ಶಾಲೆಗೆ ಎಂಟ್ರಿಕೊಟ್ಟ ಕರಡಿ.. – ಶಿಕ್ಷಕರ ಕೊಠಡಿಗೆ ನುಗ್ಗಿ ಆಹಾರ ಪದಾರ್ಥ ತಿಂದ ಜಾಂಬವಂತ!
ಅರಣ್ಯ ಭೂಮಿಯಲ್ಲಿ ಮನುಷ್ಯನ ಮಿತಿ ಮೀರಿದ ಹಸ್ತಕ್ಷೇಪದಿಂದ ಕಾಡುಗಳು ನಾಶವಾಗುತ್ತಿದೆ. ಇದರಿಂದಾಗಿ ಕಾಡು ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗಿ ನಾಡಿನ ಕಡೆ ಮುಖ ಮಾಡುತ್ತಿವೆ. ಹುಲಿ, ಚಿರತೆ, ಕರಡಿ ದಾಳಿ ಮುಂದುವರಿದಿದೆ. ಇದೀಗ ಚಾಮರಾಜನಗರದಲ್ಲಿ ಕರಡಿಯೊಂದು ಶಾಲೆಯಲ್ಲಿ ಪ್ರತ್ಯಕ್ಷಗೊಂಡಿದೆ. ಶಾಲೆಯ ಕೊಠಡಿಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ಹಾಕಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯ ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ – ಡಿಸೆಂಬರ್ 22ರಿಂದ 27ರವರೆಗೆ ಪ್ರವಾಸಿ ತಾಣಗಳಿಗೆ ನಿರ್ಬಂಧ
ಹೌದು, ಗಡಿ ನಾಡು ಜಿಲ್ಲೆಯಲ್ಲಿ ಕರಡಿ ದಾಳಿ ಮುಂದುವರಿದಿದೆ. ಇತ್ತೀಚೆಗೆ ಮೊಟ್ಟೆಗಳನ್ನು ತಿನ್ನುತ್ತಿದ್ದ ಕರಡಿಯನ್ನು ಸೆರೆ ಹಿಡಿದ ನಂತರ ಇದೀಗ ಮತ್ತೊಂದ ಕರಡಿ ಪ್ರತ್ಯಕ್ಷಗೊಂಡಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸಂದನಪಾಳ್ಯದಲ್ಲಿರುವ ಶಾಲೆಗೆ ನುಗ್ಗಿದ ಕರಡಿ, ಶಿಕ್ಷಕರ ವಿಶ್ರಾಂತಿ ಕೊಠಡಿಗೆ ಎಂಟ್ರಿಕೊಟ್ಟು ಆಹಾರ ಪದಾರ್ಥಗಳನ್ನು ತಿಂದು ಹೋಗಿದೆ.
ಗುರುವಾರ ಮಧ್ಯರಾತ್ರಿ ಸಂದನಪಾಳ್ಯದ ಸೇಂಟ್ ಆಂಟೋನಿಸ್ ಶಾಲೆಗೆ ನುಗ್ಗಿದ ಕರಡಿ, ಶಾಲೆಯ ಸ್ಟೋರ್ ರೂಮ್ ಹಾಗೂ ಶಿಕ್ಷಕರ ವಿಶ್ರಾಂತಿ ಕೋಣೆಗೆ ನುಗ್ಗಿ ಪೀಠೋಪಕರಣಗಳನ್ನು ಮುರಿದು ಆಹಾರ ಪದಾರ್ಥಗಳನ್ನು ತಿಂದು ಹಾಕಿದೆ. ರಾತ್ರಿ 1 ಗಂಟೆ ಸಮಯದಲ್ಲಿ ಶಿಕ್ಷಕರ ವಿಶ್ರಾಂತಿ ಕೊಠಡಿಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕರಡಿ ಬೀರುಬಾಗಿಲನ್ನು ಮುರಿದು ಅದರೊಳಗಿದ್ದ ಅಡುಗೆ ಎಣ್ಣೆ, ಬೆಲ್ಲ ಮುಂತಾದ ಪದಾರ್ಥಗಳನ್ನು ಭಕ್ಷಿಸಿದೆ. ಕೊಠಡಿ ಬಾಗಿಲು ಮುರಿದು ಕರಡಿ ಒಳನುಗ್ಗುತ್ತಿರುವ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶುಕ್ರವಾರ ಬೆಳಿಗ್ಗೆ ಮುಖ್ಯಶಿಕ್ಷಕ ಲೂಯಿಸ್ ನೇಸನ್ ಅವರು ಶಾಲೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕರಡಿ ದಾಳಿಯಿಂದ ಶಾಲಾ ಆಡಳಿತ ಮಂಡಳಿ ಆತಂಕಕ್ಕೊಳಗಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.