ಕರ್ನಾಟಕಕ್ಕೆ 50 ರ ಸಂಭ್ರಮ – ವರ್ಷಪೂರ್ತಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನ!

ಕರ್ನಾಟಕಕ್ಕೆ 50 ರ ಸಂಭ್ರಮ – ವರ್ಷಪೂರ್ತಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನ!

ಬೆಂಗಳೂರು: ನ.1 ರಂದು ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಈ ವರ್ಷ ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡು ನ.1ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ.  ವೈವಿಧ್ಯಮಯ ನಾಡಹಬ್ಬ ವರ್ಷಪೂರ್ತಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ಬಗ್ಗೆ ಕನ್ನಡ  ಮತ್ತು ಸಂಸ್ಕೃತಿ ‌ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಈ ವರ್ಷದ ನವೆಂಬರ್ 1ರಿಂದ‌ ಮುಂದಿನ‌ ವರ್ಷ 2024ರ ನವೆಂಬರ್ 30ರ ವರೆಗೆ ಕರ್ನಾಟಕದ‌ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: http://ರಾಜ್ಯೋತ್ಸವದಂದು ಕನ್ನಡದ 5 ಗೀತೆಗಳ ಗಾಯನ ಕಡ್ಡಾಯ – ರಾಜ್ಯ ಸರ್ಕಾರ ಆದೇಶ!

ನವೆಂಬರ್ 1ರಂದು ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕನ್ನಡ ಧ್ವಜಾರೋಹಣ ನೆರವೇರಿಕೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಶಾಸಕರು ಕನ್ನಡ ಧ್ವಜ ವಂದನೆ ನೆರವೇರಿಸಲಿದ್ದಾರೆ. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಸಂಭ್ರಮ ಸಡಗರದಿಂದ ನಾಡಧ್ವಜದ ಧ್ವಜಾರೋಹಣ ಕಾರ್ಯಕ್ರಮ ನಡೆಸುವುದು. ನಾಡಿನ ಎಲ್ಲ ಕನ್ನಡಿಗರು, ಕನ್ನಡ ಮನಸ್ಸುಗಳು, ಕನ್ನಡ ಪರ ಹೋರಾಟಗಾರರು ಈ ಸಂಭ್ರಮದಲ್ಲಿ ತೊಡಗುವಂತಾಗಬೇಕು ಎಂದು ತಿಳಿಸಿದರು.

ನವೆಂಬರ್ 1ರಂದು ರಾಜ್ಯದ ಎಲ್ಲ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಕರ್ನಾಟಕ ಸಂಭ್ರಮ-50 : ಉಸಿರಾಯಿತು ಕರ್ನಾಟಕ ಹೆಸರಾಗಲಿ ಕನ್ನಡ ಎನ್ನುವ ಘೋಷ ವಾಕ್ಯವನ್ನು ನಮ್ಮ ತಾಯಂದಿರು ಹಾಗೂ ಸಹೋದರಿಯರು ಬರೆಯಬೇಕು. ನವೆಂಬರ್ 1ರ ಬೆಳಗ್ಗೆ 9 ಗಂಟೆಗೆ ಎಲ್ಲಾ ರೆಡಿಯೋಗಳಲ್ಲಿ ನಾಡಗೀತೆ ಮೊಳಗಲಿದೆ. ರಾಷ್ಟ್ರಗೀತೆಗೆ ಗೌರವ ಸಮರ್ಪಿಸುವ ಹಾಗೆ ಎಲ್ಲರೂ ಎದ್ದು ನಿಂತು ನಾಡಗೀತೆಗೆ ಗೌರವ ಸಮರ್ಪಣೆ ಮಾಡಬೇಕು. ನವೆಂಬರ್ 1ರ ಸಂಜೆ 5 ಗಂಟೆಗೆ ನಿಮ್ಮ- ನಿಮ್ಮ ಊರುಗಳ ಮೈದಾನಗಳಲ್ಲಿ ಕೆಂಪು- ಹಳದಿ ಬಣ್ಣದ ಗಾಳಿಪಟಗಳನ್ನು ಬಾನೆತ್ತರಕ್ಕೆ ಹಾರಿಸಿ. ಈ ಗಾಳಿಪಟ ಉತ್ಸವದ ಮೂಲಕ ನಮ್ಮ ಸುವರ್ಣ ಸಂಭ್ರಮವನ್ನು ಜಗತ್ತಿಗೆ ಸಾರಿ ಹೇಳಲಾಗುವುದು. ನವೆಂಬರ್ 1ರ ರಾತ್ರಿ ಏಳು ಗಂಟೆಗೆ ಪ್ರತಿಯೊಬ್ಬರ ಮನೆ, ಕಚೇರಿ, ಅಂಗಡಿ ಮಳಿಗೆಗಳ ಮುಂದೆ ಹಣತೆಯಲ್ಲಿ ಕನ್ನಡ ಜ್ಯೋತಿ ಬೆಳಗಿಸಲಾಗುವುದು ಎಂದರು.

