ಲೋಕಸಭೆ ಚುನಾವಣೆಗೆ ಕೇಂದ್ರ ನಾಯಕರು ಕರ್ನಾಟಕದಿಂದ ಸ್ಪರ್ಧೆ! – ಮೂವರು ನಾಯಕರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ?
ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದು ಎಲ್ಲಾ ಪಕ್ಷಗಳಲ್ಲೂ ತಂತ್ರಗಾರಿಕೆ ಶುರುವಾಗಿದೆ. ಈ ಬಾರಿಯೂ ದೇಶದಲ್ಲಿ ಮ್ಯಾಜಿಕ್ ಮಾಡೋಕೆ ಬಿಜೆಪಿ ಸರ್ವಸನ್ನದ್ಧವಾಗಿದೆ. ಅದ್ರಲ್ಲೂ ಕೇಂದ್ರ ನಾಯಕರನ್ನು ಕರ್ನಾಟಕದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿಸಲು ಭರ್ಜರಿ ವೇದಿಕೆ ಸಿದ್ಧ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು MP ಎಲೆಕ್ಷನ್ ಗೆ ಕರ್ನಾಟಕದಿಂದ ಸ್ಪರ್ಧಿಸಬಹುದು ಎನ್ನಲಾಗ್ತಿದೆ. ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ ಸಚಿವರು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾರನ್ನ ಕರ್ನಾಟಕದಿಂದಲೇ ಸಂಸತ್ತಿಗೆ ಕಳಿಸೋಕೆ ಕಾಂಗ್ರೆಸ್ ಕೂಡ ತಯಾರಿ ಮಾಡಿಕೊಂಡಿದೆ. ಹಾಗಾದ್ರೆ ಈ ಮೂವರು ನಾಯಕರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ಬೋದು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಯೇ ಬಿಜೆಪಿಗೆ ಕಗ್ಗಂಟು- ಭುಗಿಲೆದ್ದ ಅಸಮಾಧಾನ, ನಾಯಕರಿಗೆ ತಲೆನೋವು..!
ದೆಹಲಿ ಮೂಲದ ಜೈ ಶಂಕರ್ ಸದ್ಯ ಮೋದಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದಾರೆ. 1977ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಆಯ್ಕೆಯಾದ ಜೈ ಶಂಕರ್ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ದಶಕಗಳ ಕಾಲ ವಿದೇಶಗಳ ಜೊತೆ ಭಾರತದ ಸಂಬಂಧವನ್ನ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2019ರಲ್ಲಿ ಮೋದಿ ಎರಡನೇ ಬಾರಿಗೆ ಪ್ರಧಾನಿಯಾದ ಬಳಿಕ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವರಾಗಿ ನೇಮಿಸಲಾಗಿದೆ. ಪ್ರಸ್ತುತ ಚುನಾವಣಾ ಅಖಾಡಕ್ಕೆ ಇಳಿಯೋದಾಗಿ ಜೈಶಂಕರ್ ಹೇಳಿದ್ದು ಬಿಜೆಪಿ ಕ್ಷೇತ್ರದ ಹುಡುಕಾಟದಲ್ಲಿದೆ. ಕರ್ನಾಟಕದಿಂದ ಚುನಾವಣೆಗೆ ಇಳಿಸಲು ಚಿಂತನೆ ನಡೆಸಿದೆ. ಬೆಂಗಳೂರು ದಕ್ಷಿಣ ಅಥವಾ ಬೆಂಗಳೂರು ಉತ್ತರ ಕ್ಷೇತ್ರಗಳು ಜೈಶಂಕರ್ಗೆ ಸುರಕ್ಷಿತವಾಗಿರುತ್ತವೆ ಎಂದು ಬಿಜೆಪಿ ಭಾವಿಸಿದೆ. ಇದೇ ಕಾರಣಕ್ಕೆ ಜೈಶಂಕರ್ ಆಗಾಗ್ಗೆ ಬೆಂಗಳೂರಿಗೆ ಬರುತ್ತಿದ್ದಾರೆ. ವೈಯಕ್ತಿಕ ಒಡನಾಟ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ದಕ್ಷಿಣಕ್ಕೆ ಕರ್ನಾಟಕ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೆಸರೂ ಕೇಳಿಬರುತ್ತಿದೆ. ಮತ್ತೊಂದೆಡೆ ನಿರ್ಮಲಾ ಸೀತಾರಾಮನ್ ಕರಾವಳಿ ಕ್ಷೇತ್ರಕ್ಕೆ ಬರ್ತಾರೆ ಎಂಬ ಸುದ್ದಿ ಹರಿದಾಡ್ತಿದೆ. ಕೇಸರಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಕ್ಷೇತ್ರದಿಂದ ನಿರ್ಮಲಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.
