನಲ್ಲಿ ಚಾಂಪಿಯನ್ಸ್ ಟ್ರೋಫಿ ಫೈಟ್
16 ವರ್ಷ.. ವೈರಿ ದೇಶಕ್ಕೆ ಕಾಲಿಡ್ತಾರಾ?

IND Vs PAK ಕದನಕ್ಕೆ ಮುಹೂರ್ತ – ಪಾಕ್​ನಲ್ಲಿ ಚಾಂಪಿಯನ್ಸ್ ಟ್ರೋಫಿ ಫೈಟ್16 ವರ್ಷ.. ವೈರಿ ದೇಶಕ್ಕೆ ಕಾಲಿಡ್ತಾರಾ?

ಟಿ-20 ವಿಶ್ವಕಪ್​ನಲ್ಲಿ ಚಾಂಪಿಯನ್ ಆದ ಟೀಂ ಇಂಡಿಯಾ ಆಟಗಾರರಿಗೆ ಇಡೀ ಜಗತ್ತೇ ಶುಭ ಕೋರುತ್ತಿದೆ. ಟ್ರೋಫಿ ಗೆದ್ದು ತವರಿಗೆ ಮರಳಿರೋ ಮನೆ ಮಕ್ಕಳಿಗೆ ಅದ್ಧೂರಿ ಸ್ವಾಗತವೂ ಸಿಕ್ಕಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಭೇಟಿ ಮಾಡಿ ವಿಶ್ ಮಾಡಿದ್ದಾರೆ. ಹೀಗೆ ಟೀಂ ಇಂಡಿಯಾದ ವಿಜಯಯಾತ್ರೆ ನಡುವೆಯೇ ಮತ್ತೊಂದು ಮಹಾ ಕದನಕ್ಕೆ ಟೈಂ ಫಿಕ್ಸ್ ಆಗಿದೆ. ಅದೂ ಕೂಡ ಭಾರತ ವರ್ಸಸ್ ಪಾಕಿಸ್ತಾನ ಫೈಟ್​ಗೆ ಅನ್ನೋದೇ ವಿಶೇಷ. ಐಸಿಸಿ ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಸೆಣಸಾಟಕ್ಕೆ ಸಜ್ಜಾಗಿವೆ. ಹಾಗಾದ್ರೆ ಪಂದ್ಯ ಯಾವಾಗ ನಡೆಯುತ್ತೆ? ಎಲ್ಲಿ ನಡೆಯುತ್ತೆ? ಅನ್ನೋ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 17 ಆಟಗಾರರು, 60 ರೂಮ್‌ಗಳು ಬುಕ್ – ಶೋಕಿ ಪಾಕ್ ಟೀಮ್‌ಗೆ ಉಗಿದಿದ್ಯಾರು?

ಭಾರತ ಮತ್ತು ಪಾಕಿಸ್ತಾನ ನಡುವೆ ಮ್ಯಾಚ್ ಇದೆ ಅಂದ್ರೆ ಅದ್ರ ಲೆವೆಲ್ಲೇ ಬೇರೆ. ಐಸಿಸಿ ವಿಶ್ವಕಪ್​ಗಳ ಯಾವುದೇ ಫೈನಲ್ ಪಂದ್ಯಗಳಲ್ಲೂ ಆ ಮಟ್ಟಿಗೆ ಬಿಸಿ ಇರೋದಿಲ್ಲ. ಬದ್ಧವೈರಿಗಳ ಕದನ ನೋಡೋಕಂತ್ಲೇ ಇಡೀ ಕ್ರಿಕೆಟ್ ಜಗತ್ತೇ ಕಾದಿರುತ್ತೆ. ಉಭಯ ದೇಶಗಳ ಪಾಲಿಗೂ ಇದು ಪ್ರತಿಷ್ಠೆಯ ಹೋರಾಟ. ಫೈನಲ್​ವರೆಗೂ ಹೋಗ್ತೀವೋ ಇಲ್ವೋ ಅನ್ನೋದಕ್ಕಿಂತ ಒಬ್ಬರನ್ನೊಬ್ಬರು ಸೋಲಿಸಬೇಕು ಎಂಬ ಹಠದೊಂದಿಗೆ ಕಣಕ್ಕಿಳೀತಾರೆ. ಪಾಕಿಸ್ತಾನ ನಾವೇ ಗೆಲ್ಲೋದು ಅಂತಾ ಬಡಾಯಿ ಕೊಚ್ಚಿಕೊಂಡು ಮೈದಾನಕ್ಕೆ ಬಂದ್ರೆ ಭಾರತ ಗೆದ್ದು ತನ್ನ ತಾಕತ್ತನ್ನ ವಿನ್ನಿಂಗ್ ಮೂಲಕ ತೋರಿಸುತ್ತೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಎದುರು ಬದುರಾಗಿದ್ದ ಭಾರತ ಮತ್ತು ಪಾಕ್ ನಡುವಿನ ಕದನವೂ ರಣರೋಚಕವಾಗಿತ್ತು. ಪಾಕಿಗಳು ಇನ್ನೇನು ಗೆದ್ದೇ ಬಿಟ್ವಿ ಅಂತಾ ಸಂಭ್ರಮಿಸೋ ಹೊತ್ತಲ್ಲಿ ಟೀಂ ಇಂಡಿಯಾ ಟೈರರ್ಸ್ ಮುಟ್ಟಿ ನೋಡಿಕೊಳ್ಳುವಂಥ ಶಾಕ್ ಕೊಟ್ಟಿದ್ರು. ಇದು ಪಾಕ್ ಪ್ಲೇಯರ್ಸ್​ಗೆ ಹೊಸದೇನೂ ಅಲ್ಲ ಬಿಡಿ. ಭಾರತವನ್ನ ಸೋಲಿಸ್ತೇವೆ ಅಂತಾ ಬಿಲ್ಡಪ್ ಕೊಟ್ಕೊಂಡು ಬರೋ ಆಟಗಾರರು ಕೊನೆಗೆ ಹ್ಯಾಪ್ ಮೋರೆ ಹಾಕ್ಕೊಂಡು ಹೊರ ಹೋಗ್ತಾರೆ. ಇದೀಗ ಇಂಡಿಯಾ ಪಾಕ್ ನಡುವಿನ ಮತ್ತೊಂದು ಮಹಾ ಕದನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅದೂ ಕೂಡ ಪಾಕಿಸ್ತಾನದಲ್ಲೇ ಪಂದ್ಯ ನಡೆಯಲಿದೆ ಅನ್ನೋದೇ ಶಾಕಿಂಗ್ ವಿಚಾರ.

