ಸೌಜನ್ಯ ಮನೆಗೆ ಭೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ – ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಪ್ರಸ್ತಾಪ

ಸೌಜನ್ಯ ಮನೆಗೆ ಭೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ – ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಪ್ರಸ್ತಾಪ

ಸುಮಾರು 11 ವರ್ಷಗಳ ಹಿಂದೆ ನಡೆದ ವಿದ್ಯಾರ್ಥಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇದೀಗ ಸೌಜನ್ಯಾ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗನ ಗೌಡ ಅವರು ಭೇಟಿ ನೀಡಿ, ಆಕೆಯ ಕುಟುಂಬದವರ ಜೊತೆ ಮಾತುಕತೆ ನಡೆಸಿದ್ದಾರೆ.

ವಿದ್ಯಾರ್ಥಿನಿ ಸೌಜನ್ಯ ತಂದೆ ಹಾಗೂ ತಾಯಿ ಕುಸುಮಾವತಿ, ಮಾವ ವಿಠಲ ಗೌಡ, ಸ್ಥಳೀಯ ಪೊಲೀಸರಿಂದ ಪ್ರಕರಣದ ಕುರಿತು ನಾಗನ ಗೌಡ ಮಾಹಿತಿ ಪಡೆದುಕೊಂಡಿದ್ದಾರೆ.  ಸೌಜನ್ಯ ಮೃತದೇಹ ಸಿಕ್ಕ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ರಷ್ಯಾದ ಲೂನಾ -25 ನೌಕೆ ಪತನ –  ಹಿರಿಯ ವಿಜ್ಞಾನಿ ಆಸ್ಪತ್ರೆಗೆ ದಾಖಲು

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗನ ಗೌಡ ಅವರು, ಅನ್ಯಾಯಕ್ಕೊಳಗಾದ ಕುಟುಂಬದ ಪರವಾಗಿ ನಿಲ್ಲುತ್ತೇವೆ. ಕಾನೂನು ಪ್ರಕಾರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆಯೋಗ ಸಿದ್ದ. ಈ ಪ್ರಕರಣದಲ್ಲಿ ಆಯೋಗ ಯಾವ ರೀತಿಯಾಗಿ ಕೆಲಸ ಮಾಡಬಹುದು, ಕಾನೂನು ಪ್ರಕಾರ ಯಾವ ರೀತಿಯಲ್ಲಿ ಮುಂದುವರಿಯಲು ಸಾಧ್ಯವಿದೆ ಎಂದು ಪರಿಶೀಲಿಸುತ್ತೇವೆ. ಪ್ರಕರಣದ ಸಮಗ್ರ ಮಾಹಿತಿ ತಿಳಿದುಕೊಂಡು, ಮುಖ್ಯಮಂತ್ರಿ ಅವರ ಗಮನ ಸೆಳೆಯುತ್ತೇವೆ’ ಎಂದು ಹೇಳಿದ್ದಾರೆ.

ಸೌಜನ್ಯಾ ಕುಟುಂಬದ ಯಾರಿಗಾದರೂ ಸರ್ಕಾರಿ ಉದ್ಯೋಗ ನೀಡಲು ಸಾಧ್ಯವಿದೆಯೇ ಎಂಬ ಬಗ್ಗೆಯೂ ಪರಿಶೀಲಿಸುತ್ತೇವೆ. ಈ ಮಾರ್ಗದಲ್ಲಿ ಬಸ್ ಗಳಿಲ್ಲದ ಕಾರಣ ಮಕ್ಕಳು ಶಾಲೆಗೆ ಹೋಗಲು ಸಂಕಷ್ಟ ಎದುರಿಸುತ್ತಿದ್ದಾರೆಂದು ಸೌಜನ್ಯ ಅವರ ಮನೆಯ ಸುತ್ತಮುತ್ತಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಸೌಜನ್ಯ ಅವರ ಮನೆ ಬಳಿಯೇ ಅಂಗನವಾಡಿ ಕೇಂದ್ರ ತೆರೆಯುವಂತೆಯೂ ಒತ್ತಾಯಿಸಿದ್ದಾರೆ. ಹೀಗಾಗಿ ಬಸ್‌ಗಳ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

suddiyaana