ಬಿಜೆಪಿ ಭದ್ರಕೋಟಿಯಾಗಿರುವ ದಕ್ಷಿಣ ಕನ್ನಡ ಅಥವಾ ಉತ್ತರ ಕನ್ನಡ ಕ್ಷೇತ್ರದಿಂದ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ. ಹಿಂದುತ್ವದ ನೆಲೆ ಅಂತಾ ಕರೆಸಿಕೊಳ್ಳುವ ದಕ್ಷಿಣ ಕನ್ನಡದಲ್ಲಿ ಸದ್ಯ ನಳಿನ್ ಕುಮಾರ್ ಕಟೀಲ್ ಸಂಸದರಾಗಿದ್ದಾರೆ. ಆದರೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಲ್ಲೇ ಕಟೀಲು ಬಗ್ಗೆ ಭಿನ್ನಾಭಿಪ್ರಾಯವಿದೆ. ಮತ್ತೊಂದೆಡೆ ಅನಂತಕುಮಾರ್ ಹೆಗಡೆ ಪ್ರಸ್ತುತ ಸಂಸದರಾಗಿರುವ ಉತ್ತರ ಕನ್ನಡ ಬಿಜೆಪಿಯ ಭದ್ರಕೋಟೆಯಾಗಿದ್ದು, ಇಲ್ಲಿ ನಿರ್ಮಲಾ ಸೀತಾರಾಮನ್ ಸ್ಪರ್ಧಿಸುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಯಾರನ್ನೇ ನಿಲ್ಲಿಸಿದ್ರೂ ಗೆಲ್ಲುವ ಅವಕಾಶ ಇದೆ. ಆದ್ರೀಗ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಲೋಕಸಭಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇಬ್ಬರೂ ಒಂದೇ ಪಕ್ಷದಲ್ಲಿ ಇದ್ದರೂ ವಿರೋಧಿಗಳಾಗಿದ್ದಾರೆ. ಹೀಗಾಗಿ ಯಾರಿಗೆ ಟಿಕೆಟ್ ನೀಡಿದ್ರೂ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಬಿಜೆಪಿ ನಾಯಕರು ಗೆಲ್ಲುವ ಕ್ಷೇತ್ರವನ್ನು ಹಾಳುಮಾಡಿಕೊಳ್ಳಲು ಇಷ್ಟವಿಲ್ಲದೆ ಹೊಸಬರನ್ನ ಅಖಾಡಕ್ಕೆ ಇಳಿಸೋ ಸಾಧ್ಯತೆಗಳಿವೆ ಎನ್ನಲಾಗಿದೆ.
ನಿರ್ಮಲಾ ಸೀತಾರಾಮನ್ ವೈಯಕ್ತಿಕವಾಗಿಯೂ ಬಿಜೆಪಿಯಲ್ಲಿ ವರ್ಚಸ್ಸು ಹೊಂದಿದ್ದಾರೆ. 2008ರಲ್ಲಿ ರಾಜಕೀಯ ಪ್ರವೇಶಿಸಿದ ನಿರ್ಮಲಾ ಬಿಜೆಪಿ ಪಕ್ಷದ ವಕ್ತಾರರಾಗಿದ್ರು. ಆದ್ರೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದಲ್ಲಿ ಪ್ರಮುಖ ಕ್ಯಾಬಿನೆಟ್ ಖಾತೆಗಳನ್ನು ನೀಡಿದ್ದರು. ರಕ್ಷಣಾ ಸಚಿವೆಯಾಗಿ ಪ್ರಮುಖ ಹುದ್ದೆ ನಿಭಾಯಿಸಿದ ಎರಡನೇ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು. 2019ರ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಪೂರ್ಣಪ್ರಮಾಣದ ಹಣಕಾಸು ಸಚಿವೆಯಾಗಿ ಕಾರ್ಯನಿರ್ವಹಿಸಿದರು. ಅಲ್ಲದೇ ಬೃಹತ್ ಭಾರತ ದೇಶದ ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಹೀಗಾಗಿ ನಿರ್ಮಲಾ ಬಿಜೆಪಿ ಪಾಲಿಗೆ ಪ್ರಭಾವಿ ಮಹಿಳೆಯಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ನ ಬಲಿಷ್ಠ ನಾಯಕಿಯಾಗಿ ಬೆಳೆಯುತ್ತಿರುವ ಪ್ರಿಯಾಂಕಾ ಗಾಂಧಿ ಕೂಡ ಕರ್ನಾಟಕಕ್ಕೆ ಕಾಲಿಡೋ ಎಲ್ಲಾ ಸಾಧ್ಯತೆಗಳಿವೆ.