ಪಾಕ್ ಗೆ ತೆರಳುತ್ತಾ ಭಾರತ?  

2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಇಂಡೋ-ಪಾಕ್​ ತಂಡಗಳು ಮತ್ತೆ ಕಾದಾಟಕ್ಕೆ ಸಜ್ಜಾಗಿವೆ. ಈ ಟೂರ್ನಿಗೆ ಪಾಕಿಸ್ತಾನವೇ ಆತಿಥ್ಯ ವಹಿಸುತ್ತಿರೋದು ವಿಶೇಷ. ಸದ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿರುವ ರೋಹಿತ್​ ಮತ್ತು ಕೊಹ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋ-ಕೋ ಬ್ಯಾಟಿಂಗ್ ಐಕಾನ್​ಗಳಾಗಿ ಮುನ್ನಡೆಸಲಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025ರ ಕರಡು ವೇಳಾಪಟ್ಟಿಯನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಐಸಿಸಿಗೆ ಸಲ್ಲಿಸಿದೆ. ಈ ವೇಳಾಪಟ್ಟಿಯಂತೆ ಫೆಬ್ರವರಿ 19 ರಿಂದ ಟೂರ್ನಿ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಇನ್ನು ಮಾರ್ಚ್ 1 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿವೆ. ಅಲ್ಲದೆ ಈ ಪಂದ್ಯಕ್ಕೆ ಲಾಹೋರ್​ನ ಗಡ್ಡಾಫಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಆದ್ರೆ ಈ ಟೈಮ್​ ಟೇಬಲ್​ನಂತೆಯೇ ಮ್ಯಾಚ್ ನಡೀಬೇಕು ಅಂದ್ರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಓಕೆ ಹೇಳ್ಬೇಕು. ಯಾಕಂದ್ರೆ ಮುಂಬರುವ ಚಾಂಪಿಯನ್ಸ್​ ಟ್ರೋಫಿಯ ಆಯೋಜನೆಯ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೊಂದಿದೆ. ಅದರಂತೆ ಟೂರ್ನಿಯು ಪಾಕಿಸ್ತಾನದಲ್ಲಿ ಜರುಗಲಿದೆ. ಆದರೆ ಪಾಕ್​ನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದರೆ ಭಾರತ ತಂಡ ಭಾಗವಹಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುತ್ತಾ ಅನ್ನೋದೇ ಅನುಮಾನ. ಹೀಗಿದ್ರೂ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಚಾಂಪಿಯನ್ಸ್ ಟ್ರೋಫಿಗಾಗಿ ಸಿದ್ಧತೆಗಳನ್ನು ಶುರು ಮಾಡಿದ್ದು, ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ. ಈ ವೇಳಾಪಟ್ಟಿಯಂತೆ ಮಾರ್ಚ್ 1 ರಂದು ಭಾರತ ಮತ್ತು ಪಾಕಿಸ್ತಾನ್ ತಂಡಗಳೂ ಲಾಹೋರ್​ನಲ್ಲಿ ಮುಖಾಮುಖಿಯಾಗಲಿದೆ. ಚಾಂಪಿಯನ್ಸ್ ಟ್ರೋಫಿ ಕರಡು ಪ್ರಕಾರ, ಭಾರತ ತಂಡವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್​​ನೊಂದಿಗೆ ಎ ಗುಂಪಿನಲ್ಲಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನಲ್ಲಿವೆ. ಕರಡು ವೇಳಾಪಟ್ಟಿಯಲ್ಲಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮೂರು ಸ್ಟೇಡಿಯಂಗಳನ್ನು ಉಲ್ಲೇಖಿಸಿದೆ. ಅದರಂತೆ ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ನಡೆಯಲಿದೆ. ವಿಶೇಷ ಎಂದರೆ ಭಾರತ ತಂಡದ ಎಲ್ಲಾ ಪಂದ್ಯಗಳು ಲಾಹೋರ್​ನ ಗಡ್ಡಾಫಿ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ಪಂದ್ಯಗಳನ್ನು ಒಂದೇ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಿದ್ದು, ಈ ಮೂಲಕ ಟೀಮ್ ಇಂಡಿಯಾ ಆಟಗಾರರಿಗೆ ಎಲ್ಲಾ ರೀತಿಯ ಸುರಕ್ಷತೆಯನ್ನು ಒದಗಿಸಲು ಬದ್ಧ ಎಂದು ಐಸಿಸಿಗೆ ತಿಳಿಸಿದೆ. ಲಾಹೋರ್​ ನಗರವು ಭಾರತದ ಗಡಿಗೆ ಸಮೀಪದಲ್ಲಿದ್ದು, ಇದರಿಂದ ಭಾರತೀಯ ಅಭಿಮಾನಿಗಳ ಪ್ರಯಾಣಕ್ಕೂ ಅನುಕೂಲವಾಗಲಿದೆ. ಈ ಮೂಲಕ ಟೀಮ್ ಇಂಡಿಯಾ ಅಭಿಮಾನಿಗಳ ಪಾಕ್ ಪ್ರಯಾಣಕ್ಕೂ ಅನುಕೂಲ ಕಲ್ಪಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ ಮುಂದಾಗಿದೆ.

