ವಿಶ್ವದೆಲ್ಲೆಡೆ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ – ಏಸುವಿನ ಜನ್ಮಸ್ಥಳದಲ್ಲಿ ಮಾತ್ರ ಸ್ಮಶಾನ ಮೌನ!

ವಿಶ್ವದೆಲ್ಲೆಡೆ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ – ಏಸುವಿನ ಜನ್ಮಸ್ಥಳದಲ್ಲಿ ಮಾತ್ರ ಸ್ಮಶಾನ ಮೌನ!

ವಿಶ್ವದಾದ್ಯಂತ ಕ್ರಿಸ್‌ಮಸ್‌ ಸಂಭ್ರಮ ಮನೆ ಮಾಡಿದೆ. ಕ್ರಿಶ್ಚಿಯನ್ ಸಮುದಾಯದ ಜನರು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಚರ್ಚ್‌ಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದರ ಜೊತೆ ಮನೆಯಲ್ಲಿ ಹಬ್ಬದಡುಗೆ ಮಾಡಿ ಸಂಭ್ರಮಿಸುತ್ತಿದ್ದಾರೆ. ಆದ್ರೆ ವಿಪರ್ಯಾಸ ಏನಂದ್ರೆ ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಏಸುವಿನ ಜನ್ಮಸ್ಥಳದಲ್ಲಿ ಮಾತ್ರ ಕ್ರಿಸ್‌ಮಸ್‌ ಹಬ್ಬದ ಯಾವುದೇ ಸಂಭ್ರಮವಿಲ್ಲ. ಹಬ್ಬದ ಸಂಭ್ರಮ ಇರಬೇಕಾದಲ್ಲಿ ಸ್ಮಶಾನ ಮೌನ ಆವರಿಸಿದೆ.

ಹೌದು, ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಏಸು ಕ್ರಿಸ್ತ ಹುಟ್ಟಿದ್ದು ಪ್ಯಾಲೇಸ್ತೇನ್‌ನ ಬೆತ್ಲೆಹೆಮ್ ನಲ್ಲಿ. ಇಲ್ಲಿ ಅತ್ಯಂತ ಸಂಭ್ರಮದಿಂದ ಕ್ರಿಸ್‌ ಮಸ್‌ ಆಚರಿಸಬೇಕಿತ್ತು. ವಿಪರ್ಯಾಸ ಅಂದ್ರೆ ಶಾಂತಿಯ ಸಂದೇಶ ನೀಡಿದ ಏಸುವಿನ ಜನ್ಮಭೂಮಿ ಬೆಂಕಿಯುಂಡೆಯ ಕೆಂಡದಂತಾಗಿದೆ. ಪ್ಯಾಲೇಸ್ತೇನ್‌ನ ಬೆತ್ಲೆಹೆಮ್ ನಲ್ಲಿ ಇಸ್ರೇಲ್ ಹಮಾಸ್ ಯುದ್ಧದಿಂದಾಗಿ ಸ್ಮಶಾನ ಮೌನ ಆವರಿಸಿದೆ. ಆ ಪ್ರದೇಶ ಇಂದು ಯಾವುದೇ ಹಬ್ಬದ ಸಂಭ್ರಮವಿಲ್ಲದೇ ಬಿಕೋ ಎನ್ನುತ್ತಿದೆ.

ಇದನ್ನೂ ಓದಿ: ಮಧ್ಯಗಾಜಾದಲ್ಲಿ ಇಸ್ರೇಲ್‌ ಸೇನೆಯಿಂದ ವೈಮಾನಿಕ ದಾಳಿ – 68 ಪ್ಯಾಲೆಸ್ಟೀನಿಯನ್ನರು ಸಾವು!