ಕರ್ನಾಟಕದ ಕ್ಷೇತ್ರದಿಂದಲೇ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಶುರುವಾಗಿದೆ. ರಾಜ್ಯಮಟ್ಟದ ನಾಯಕರಿಗೆ ತಿಳಿಸದೇ ಎಐಸಿಸಿ ರಹಸ್ಯವಾಗಿ ಕರ್ನಾಟಕದ ಕೊಪ್ಪಳ ಮತ್ತು ತೆಲಂಗಾಣದ ಒಂದು ಲೋಕಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದೆ ಎನ್ನಲಾಗಿದೆ. ಇದಕ್ಕೆ ಕಾರಣವೂ ಇದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾಗದಲ್ಲಿ ಕಾಂಗ್ರೆಸ್ ಇನ್ನೂ ಗಟ್ಟಿಯಾಗಿದೆ. ಸದ್ಯ ಕರ್ನಾಟಕ, ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದರೆ ತಮಿಳುನಾಡು, ಕೇರಳದಲ್ಲಿ ಲೋಕಸಭಾ ಚುನಾವಣೆಗೆ ಮೈತ್ರಿಮಾಡಿಕೊಂಡಿದೆ. ಹೀಗಾಗಿ ದಕ್ಷಿಣ ಭಾಗದಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಅನುಕೂಲ ಎಂದು ರಾಜ್ಯ ನಾಯಕರು ಹೇಳಿಕೆ ನೀಡಿದ್ದರು. ಇದಕ್ಕೆ ಪೂರಕ ಎಂಬಂತೆ ಎಐಸಿಸಿ ಕೊಪ್ಪಳ ಕ್ಷೇತ್ರದಲ್ಲಿ ರಹಸ್ಯವಾಗಿ ಸಮೀಕ್ಷೆ ನಡೆಸಿದೆ.
ಕೊಪ್ಪಳದಲ್ಲಿ ಪ್ರಿಯಾಂಕಾ ಸ್ಪರ್ಧಿಸಿದ್ರೆ ಗೆಲ್ಲಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ನದ್ದು. ರಾಯಚೂರು ಜಿಲ್ಲೆಯ 2, ಬಳ್ಳಾರಿ ಜಿಲ್ಲೆಯ 1 ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಒಟ್ಟು 8 ವಿಧಾನಸಭಾ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 8ರ ಪೈಕಿ 6 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ ಒಂದು ಕ್ಷೇತ್ರದಲ್ಲಿ ಬಿಜೆಪಿ ಇನ್ನೊಂದು ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಶಾಸಕರಾಗಿದ್ದಾರೆ. ಸಾಮಾಜಿಕ ಸ್ಥಿತಿಗತಿ ರಾಜಕೀಯ ಚಿತ್ರಣ ಹಾಗೂ ಜಾತಿ ಲೆಕ್ಕಾಚಾರ ಎಲ್ಲವನ್ನೂ ಒಳಗೊಂಡಂತೆ ಸರ್ವೆ ಮಾಡಲಾಗಿದೆ. ಅದೆಲ್ಲಾ ಏನೇ ಇದ್ರೂ ಕೇಂದ್ರದ ನಾಯಕರು ಕರ್ನಾಟಕದತ್ತ ವಲಸೆ ಬರ್ತಿರೋದು ಭಾರೀ ಕುತೂಹಲ ಮೂಡಿಸಿದೆ.