ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ನಿರಾಕರಣೆ – ʼಮೋದಿ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆʼ ಎಂದ ಕಾಂಗ್ರೆಸ್
ಬೆಂಗಳೂರು: ಜುಲೈ 1 ರಿಂದ ಪ್ರತಿಯೊಬ್ಬ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಹೆಚ್ಚುವರಿ 5 ಕೆ.ಜಿ. ಸೇರಿ ತಲಾ 10 ಕೆ.ಜಿ. ಅಕ್ಕಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ವಿತರಣೆಗೆ ಪೂರಕವಾಗಿ 15 ದಿನದೊಳಗಾಗಿ 2.28 ಲಕ್ಷ ಟನ್ ಹೆಚ್ಚುವರಿ ಅಕ್ಕಿಯನ್ನು ಕರ್ನಾಟಕ ರಾಜ್ಯಕ್ಕೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದ ಭಾರತೀಯ ಆಹಾರ ನಿಗಮವು, ಮರು ದಿನವೇ ಕೇಂದ್ರದ ಸೂಚನೆ ಮೇರೆಗೆ ಅಕ್ಕಿ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಬಗ್ಗೆ ಕಾಂಗ್ರೆಸ್ ಕಿಡಿಕಾರಿದೆ.
ಇದನ್ನೂ ಓದಿ: ಅಕ್ಕಿ ಕೊಡುತ್ತೇವೆಂದು ಒಪ್ಪಿ ಕೈ ಕೊಟ್ಟ ಕೇಂದ್ರ – ಜುಲೈ 1 ರಿಂದ ‘ಅನ್ನಭಾಗ್ಯ’ ಜಾರಿ ಡೌಟ್!
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಸ್ಪಷ್ಟವಾಗಿ ಆಹಾರ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. 7 ಲಕ್ಷ ಟನ್ ಅಕ್ಕಿ ಸಂಗ್ರಹವಿದ್ದರೂ ರಾಜ್ಯಗಳಿಗೆ FCI ಅಕ್ಕಿ ಮಾರಾಟ ಮಾಡುವುದನ್ನು ನಿರಾಕರಿಸುವ ಮೂಲಕ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಮೋದಿ. ಖಾಸಗಿಯವರಿಗೆ ಮಾರಾಟ ಮಾಡುವ ಅವಕಾಶವಿರುವಾಗ ರಾಜ್ಯ ಸರ್ಕಾರಕ್ಕೆ ಏಕೆ ಈ ನಿರಾಕರಣೆ. ಇದು ದುರುದ್ದೇಶವಲ್ಲದೆ ಇನ್ನೇನು? ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ಸ್ಪಷ್ಟವಾಗಿ ಆಹಾರ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುತ್ತಿದೆ.
7 ಲಕ್ಷ ಟನ್ ಅಕ್ಕಿ ಸಂಗ್ರಹವಿದ್ದರೂ ರಾಜ್ಯಗಳಿಗೆ FCI ಅಕ್ಕಿ ಮಾರಾಟ ಮಾಡುವುದನ್ನು ನಿರಾಕರಿಸುವ ಮೂಲಕ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಮೋದಿ.
ಖಾಸಗಿಯವರಿಗೆ ಮಾರಾಟ ಮಾಡುವ ಅವಕಾಶವಿರುವಾಗ ರಾಜ್ಯ ಸರ್ಕಾರಕ್ಕೆ ಏಕೆ ಈ ನಿರಾಕರಣೆ.
ಇದು…
— Karnataka Congress (@INCKarnataka) June 15, 2023
ಇನ್ನು ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿದ್ದು, ಅಕ್ಕಿ ಬೆಳೆಯುವ ರಾಜ್ಯಗಳಾದ ಪಂಜಾಬ್, ತೆಲಂಗಾಣ, ಆಂಧ್ರ, ಛತ್ತಿಸ್‍ಗಡ್, ಹರಿಯಾಣದವರ ಜತೆ ಈಗಾಗಲೇ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಅಕ್ಕಿ ಸಂಗ್ರಹವಿಲ್ಲದಿರುವುದರಿಂದ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದಿದ್ದಾರೆ. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಛತ್ತೀಸ್‌ಗಢ ರಾಜ್ಯದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಲಭಿಸಲಿದೆ. ಅನ್ನಭಾಗ್ಯ ಯೋಜನೆ ಕುರಿತು ಸಂಜೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.
ಕೇಂದ್ರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡು ಕನ್ನಡಿಗರ ಪಾಲನ್ನು, ಬಡವರ ಪಾಲನ್ನು ಕಸಿದುಕೊಂಡಿದೆ. ಕೇಂದ್ರ ಸರ್ಕಾರ ಕನ್ನಡಿಗರ, ಬಡವರ ವಿರೋಧಿ ಎನ್ನುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಒಂದು ಗ್ಯಾರಂಟಿಯನ್ನು ಜಾರಿಮಾಡಿದ್ದು, ಜುಲೈ 1ರಂದು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಮಂಡಳಿ ಉಪ ಪ್ರಧಾನ ವ್ಯವಸ್ಥಾಪಕರಿಗೆ 2.28 ಲಕ್ಷ ಮೆ.ಟನ್ ಅಗತ್ಯವಿದೆ ಎಂದು ಕೋರಿ ಜೂನ್ 9ರಂದು ಪತ್ರ ಬರೆಯಲಾಗಿತ್ತು.