ಹೌದು, ಪ್ರತಿವರ್ಷ ಕ್ರಿಸ್‌ಮಸ್‌ ಹಬ್ಬದಂದು ಜಗತ್ತಿನ ವಿವಿಧೆಡೆಯಿಂದ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಿದ್ದರು. ಜನರ ಸೇರುವಿಕೆಯಿಂದಾಗಿ ಈ ಪ್ರದೇಶ ಕಳೆಕಟ್ಟಿರುತ್ತಿತ್ತು. ಆದರೆ ಈ ಬಾರಿ ನಡೆದ, ನಡೆಯುತ್ತಲೇ ಇರುವ ಇಸ್ರೇಲ್ ಹಮಾಸ್ ಯುದ್ಧ ಪ್ರವಾಸಿಗರನ್ನು ಇತ್ತ ಬಾರದಂತೆ ತಡೆದಿದೆ. ಅಷ್ಟೇ ಅಲ್ಲದೇ ಅಲ್ಲಿನ ಸ್ಥಳೀಯರು ಕೂಡ ಹಬ್ಬ ಆಚರಿಸದಂತಾಗಿದೆ.

ಕ್ರಿಶ್ಚಿಯನ್ನರು ಏಸುಕ್ರಿಸ್ತನ ಜನ್ಮಸ್ಥಾನ ಎಂದು ನಂಬಿರುವ ಈ ಪ್ಯಾಲೇಸ್ತೇನ್ ನಗರ ಬೆತ್ಲಹೆಮ್ ವೆಸ್ಟ್‌ಬ್ಯಾಂಕ್‌ನಲ್ಲಿದ್ದು, ಇಸ್ರೇಲಿಗರ ಹಿಡಿತದಲ್ಲಿದೆ. ಪ್ರಸ್ತುತ ಯುದ್ಧದಿಂದಾಗಿ ಇಲ್ಲಿನ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು, ಅಂಗಡಿಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ಆಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ ನಂತರ ಈ ಯುದ್ಧ ಆರಂಭವಾಗಿತ್ತು.  ಈ ಯುದ್ಧದ ನಂತರ ಇಲ್ಲಿಗೆ ಯಾರೊಬ್ಬರೂ ಕೂಡ ಹೋಗುತ್ತಿಲ್ಲ. ಹೀಗಾಗಿ ಏಸುವಿನ ಜನ್ಮ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿದೆ.

ಜೆರುಸಲೆಮ್‌ನ ದಕ್ಷಿಣ ಭಾಗದಲ್ಲಿರುವ ಬೆತ್ಲೆಹೆಮ್ ಪ್ರಪಂಚದೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಇದು ಇಲ್ಲಿನ ಜನರ ಆದಾಯ ಹೆಚ್ಚಿಸುತ್ತಿತ್ತು. ಇಲ್ಲಿರುವ ಚರ್ಚ್ ಆಫ್ ನೆಟಿವಿಟಿಯನ್ನು ಜೀಸಸ್ ಜನಿಸಿದ ಸ್ಥಳವೆಂದೇ ಪ್ರಪಂಚದೆಲ್ಲೆಡೆಯ ಜನ ನಂಬುತ್ತಾರೆ. ಆಕ್ಟೋಬರ್ 7ಕ್ಕೂ ಮೊದಲು ನಮ್ಮ ಹೊಟೇಲ್ ಕ್ರಿಸ್‌ಮಸ್‌ ಆಚರಣೆಗಾಗಿ ಬರುವ ಪ್ರವಾಸಿಗರಿಂದಲೇ ಫುಲ್ ಬುಕ್ಕಿಂಗ್ ಆಗಿತ್ತು. ಹೀಗಾಗಿ ನಗರದ ಸಮೀಪದಲ್ಲೇ ಇರುವ ಕೊಠಡಿಗಳನ್ನು ಕೂಡ ಪ್ರವಾಸಿಗರಿಗಾಗಿ ಅವರು ಹುಡುಕಾಡುತ್ತಿದ್ದರು. ಆದರೆ ಯಾವಾಗ ಯುದ್ಧ ಆರಂಭವಾಯ್ತೋ ಅವಾಗಿನಿಂದ ಎಲ್ಲರೂ ತಮ್ಮ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಮುಂದಿನ ವರ್ಷಕ್ಕೆ ಬುಕ್ ಮಾಡಿಕೊಂಡವರು ಕೂಡ ತಮ್ಮ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

Shwetha M