ಸಂಭ್ರಮದ‌ ಪ್ರಯುಕ್ತ ಭವ್ಯ ಕರ್ನಾಟಕ ರಥಯಾತ್ರೆಯನ್ನು ಇಡೀ ವರ್ಷ ಪೂರ್ತಿ ನಾಡಿನ‌ ಉದ್ದಗಲ ಸಂಚರಿಸುವಂತೆ ಯೋಜನೆ ರೂಪಿಸಲಾಗಿದೆ. ಕರ್ನಾಟಕ ಏಕೀಕಕರಣದ ವಿಷಯ, ಸಾಹಿತ್ಯ, ಸಾಧನೆಗಳ ಪಥ, ಐತಿಹಾಸಿಕ ನೆಲೆಗಳ ಮಾಹಿತಿ, ಕನ್ನಡ ಜ್ಯೋತಿ, ಭುವನೇಶ್ವರಿ ಪ್ರತಿಮೆ ಸಹಿತ ಕರ್ನಾಟಕದ ಎಲ್ಲಾ 31 ಜಿಲ್ಲೆಗಳ ಪರಿಚಯ ಮಾಡಿಕೊಡುವ ವಿಶೇಷ ಕರ್ನಾಟಕ ಪಾರಂಪರಿಕ ರಥಯಾತ್ರೆ ಎಲ್ಲಾ 31 ಜಿಲ್ಲೆಗಳ ಸಹಿತ ಎಲ್ಲಾ ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರ ಹಾಗೂ ಮತ್ತು ಎಲ್ಲ ಗ್ರಾಮಗಳಲ್ಲೂ ಪರ್ಯಾಟನೆ ನಡೆಸಲಿದೆ. ಇದಕ್ಕೆ‌‌ ಸಂಬಂಧಿಸಿದ ರೂಟ್ ಮ್ಯಾಪ್ ಕೂಡ ಸಿದ್ಧಪಡಿಸಿದ್ದು, ಅದರಂತೆ ರಥಯಾತ್ರೆ ಹಾಗೂ ಜ್ಯೋತಿ ಸಾಗಲಿದೆ. ಅಲ್ಲದೆ, ರಾಜ್ಯಾದ್ಯಂತ ಎಲ್ಲಾ‌ ಶಾಲಾ- ಕಾಲೇಜುಗಳಲ್ಲಿ ನನ್ನ ಭಾಷೆ, ನನ್ನ ಹಾಡು ಪ್ರಬಂಧ ಸ್ಪರ್ಧೆ, ರಸ ಪ್ರಶ್ನೆ‌ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸುವುದು. ರಾಜ್ಯದ ಪ್ರತಿ ಶಾಲೆಗಳು, ವಲಯಮಟ್ಟ, ತಾಲ್ಲೂಕು ಮಟ್ಟ, ಜಿಲ್ಲಾ‌ ಮಟ್ಟ, ನಾಲ್ಕು ಕಂದಾಯ ವಿಭಾಗಗಳು ಮತ್ತು ರಾಜ್ಯ ಮಟ್ಟದಲ್ಲಿ‌ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.

Shwetha M