ಪಾಕಿಸ್ತಾನ ಏನೋ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ಮಾಡಿಕೊಳ್ತಿದೆ ನಿಜ. ಆದ್ರೆ ಪಾಕ್​ನಲ್ಲಿ ನಡೆಯೋ ಈ ಫೈಟ್​ಗೆ ಬಿಸಿಸಿಐ ಒಪ್ಪಿಗೆ ನೀಡಲಿದೆಯಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಈ ಹಿಂದೆ ಪಾಕ್​ನಲ್ಲಿ ನಡೆದ ಏಷ್ಯಾಕಪ್​ನಲ್ಲಿ ಭಾಗವಹಿಸಲು ಭಾರತ ಹಿಂದೇಟು ಹಾಕಿತ್ತು. ಹೀಗಾಗಿ ಟೀಮ್ ಇಂಡಿಯಾದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ ಈ ಸಲವೂ ಟೂರ್ನಿ ಪಾಕಿಸ್ತಾನದಲ್ಲೇ ನಡೆದರೂ, ಭಾರತ ತಂಡದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇ ನಲ್ಲಿ ಆಯೋಜಿಸಲು ಮನವಿ ಸಲ್ಲಿಸುವ ಸಾಧ್ಯತೆಗಳಿವೆ. ಸದ್ಯ ಕರಡು ವೇಳಾಪಟ್ಟಿ ಐಸಿಸಿ ಅಂಗಳದಲ್ಲಿದ್ದು, ಈ ವೇಳಾಪಟ್ಟಿಯ ಅನುಮೋದನೆಗಾಗಿ ಬಿಸಿಸಿಐಗೆ ಕಳುಹಿಸಿ ಕೊಡಲಿದೆ. ಇದಾದ ಬಳಿಕ ಬಿಸಿಸಿಐ ತನ್ನ ನಿರ್ಧಾರ ಪ್ರಕಟಿಸಲಿದೆ. ಭದ್ರತಾ ಕಾರಣಗಳಿಂದಾಗಿ ಭಾರತವು ಭಾಗವಹಿಸದಿದ್ದರೆ, ಆಗ ಏಷ್ಯಾ ಕಪ್​ನಂತೆ​ ಹೈಬ್ರಿಡ್ ಮಾದರಿಯ ಮೊರೆ ಹೋಗಬೇಕಿದೆ. ಹೀಗಾಗಿ ಭಾರತ ತಂಡ ಪಾಕ್​ನಲ್ಲಿ ಆಡಲಿದೆಯಾ ಅಥವಾ ಬಿಸಿಸಿಐ ಒತ್ತಾಯಕ್ಕೆ ಮಣಿದು ಟೂರ್ನಿ ಪಾಕ್​ ನಿಂದ ಶಿಫ್ಟ್​ ಆಗಲಿದೆಯಾ ಎನ್ನುವುದನ್ನು ಕಾದು ನೋಡಬೇಕು.

Shwetha M

Leave a Reply

Your email address will not be published. Required fields are marked *